ಸುವರ್ಣಸೌಧ (ಬೆಳಗಾವಿ): ಸುವರ್ಣಸೌಧದಲ್ಲಿ ಚರ್ಚೆ ಮಾಡುವುದಿದ್ದರೆ ಮಾತ್ರ ಅಧಿವೇಶನ ಕರೆಯಿರಿ. ಜಾತ್ರೆ ಮಾಡಲು ಈ ರೀತಿ ಅಧಿವೇಶನ ಕರೆಯಬೇಡಿ. ತುಂಬಾ ನೋವಿನಿಂದ ಅಧಿವೇಶನ ಮುಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸುವರ್ಣಸೌಧ ಕೇವಲ 10-15 ದಿನಗಳ ಅಧಿವೇಶನಕ್ಕೆ ಸೀಮಿತವಾಗಿದೆ. ಇಲ್ಲಿ ಇಲಾಖೆಗಳು ಬರಬೇಕು. ಸುವರ್ಣ ಸೌಧದ ಪ್ರಯೋಜನ ಪಡೆಯುವಂತಾಗಬೇಕು. ಸದನ ಜಾತ್ರೆ ಆಗಬಾರದು ಎಂದರು.
ಇಂದು ಕೊನೆಯ ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರೂ, ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ಮಾಡಿದರು. ಕೃಷ್ಣಬೈರೇಗೌಡ ಅವರು ಬೊಬ್ಬೆ ಹಾಕ್ತಿದರು. ಕಾಂಗ್ರೆಸ್ ನವರು ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಸಹಕಾರ ನೀಡಲಿಲ್ಲ. ಕೊನೆಯ ಎರಡು ದಿನ ಉತ್ತರ ಕರ್ನಾಟಕ ಚರ್ಚೆ ಇಟ್ಟುಕೊಂಡಿದ್ದೆ ತಪ್ಪು. ಆರಂಭದ ದಿನಗಳಲ್ಲಿ ಆದ್ಯತೆ ಮೇರೆಗೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಕಳಕಳಿ ಇದ್ದಿದ್ದರೆ ಮೊದಲೇ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಸಿಎಂ ಬೊಮ್ಮಾಯಿ ಅವರು ಮೊದಲ ಐದು ದಿನಗಳು ಈ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಡಿ ಎಂದು ಹೇಳಬೇಕಿತ್ತು ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ:ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ
ಇದೇ ರೀತಿ ಆದರೆ ಸುವರ್ಣ ಸೌಧವು ಗೋಲ್ ಗುಂಬಜ್ ರೀತಿ ಒಂದು ಪ್ರವಾಸಿ ತಾಣವಾಗಲಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಇಲ್ಲಿ ಅಧಿವೇಶನ ನಡೆಸುವುದಾದರೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ನಾವು ಅಧಿವೇಶನ ನಡೆಸಲು ಬಿಡುವುದಿಲ್ಲ. ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದರು.