ಕಲಬುರಗಿ: ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಆತ್ಮಗೌರವಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವುದಾಗಿ ಹೇಳಿರುವುದನ್ನು ಒಪ್ಪಿಕೊಂಡಿರುವ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಕ್ಕೆ ಕ್ಷಮೆಯಾಚಿಸಿಲ್ಲ ಎಂದು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಳಂದ ಕ್ಷೇತ್ರದ ಶಾಸಕ ಪಾಟೀಲ್ “ನಾನು ಮಾಧ್ಯಮಗಳು ಮತ್ತು ಪತ್ರಿಕೆಗಳ ವರದಿಗಳನ್ನು ನೋಡಿದ್ದೇನೆ. ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ನಾನಂತೂ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳಲು ನಾವೇನು ಯಾವುದೇ ಅಪರಾಧ ಮಾಡಿದ್ದೇವೆಯೇ? ದೊಡ್ಡ ತಪ್ಪು ಮಾಡಿದ್ದೇವೆಯೇ? ” ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
”ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ, ಶಾಸಕಾಂಗ ಪಕ್ಷದ ಸಭೆಗೆ ಮನವಿ ಮಾಡುವ ಹಕ್ಕು ನಮಗಿದೆ. ಅದರಂತೆ, ನಾಯಕರು ಸಭೆಗೆ ಕರೆದಿದ್ದರು. ಸಭೆಯಲ್ಲಿ ಮುಕ್ತ ಮತ್ತು ವಿವರವಾದ ಚರ್ಚೆ ನಡೆಯಿತು ಮತ್ತು ನಾನು ತೃಪ್ತನಾಗಿದ್ದೇನೆ, ಆದರೆ ಕ್ಷಮೆ ಕೇಳಲು ನಾನು ಹೇಡಿಯಲ್ಲ. ನಾನು ಯಾವುದೇ ತಪ್ಪು ಮಾಡಿದ್ದರೆ ಮಾತ್ರ ಕ್ಷಮೆಯಾಚಿಸುತ್ತೇನೆ, ”ಎಂದು ಹೇಳಿದ್ದಾರೆ.
ಗುರುವಾರ ಸಂಜೆ ನಡೆದ ಮಹತ್ವದ ಸಿಎಲ್‌ಪಿ ಸಭೆಯಲ್ಲಿ ಸುಮಾರು 30 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕತ್ವಕ್ಕೆ ಪತ್ರ ಬರೆದಿದ್ದಾರೆ ಎಂಬ ವರದಿಗಳಿವೆ.
ಕೆಲವು ಸಚಿವರ ವರ್ತನೆ ಮತ್ತು ನಡತೆ ಕೆಲ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದನ್ನು ಸರಿಪಡಿಸದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಪಾಟೀಲ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿತ್ತು.