ಚಿಂಚೋಳಿ: ಪುರಸಭೆ ವ್ಯಾಪ್ತಿಯ ಚಂದಾಪುರ-ಚಿಂಚೋಳಿ ಅವಳಿ ಪಟ್ಟಣದಲ್ಲಿರುವ ವಿವಿಧ ಕಾಲೋನಿಗಲ್ಲಿ ಮೂಲಸೌಕರ್ಯ ಅಭಿವೃದ್ಧಿಗೋಸ್ಕರ ಸರ್ಕಾರದಿಂದ 3ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.
ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪುರಸಭೆ ಚಿಂಚೋಳಿ ಮತ್ತು ಪೌರಾಡಳಿತ ಇಲಾಖೆಯಿಂದ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಅಡಿ ಸ್‌ಎಫ್‌ಸಿ ವಿಶೇಷ 3ಕೋಟಿ ರೂ. ಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿ ಆಗಬೇಕಿದೆ. ಪಟ್ಟಣದ ಮುಲ್ಲಾಮಾರಿ ನದಿ ಹತ್ತಿರ ಪಂಚಲಿಂಗೇಶ್ವರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬುಗ್ಗಿಯನ್ನು ನೋಡಿದ್ದೆ. ಅದನ್ನುಅಭಿವೃದ್ಧಿಪಡಿಸಲು, ಪ್ರವಾಸಿ ತಾಣ ಮಾಡಲು ಸರ್ಕಾರದಿಂದ 59.61ಲಕ್ಷ ರೂ. ಮಂಜೂರಿಗೊಳಿಸಿದ್ದೇನೆ. ಅದೀಗ ಪ್ರಗತಿಯಾಗುತ್ತಿದೆ ಎಂದರು.
ಪಟ್ಟಣದಲ್ಲಿರುವ ಬಡವರಿಗೋಸ್ಕರ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 400 ಮನೆಗಳು ಮಂಜೂರಿಯಾಗಿವೆ. ಅಧಿಕಾರಿಗಳು ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸಬೇಕು. ಪಟ್ಟಣದ ಅಭಿವೃದ್ಧಿಗೆ ಪಕ್ಷಭೇದ ಮೆರೆತು ಶ್ರಮಿಸೋಣ ಎಂದರು.
ಪುರಸಭೆ ಸದಸ್ಯ ಅಬ್ದುಲ್ಲ ಬಾಸೀತ್ ಮಾತನಾಡಿ, ಪುರಸಭೆಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕೆಲಸಗಳು ಅನುದಾನದ ಕೊರತೆಯಿಂದ ಸ್ಥಗಿತವಾಗಿವೆ. ಮುಲ್ಲಾಮಾರಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಕೆಲಸ ಸ್ಥಗಿತವಾಗಿದೆ. ಈದಗಾ ಮೈದಾನ ಹತ್ತಿರ ಬಡವರಿಗೋಸ್ಕರ ನೀಡಿದ ಮನೆಗಳ ಬಿಲ್ಲು ಪಾವತಿ ಆಗಿಲ್ಲ. ಕೂಡಲೇ ಸರ್ಕಾರದಿಂದ ಅನುದಾನ ಮಂಜೂರಿ ಮಾಡಬೇಕು ಎಂದು ಕೋರಿದರು.
ಇದನ್ನೂ ಓದಿ :ಮಲಯಾಳಂ ಚಲನಚಿತ್ರ “ಜಲ್ಲಿಕಟ್ಟು” ಗೆ ಕೈ ತಪ್ಪಿದ ಆಸ್ಕರ್
ತಾ.ಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷ ಸೈಯದ್ ಶಬ್ಬೀರ ಅಹೆಮದ್, ಎಇಇ ಗುರುರಾಜ ಜೋಶಿ,ಪುರಸಭೆ ಮುಖ್ಯಾಧಿ ಕಾರಿ ಲೋಹಿತ ಕಟ್ಟಿಮನಿ, ಜೆಇ ದೇವೇಂದ್ರಪ್ಪ ಕೋರವಾರ, ಜೆಇ ಗಿರಿರಾಜ ನಾಟಿಕಾರ, ಜಾವೇದ, ಸದಸ್ಯರಾದ ರೂಪಕಲಾ ಕಟ್ಟಿಮನಿ, ಸುಲೋಚನಾ ಕಟ್ಟಿ, ಜಗನ್ನಾಥ ಗುತ್ತೇದಾರ, ಶಿವಕುಮಾರ ಪೋಚಾಲಿ, ನಾಗೀಂದ್ರಪ್ಪ ಗುರಂಪಳ್ಳಿ, ಬಸವರಾಜ ಸಿರಸಿ, ಅನ್ವರ್ ಖತೀಬ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಸಂತೋಷ ಗಡಂತಿ, ಅಜೀತ ಪಾಟೀಲ, ಸತೀಶರೆಡ್ಡಿ ತಾಜಲಾಪುರ ಇನ್ನಿತರರಿದ್ದರು.