ಜೇವರ್ಗಿ: ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳ ಅವ್ಯವಸ್ಥೆಗೆ ಸಿಡಿಮಿಡಿಗೊಂಡ ಶಾಸಕ ಡಾ| ಅಜಯಸಿಂಗ್, ತಾಲೂಕು ಪ್ರಭಾರಿ ಸಮನ್ವಯಾಧಿಕಾರಿ ವ್ಹಿ.ಬಿ. ಹಿರೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ 19 ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ, ಉಪಾಹಾರ, ಮೂಲ ಸೌಕರ್ಯ ಸಿಗುತ್ತಿಲ್ಲ. ವಾರ್ಡನ್‌ಗಳು ನಿತ್ಯ ವಸತಿ ನಿಲಯಗಳಿಗೆ ಭೇಟಿ ನೀಡದೇ ನಿರ್ಲಕ್ಷ ವಹಿಸುತ್ತಿದ್ದಾರೆ. ಕೆಲವು ವಸತಿ ನಿಲಯಗಳು ಅವ್ಯವಸ್ಥೆಯ ಆಗರವಾಗಿವೆ. ತಾಲೂಕು ವಿಸ್ತೀರ್ಣಾಧಿಕಾರಿ ಸ್ಥಳೀಯರಾಗಿದ್ದರೂ ಕೂಡ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಹಿಂದುಳಿದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದು, ಇಂತಹ ಅಧಿಕಾರಿಗಳಿಂದ ಯೋಜನೆಗಳು ಹಳ್ಳ ಹಿಡಿಯುವಂತಾಗಿದೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಊಟ, ವಸತಿಯಲ್ಲಿ ಅಸ್ತವ್ಯಸ್ತ ಕಂಡು ಬಂದರೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಕಳಪೆಯಿಂದ ಕೂಡಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಬಿಸಿಯೂಟ ವಿತರಣೆಯಲ್ಲೂ ಸಾಕಷ್ಟು ಲೋಪದೋಷ ಕಂಡು ಬರುತ್ತಿದ್ದು, ಸಹಾಯಕ ನಿರ್ದೇಶಕರು ನಿತ್ಯ 8-10 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ವಿವಿಧ ಯೋಜನೆಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ, ಶಾಲಾ ಕಟ್ಟಡ, ಸಮುದಾಯ ಭವನ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಕೋಟ್ಯಂತರ ರೂ. ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಅನುದಾನ ತರುವುದು ಮುಖ್ಯವಲ್ಲ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾಮಗಾರಿ ಕಳಪೆಯಾಗದಂತೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರವಹಿಸಿದಾಗ ಗುಣಮಟ್ಟದ ಕೆಲಸವಾಗುವುದು. ಈಗಾಗಲೇ ಸಾಕಷ್ಟು ರಸ್ತೆ, ಸೇತುವೆ, ಭವನ ಸೇರಿದಂತೆ ಅನೇಕ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ಜೇವರ್ಗಿ ತಹಶೀಲ್ದಾರ್ ಸಿದ್ದರಾಯ ಬೋಸಗಿ, ಯಡ್ರಾಮಿ ತಹಶೀಲ್ದಾರ್ ಬಸಲಿಂಗಪ್ಪ , ಬಿಸಿಎಂ, ಆರೋಗ್ಯ, ಲೋಕೋಪಯೋಗಿ, ಅರಣ್ಯ, ಕೃಷಿ, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ತೋಟಗಾರಿಕೆ, ಕೈಗಾರಿಕೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.