Advertisement

ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಶಾಸಕ ದೇಸಾಯಿ : ವಿಡಿಯೋ ವೈರಲ್

07:52 PM Dec 01, 2020 | Suhan S |

ಧಾರವಾಡ : ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಸರ್ಕಾರ ಕೊಡ ಮಾಡುವ ನೆರವು ಮತ್ತು ಮನೆಗಳಿಗಾಗಿ ಪಟ್ಟಿ ಸಿದ್ದ ಪಡಿಸಿದ ಅಧಿಕಾರಿಗಳ ಮೇಲೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವಾಚ್ಯಶಬ್ದಗಳಿಂದ ನಿಂದಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

Advertisement

ಲಕಮಾಪೂರ, ಮಂಗಳಗಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಳೆಹಾನಿಗೆ ಒಳಗಾಗಿದ್ದ ಅನೇಕ ಬಡವರ ಮನೆಗಳನ್ನು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಅದರ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಆದರೆ ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಶಾಸಕ ದೇಸಾಯಿ ಬೆಂಬಲಿಗರು ಅಧಿಕಾರಿಗಳ ವಿರುದ್ಧ ದೂರು ಹೇಳಿ, ಅಧಿಕಾರಿಗಳನ್ನು ನಗರದ ಸರ್ಕಿಟ್‌ಹೌಸ್‌ಗೆ ಕರೆಸುವಂತೆ ಪಟ್ಟು ಹಿಡಿದರು.

ಕೂಡಲೇ ಅಧಿಕಾರಿಗಳನ್ನು ನಡುರಾತ್ರಿಯಲ್ಲಿಯೇ ಸರ್ಕಿಟ್ ಹೌಸ್‌ಗೆ ಕರೆಯಿಸಿಕೊಂಡ ಶಾಸಕ ದೇಸಾಯಿ ಅವರು, ಬಿದ್ದ ಮನೆಗಳ ಪಟ್ಟಿ ಮಾಡುವ ವಿಚಾರವಾಗಿ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿದೆ ಸುಮ್ಮನೆ ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆಗಿದ್ದೇನು ? : ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಮಳೆಗಾಲದಲ್ಲಿ ಸಾಕಷ್ಟು ಮನೆಗಳು ಹಾನಿಗೆ ಒಳಗಾಗಿದ್ದವು. ಇವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮರು ನಿರ್ಮಾಣಕ್ಕಾಗಿ ಎ,ಬಿ,ಸಿ, ಕೆಟಗೇರಿಯಲ್ಲಿ ವಿಭಾಗಿಸಿ ನಮೂದಿಸಿ ಕಳುಹಿಸಬೇಕಿತ್ತು. ಅದಕ್ಕೆ ನ.30 ರಾತ್ರಿ 12 ಗಂಟೆ ವೆರೆಗೆ ಮಾತ್ರ ಸಮಯವಿತ್ತು.ಯಾದವಾಡ, ಲಕಮಾಪೂರ, ಮಂಗಳಗಟ್ಟಿ,ಕುರುಬಗಟ್ಟಿ ಮತ್ತು ಮುಳಮುತ್ತಲ ಸೇರಿದಂತೆ ಕೆಲವಷ್ಟು ಜನ ಗ್ರಾಮಗಳಿಂದ ಬಂದು ತಮ್ಮ ಮನೆಗಳ ಸಮೀಕ್ಷೆ ಮಾಡಲಾಗಿದ್ದು, ಅವುಗಳನ್ನು ಕೇವಲ ಸಿ, ಕೆಟಗೇರಿಯಲ್ಲಿ ಹಾಕಲಾಗಿದೆ. ಅವುಗಳನ್ನು ಎ,ಮತ್ತು ಬಿ,ಕೆಟಗೇರಿಗೆ ಹಾಕಿಸಿಕೊಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಶಾಸಕ ಅಮೃತ ದೇಸಾಯಿ ಸಂಬಂಧಪಟ್ಟ ಅಧಿಕಾರಿಗಳನ್ನು ಸರ್ಕಿಟ್‌ಹೌಸ್‌ಗೆ ಕರೆಯಿಸಿಕೊಂಡಿದ್ದಾರೆ. ಬರುವಾಗ ತಹಶೀಲ್ದಾರ ಕಚೇರಿಯಿಂದ ಅಗತ್ಯ ದಾಖಲೆಗಳು ಮತ್ತು ಫೈಲ್‌ಗಳನ್ನು ಹೊತ್ತು ತರುವಂತೆ ಕೂಡ ಹೇಳಿದ್ದಾರೆ. ದಾಖಲೆಗಳೊಂದಿಗೆ ಬಂದ ಅಧಿಕಾರಿಗಳನ್ನು ತಮ್ಮ ಬೆಂಬಲಿಗರ ಮುಂದೆಯೇ ದೇಸಾಯಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

Advertisement

ಬೆಂಬಲಿಗರ ಮನೆಗಳಾ ? : ವಿಡಿಯೋ ಮೊಬೈಲ್‌ಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅದರಲ್ಲಿರುವ ಅಸಲಿಯತ್ತು ಏನು ? ಎನ್ನುವ ಪ್ರಶ್ನೆಗಳಿಗೆ ಸಾರ್ವಜನಿಕರೆ ಜಾಲತಾಣಗಳಲ್ಲಿ ಚರ್ಚೆಯಲ್ಲಿ ತೊಡಗಿದ್ದಾರೆ. ಶಾಸಕರು ಬಡವರ ಮನೆಗಳ ಪಟ್ಟಿಗಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಾ ? ಅಥವಾ ತಮ್ಮ ಬೆಂಬಲಿಗರ ಮನೆಗಳನ್ನು ಹಾಕಿಲ್ಲ ಎನ್ನುವ ಉದ್ದೇಶಕ್ಕಾಗಿ ಅಧಿಕಾರಿಗಳನ್ನು ಅವಾಚ್ಯಶಬ್ದಗಳಿಂದ ಬದರಾ ? ಎನ್ನುವ ಪ್ರಶ್ನೆ ಎದ್ದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಯಾದವಾಡ ಗ್ರಾಮದ ಯುವಕನೊಬ್ಬ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದಾಗಲೇ ಸತ್ಯಾಸತ್ಯತೆ ಹೊರಗೆ ಬರಲಿದೆ.

ಬಡವರಿಗೆ ಬರೀ ಸಿ ಕೆಟಗೇರಿ ? : ಜಿಲ್ಲೆಯಲ್ಲಿ ಕಳೆದ ಜುಲೈ,ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ  ಸಾವಿರಾರು ಮನೆಗಳು ಜಖಂ ಆಗಿವೆ. ನೂರಾರು ಮನೆಗಳು ಸಂಪೂರ್ಣ ನೆಲಕ್ಕುರುಳಿವೆ. ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಖುದ್ದಾಗಿ ಮನೆಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಅವುಗಳ ಕೆಟಗೇರಿಗಳನ್ನು ನಿಗದಿಪಡೆಸಿದ್ದಾರೆ. ಆದರೆ ಇಲ್ಲಿ ಗೋಲ್‌ಮಾಲ್ ಆಗಿದೆ ಎನ್ನಲಾಗಿದೆ. ನಿಜವಾಗಿ ಮನೆ ಕಳೆದುಕೊಂಡ ಬಡವರ ಮನೆಗಳು ಸಿ ಕೆಟಗೇರಿಯಲ್ಲಿದ್ದರೆ, ರಾಜಕಾರಣಿಗಳ ಬೆಂಬಲಿಗರ ಮನೆಗಳು ಎ ಮತ್ತು ಬಿ ಕೆಟಗೇರಿಯಲ್ಲಿ ಸೇರಿಕೊಂಡಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸತ್ಯಾಸತ್ಯತೆ ಹೊರಗೆ ಬರಬೇಕಾದರೆ ಸಮಗ್ರ ತನಿಖೆ ನಡೆಯಬೇಕು ಎನ್ನುತ್ತಿದ್ದಾರೆ ಕೆಲ ಗ್ರಾಮಸ್ಥರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಮೃತ ದೇಸಾಯಿ ಅವರನ್ನು ಉದಯವಾಣಿ ಸಂಪರ್ಕಿಸಿತಾದರೂ ಶಾಸಕರು ಫೋನ್ ಕರೆಯನ್ನು ಸ್ವೀಕರಿಸಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next