ಕುಷ್ಟಗಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯ ಬೆಳವಣಿಗೆಯಲ್ಲಿ ನಾಳೆಯೇ ಚುನಾವಣೆ ಘೋಷಣೆಯಾದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸುವ ವಿಶ್ವಾಸ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ವ್ಯಕ್ತಪಡಿಸಿದರು.
ಪಟ್ಟಣ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಆ ಪಕ್ಷದ ಆಂತರಿಕ ವಿಚಾರವಾಗಿದ್ದರೂ ಕೂಡ, ಬಿಜೆಪಿಗೆ ಮುಂದಿನ ದಿನಮಾನಗಳಲ್ಲಿ ಬಹಳಷ್ಟು ನಷ್ಟ ಆಗಲಿದೆ ಎಂದು ಭವಿಷ್ಯ ನುಡಿದರು. ಬಿಎಸ್ ವೈ ಅವರು, ಬಲಾಡ್ಯ ಸಮುದಾಯದ ಮುಖಂಡರಾಗಿ, ಬಿಜೆಪಿ ಪಕ್ಷ ಮುನ್ನೆಡೆಸುವ ವ್ಯಕ್ತಿಗೆ ಈ ರೀತಿಯಾಗಿರುವುದು ಆ ಪಕ್ಷಕ್ಕೆ ನಷ್ಟ ಆಗಲಿದೆ. ಅದರಿಂದ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆಯಲ್ಲಿದ್ದೇವೆ. ಶಾಸಕರ ಕ್ಷೇತ್ರವಾರು ತಾರತಮ್ಯ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಉತ್ತಮ ಮುಖ್ಯಮಂತ್ರಿಯಾಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
No BSY No BJP in Karnataka ಎಂದು ತಾವೇ ಹೇಳಿರುವುದನ್ನು ಪುನರುಚ್ಚರಿಸಿದ ಅವರು, ಅದು ಬೇರೆ ಬೇರೆ ವಿಚಾರದಲ್ಲಿ ಬೇರೆ ಬೇರೆ ರೀತಿಯಾಗಲುಬಹುದು ಎಂದ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ವ್ಯಕ್ತಿಯನ್ನು ಮದ್ಯದಲ್ಲಿ ಕೈ ಬಿಡುವುದು ಸರಿ ಅಲ್ಲ ಎಂದರು.
ಈಗಿನ ಬೆಳವಣಿಗೆ ಚುನಾವಣೆ ತಯಾರಿಯಲ್ಲಿ ನಾವಂತೂ ಇಲ್ಲ ಹಾಗೂ ನಮ್ಮಲ್ಲಿ ಮುಖ್ಯಮಂತ್ರಿಯಾಗುವ ವಿಚಾರ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಇಲ್ಲ. ಪುನಃ ನಾವು ಚುನಾವಣೆಗೆ ಹೋಗಿ ಬಹುಮತ ತಂದು ಸರ್ಕಾರ ಮಾಡುವ ಇಚ್ಛಾಶಕ್ತಿಯಲ್ಲಿದ್ದೇವೆ. ಈಗಿನ ಬೆಳವಣಿಗೆಯ ಲಾಭ ಪಡೆಯುವ ಇಚ್ಚೆ ನಮಗಿಲ್ಲ.
ಈಗಿನ ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆಯೋ ಇಲ್ಲವೋ ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಮೂವರು ಮುಖ್ಯಮಂತ್ರಿಗಳಾಗಿದ್ದರು. ಇದೀಗ ಬಿಎಸ್ ವೈ ರಾಜಿನಾಮೆ ನೀಡಿದ್ದು, ನಾಲ್ಕನೇಯ ವರ್ಷದಲ್ಲಿ ಎರಡನೇ ಮುಖ್ಯಮಂತ್ರಿ ಆಗಲಿದ್ದಾರೆ. ಐದನೇ ವರ್ಷದಲ್ಲಿ ಮೂರನೇ ಮುಖ್ಯಮಂತ್ರಿಯಾದರೆ ಅಚ್ಚರಿ ಪಡೋ ಹಾಗಿಲ್ಲ ಎಂದರು.
ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ ಇದ್ದು, ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಅವರ ನಿರ್ಧಾರದಿಂದ ಮುಖ್ಯಮಂತ್ರಿ ಆಗಲಿದ್ದು, ರಾಜ್ಯದ ನಿರ್ಧಾರದಿಂದ ಮುಖ್ಯಮಂತ್ರಿ ಆಗುವುದಿಲ್ಲ ನಾನು ಸಿಎಂ ನೀನು ಸಿಎಂ ಎನ್ನುವ ವಿಚಾರ ಮಾಧ್ಯಮ ಸೃಷ್ಟಿ ಎಂದರು.