Advertisement
ಬೆಳಗಾವಿ: ಕೊರೊನಾ ಎರಡನೇ ಅಲೆ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯ. ಆಯಾ ಕ್ಷೇತ್ರದ ಶಾಸಕರು ಈ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಎಷ್ಟೋ ಸಮಸ್ಯೆಗಳು ಹಗುರವಾಗಿ ಕರಗಿ ಹೋಗುತ್ತವೆ. ಸುಲಭವಾಗಿ ಪರಿಹಾರ ಸಿಗುತ್ತದೆ. ಸೋಂಕಿತರು, ಅವರ ಕುಟುಂಬ ಸದಸ್ಯರಲ್ಲಿ ಕೊರೊನಾ ಗೆದ್ದು ಬರುವ ವಿಶ್ವಾಸ ಮೂಡುತ್ತದೆ. ಇದಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಒಳ್ಳೆಯ ಉದಾಹರಣೆ.
Related Articles
Advertisement
ಸಾರ್ವಜನಿಕರಿಗೆ ಕೊರೊನಾ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ ಜತೆಗೆ ಅವರಿಗೆ ಅಗತ್ಯ ಔಷಧ ಹಾಗೂ ಆಸ್ಪತ್ರೆಗಳ ಸಹಾಯ ನೀಡುತ್ತಿರುವ ಶಾಸಕ ಅಭಯ ಪಾಟೀಲ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಜತೆಗೂಡಿ ಮಹಾನಗರ ಪಾಲಿಕೆ ವತಿಯಿಂದ ಸುಭಾಷನಗರ, ಕುಮಾರಸ್ವಾಮಿ ಬಡಾವಣೆ, ರಾಮತೀರ್ಥ ನಗರದಲ್ಲಿ ಆರಂಭಿಸಿರುವ ಕೋವಿಡ್ ಕೇಂದ್ರಗಳಿಗೆ ಆಕ್ಸಿಜನ್ ಯಂತ್ರಗಳನ್ನು ನೀಡಿದ್ದಾರೆ. ಕೋವಿಡ್ ಸೋಂಕಿತರ ನೆರವಿಗಾಗಿ ಆಂಬ್ಯುಲೆನ್ಸ್ ಸೌಲಭ್ಯ ಒದಗಿಸಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕಿನಿಂದ ಗುಣಮುಖರಾದವರಿಗೆ ಕೆಲ ದಿನಗಳವರೆಗೆ ಬೇಕಾಗುವ ಆಕ್ಸಿಜನ್ ಸರಬರಾಜು ಮಾಡಲು ಶಾಸಕರು ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ 350 ಜನರಿಗೆ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಶಾಸಕ ಅಭಯ ಪಾಟೀಲ ತಮ್ಮ ಸೇವಾ ಮನೋಭಾವ ಪರಿಚಯಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಈಗಾಗಲೇ ನಾಲ್ಕು ಬಾರಿ ಭೇಟಿ ನೀಡಿ ವೈದ್ಯರ ಸಭೆ ನಡೆಸಿರುವ ಅಭಯ ಪಾಟೀಲ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಒಂದು ಹಾಗೂ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ 700 ಲೀ. ಸಾಮರ್ಥ್ಯದ ಒಂದು ಆಕ್ಸಿಜನ್ ನಿರ್ಮಾಣ ಘಟಕ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಆಯುಷ್ಮಾನ ಭಾರತ್ ಯೋಜನೆ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಯಮಾನುಸಾರ ಚಿಕಿತ್ಸೆ ದೊರೆಯುವಂತೆ ಶಾಸಕರು ನೋಡಿಕೊಂಡಿದ್ದಾರೆ. ಶಾಸಕರ ಪ್ರಯತ್ನದ ಫಲವಾಗಿ ಯೋಜನೆ ಫಲಾನುಭವಿಗಳ ವೈದ್ಯಕೀಯ ವೆಚ್ಚದಲ್ಲಿ 18 ಲಕ್ಷ ರೂ. ಕಡಿಮೆಯಾಗಿದೆ. ತಮ್ಮ ಬಳಿ ನೆರವು ಕೇಳಿಕೊಂಡು ಬಂದವರಿಗೆ ಆಯುಷ್ಮಾನ್ ಯೋಜನೆ ಲಾಭ ದೊರಕಿಸಿಕೊಡಲು ಒಬ್ಬ ಸಿಬ್ಬಂದಿ ನೇಮಕ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚ ದುಬಾರಿಯಾಗುತ್ತಿದೆ ಎಂಬ ದೂರುಗಳು ಬಂದಾಗ ಅದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳ ಮುಖ್ಯಸ್ಥರು, ಭಾರತೀಯ ವೈದ್ಯಕೀಯ ಸಂಸ್ಥೆ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅದಕ್ಕೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಕೊರೊನಾ ಅಲೆ ನಿಯಂತ್ರಣಕ್ಕೆ ವಾತಾವರಣ ಶುದ್ಧೀಕರಣ ಮಾಡುವುದು ಸಹ ಅತ್ಯಗತ್ಯ ಎಂಬುದನ್ನು ಮನಗಂಡ ಶಾಸಕರು ತಮ್ಮ ಮತ ಕ್ಷೇತ್ರದ ಗಲ್ಲಿ-ಗಲ್ಲಿಗಳಲ್ಲಿ, ಯುವಕ ಮಂಡಳಗಳ, ಸ್ಥಳೀಯ ಪ್ರಮುಖರ ಜತೆ ಕೂಡಿಕೊಂಡು ಹೋಮ-ಹವನ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕಾರ್ಯ 15 ದಿನಗಳ ಕಾಲ ನಡೆಸುವ ಯೋಚನೆ ಶಾಸಕರದು.