Advertisement

ವಿದ್ಯುತ್‌ ದರ ಹೊರೆಯಾಗದಂತೆ ಪರಿಷ್ಕರಣೆ

06:35 AM May 15, 2018 | |

ಬೆಂಗಳೂರು: ಎಸ್ಕಾಂಗಳು ಹೆಚ್ಚಿನ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದ್ದರೂ, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಸಾರ್ವಜನಿಕರು ಸೇರಿ ಸಂಬಂಧಪಟ್ಟ ಕ್ಷೇತ್ರಗಳ ಅಹವಾಲು, ಆಕ್ಷೇಪಣೆ ಸ್ವೀಕರಿಸಿ ಅಂತಿಮವಾಗಿ ಪ್ರತಿ ಯೂನಿಟ್‌ ವಿದ್ಯುತ್‌ ದರ ಕನಿಷ್ಠ 20 ಪೈಸೆಯಿಂದ ಗರಿಷ್ಠ 60 ಪೈಸೆವರೆಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

Advertisement

ಇದು ಏ.1ರಿಂದ ಪೂರ್ವಾನ್ವಯವಾಗಿ 2019ರ ಮಾ.31ರವರೆಗೆ ಜಾರಿಯಲ್ಲಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.

ಸೋಮವಾರ ಆದೇಶ ಹೊರಡಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ ಹೊರೆಯಾಗದಂತೆ ತಡೆಯಲು 20ರಿಂದ 25 ಪೈಸೆಯಷ್ಟು ಹೆಚ್ಚಳಕ್ಕಷ್ಟೇ ಅವಕಾಶ ನೀಡಲಾಗಿದೆ.
ನಾನಾ ಉದ್ದೇಶಿತ ವಿದ್ಯುತ್‌ ಬಳಕೆಗೆ ವಿಭಿನ್ನ ಪ್ರಮಾಣದಲ್ಲಿ ದರ ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕೈಗಾರಿಕಾ ವಿದ್ಯುತ್‌ ಬಳಕೆ ಪ್ರಮಾಣ ಶೇ.10ರಷ್ಟು ಹೆಚ್ಚಾಗಬೇಕು. ಆದರೆ ಈ
ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಹಾಗಾಗಿ ಕೈಗಾರಿಕೆ ಉದ್ದೇಶಿತ ವಿದ್ಯುತ್‌ ಬಳಕೆಗೆ ಒಂದಿಷ್ಟು ರಿಯಾಯ್ತಿ, ಉತ್ತೇಜಕ ನೀಡಲಾಗಿದೆ ಎಂದರು.

ಸೌರ ವಿದ್ಯುತ್‌ ಬಳಕೆಗೆ ಒತ್ತು: ಇಡೀ ದೇಶದಲ್ಲಿ ಸೌರವಿದ್ಯುತ್‌ ಉತ್ಪಾದನೆ ಯಲ್ಲಿ ಕರ್ನಾಟಕ ಮುಂದಿದ್ದು, ಸದ್ಯ 4,500 ಮೆ.ವ್ಯಾ.ಸೌರವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದೆ. ಹಾಗಾಗಿ ಅಕ್ಟೋಬರ್‌ವರೆಗೆ ಕೃಷಿ ಪಂಪ್‌
ಸೆಟ್‌ಗೆ ಹಗಲು ಹೊತ್ತು 3 ಗಂಟೆ ಹಾಗೂ ರಾತ್ರಿ ವೇಳೆ 3 ಗಂಟೆ 3ಫೇಸ್‌ ವಿದ್ಯುತ್‌ ಪೂರೈಸಲಾಗುವುದು. 

Advertisement

ಅಕ್ಟೋಬರ್‌ನಲ್ಲಿ ಪರಿಶೀಲಿಸಿ ನವೆಂಬರ್‌ನಿಂದ ಹಗಲು ಹೊತ್ತಿನಲ್ಲೇ 6 ಗಂಟೆ 3 ಫೇಸ್‌ ವಿದ್ಯುತ್‌ ಪೂರೈಸಲು ಚಿಂತಿಸಲಾಗಿದೆ. ನವೆಂಬರ್‌ಗೆ ಸೌರ ವಿದ್ಯುತ್‌ ಉತ್ಪಾದನೆ 5000 ಮೆ.ವ್ಯಾ.ಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಬಳಕೆಗೆ ಉತ್ತೇಜಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 10 ಎಚ್‌ಪಿವರೆಗಿನ ಸಾಮರ್ಥಯದ 27.17 ಲಕ್ಷ ಕೃಷಿ ಪಂಪ್‌ ಸೆಂಟ್‌ಗಳು ಹಾಗೂ 28.42 ಲಕ್ಷ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಸಂಪರ್ಕಗಳಿದ್ದು, ಸರ್ಕಾರ ಉಚಿತವಾಗಿ ವಿದ್ಯುತ್‌ ಪೂರೈಸುತ್ತಿದೆ. ರಾಜ್ಯದ
ಒಟ್ಟು ವಿದ್ಯುತ್‌ ಬಳಕೆಯಲ್ಲಿ ಶೇ.32ರಷ್ಟು ಈ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಇದಕ್ಕಾಗಿ 21,500 ದಶಲಕ್ಷ ಯೂನಿಟ್‌ ಪೂರೈಕೆಯಾಗುತ್ತಿದ್ದು,ಸಬ್ಸಿಡಿಯಾಗಿ ಸರ್ಕಾರ 11,048 ಕೋಟಿ ರೂ. ಭರಿಸಬೇಕಿದೆ. ಸರ್ಕಾರ ಈ
ಬಾರಿಯ ಬಜೆಟ್‌ನಲ್ಲಿ 8,040 ಕೋಟಿ ರೂ. ಕಾಯ್ದಿರಿಸಿದ್ದು, ಇನ್ನೂ 3,000 ಕೋಟಿ ರೂ. ಹೆಚ್ಚು ಹಣ ಭರಿಸಬೇಕಿದೆ ಎಂದು ತಿಳಿಸಿದರು.

ವಿದ್ಯುತ್‌ ಪ್ರಸರಣ ಹಾಗೂ ಪೂರೈಕೆ ನಷ್ಟ (ಟಿ ಆ್ಯಂಡ್‌ ಡಿ) ಪ್ರಮಾಣವು ಬೆಸ್ಕಾಂನಲ್ಲಿ ಶೇ. 13.19, ಮೆಸ್ಕಾಂನಲ್ಲಿ ಶೇ.11.40 ಹಾಗೂ ಸೆಸ್ಕ್ನಲ್ಲಿ ಶೇ.13.10ರಷ್ಟಿದ್ದು, ಶೇ.15ಕ್ಕಿಂತ ಕಡಿಮೆ ಇದೆ. ಹೆಸ್ಕಾಂನಲ್ಲಿ ಶೇ.16.02 ಹಾಗೂ ಜೆಸ್ಕಾಂನಲ್ಲಿ ಶೇ.17.33ರಷ್ಟು ನಷ್ಟ ಪ್ರಮಾಣವಿದೆ. 2019ರೊಳಗೆ ಈ ನಷ್ಟ ಪ್ರಮಾಣವನ್ನು ಶೇ.15ಕ್ಕೆ ಇಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಆದೇಶದಲ್ಲೂ ಈ ಸೂಚನೆ ಪಾಲನೆಗೆ ಸೂಚಿಸಲಾಗಿದೆ. ಕಲಬುರಗಿಯಲ್ಲಿ 8ರಿಂದ 10 ಕಿ.ಮೀ.ವರೆಗೆ ಬಳಕೆದಾರರೇ ಇಲ್ಲದ ಪ್ರದೇಶಕ್ಕೆ ವಿದ್ಯುತ್‌ ಪೂರೈಸಬೇಕಿರುವುದರಿಂದ ನಷ್ಟ ಉಂಟಾಗುತ್ತಿದ್ದು, ಕೆಲ ವಾಸ್ತವಿಕ ಸಮಸ್ಯೆಗಳಿವೆ ಎಂದು ತಿಳಿಸಿದರು.

ಜೆಸ್ಕಾಂ ಪ್ರತಿ ಯೂನಿಟ್‌ಗೆ 1.63 ರೂ. ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದು,ಅದಕ್ಕೆ ಸಮರ್ಥನೀಯ ಅಂಶಗಳಿಲ್ಲ. ಜನರಿಗೆ ಸಲ್ಲಿಸುವ ಸೇವೆಯಿಂದ ಹೊರೆಯಾಗಬಾರದು. ದಕ್ಷತೆ ಹೆಚ್ಚಿಸಿಕೊಂಡು ನಷ್ಟ ತಗ್ಗಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next