ಚೆನ್ನೈ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿದೆ. ಮಾಜಿ ಐಎಎಸ್- ಐಪಿಎಸ್ ಅಧಿಕಾರಿಗಳು ರಾಜಕೀಯ ಪ್ರವೇಶಿಸಿದ ನಂತರ ಇದೀಗ ಹೊಸ ಪಕ್ಷದ ಉದಯವಾಗುತ್ತಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿ ಹಿರಿಯ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಕೆ. ಅಳಗಿರಿ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಸಹೋದರ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಂದ ದೂರವಾಗಿ ಹೊಸ ಪಕ್ಷ ಸ್ಥಾಪಿಸಿಲು ಯೋಜನೆ ರೂಪಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಭಾರತೀಯ ಜನತಾ ಪಕ್ಷದ ಸಹಯೋಗದೊಂದಿಗೆ ಅಳಗಿರಿ ಹೊಸ ರಾಜಕೀಯ ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದೇ ತಿಂಗಳ 21ರಂದು ಎಂ.ಕೆ. ಅಳಗಿರಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ:ನಿತೀಶ್ ಸಂಪುಟದಲ್ಲಿ ಬಿಜೆಪಿ ಮೇಲುಗೈ; ಇಬ್ಬರು ಡಿಸಿಎಂ, ಸುಶೀಲ್ ಮೋದಿಗಿಲ್ಲ ಸಚಿವ ಸ್ಥಾನ
ಅಳಗಿರಿ ಅವರ ಹೊಸ ಪಕ್ಷಕ್ಕೆ ಕಲೈನರ್ ಡಿಎಂಕೆ ಅಥವಾ ಕೆಡಿಎಂ ಎಂದು ಹೆಸರಿಡುವ ಸಾಧ್ಯತೆ ಇದೆ. ಅವರು ಪಕ್ಷ ಸ್ಥಾಪನೆಯ ಬಳಿಕ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಅವರು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಕೆಲವು ತಿಂಗಳ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು