ಹೊಸದಿಲ್ಲಿ : ಮಿಜೋರಾಂ ವಿಧಾನ ಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಎರಡು ವಿಶೇಷತೆಗಳು ಎದ್ದು ಕಾಣುವಂತಿವೆ. ಅವೆಂದರೆ ಒಟ್ಟು 209 ಅಭ್ಯರ್ಥಿಗಳ ಪೈಕಿ ಕೇವಲ ಶೇ.4 ಮಂದಿಯ ವಿರುದ್ದ ಮಾತ್ರವೇ ಕ್ರಿಮಿನಲ್ ಕೇಸುಗಳಿವೆ; ಆದರೆ ಅರ್ಧಾಂಶಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಕರೋಡ್‌ಪತಿಗಳಾಗಿದ್ದಾರೆ.
ಇದೇ ನವೆಂಬರ್ 28ರಂದು ಮಿಜೋರಾಂ ವಿಧಾನಸಭಾ ಚುನಾವಣೆ ನಡೆಯಲಿದೆ. ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಘೋಷಿಸಿಕೊಂಡಿರುವ ಒಟ್ಟು 9 ಅಭ್ಯರ್ಥಿಗಳ ಪೈಕಿ ಕೇವಲ ನಾಲ್ಕು ಮಂದಿ (ಶೇ.2) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಕೇಸುಗಳಿವೆ ಎಂದು ಹೇಳಿಕೊಂಡಿದ್ದಾರೆ.
ಕ್ರಿಮಿನಲ್ ಕೇಸುಗಳಿರುವ ಅಭ್ಯರ್ಥಿಗಳ ಪಕ್ಷವಾರು ಹಂಚಿಕೆಯ ಪ್ರಕಾರ ಬಿಜೆಪಿಯ ಇಬ್ಬರು, ಕಾಂಗ್ರೆಸ್ ಮತ್ತು ಮಿಜೋ ನ್ಯಾಶನಲ್ ಫ್ರಂಟ್‌ನ ತಲಾ ಮೂವರು, ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಕ್ರಿಮಿನಲ್ ಕೇಸು ಹೊಂದಿದವರಾಗಿದ್ದಾರೆ ಎಂದು ಪ್ರಜಾಸತ್ತೆ ಸುಧಾರಣಾ ಸಂಘ (ಎಡಿಆರ್)ದ ಪತ್ರಿಕಾ ಪ್ರಕಟನೆ ತಿಳಿಸಿದೆ.
2013ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮಿಜೋರಾಂ ವಿಧಾನ ಸಭಾ ಚುನಾವಣಾ ಕಣದಲ್ಲಿ ಕ್ರಿಮಿನಲ್ ಕೇಸು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಕೇವಲ ಶೇ.2 ಇದ್ದದ್ದು ಈ ಬಾರಿ ಶೇ.4ಕ್ಕೇರಿದೆ. ಹಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ನೋಡಿದಾಗ ಇದು ಅತ್ಯಂಕ ಕನಿಷ್ಠ ವಾಗಿದೆ.
ಚುನಾವಣಾ ಕಣದಲ್ಲಿರುವ ಒಟ್ಟು 209 ಅಭ್ಯರ್ಥಿಗಳ ಪೈಕಿ ಕರೋಡ್ ಪತಿಗಳಾಗಿರುವ 116 ಮಂದಿಯಲ್ಲಿ ಮಿಜೋ ನ್ಯಾಶನಲ್ ಫ್ರಂಟ್ (ಎಂಎನ್‌ಎಫ್)ನ 35 ಮಂದಿ, ಕಾಂಗ್ರೆಸ್‌ನ 33 ಮತ್ತು ಬಿಜೆಪಿಯ 17 ಮಂದಿ ಸೇರಿದ್ದಾರೆ.
ಮಿಜೋರಾಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿಪಾಸ್ತಿ 3.11 ಕೋಟಿ ರೂ. ಇದೆ. 2013ರಲ್ಲಿ 2.31 ಕೋಟಿ ರೂ. ಸರಾಸರಿ ಇತ್ತು.