ಹೊಸದಿಲ್ಲಿ: ರಾಜಕೀಯ ಘಟಾನುಘಟಿಗಳ ಭರ್ಜರಿ ಪ್ರಚಾರ, ರ್ಯಾಲಿ, ರೋಡ್‌ಶೋಗಳಿಗೆ ಸಾಕ್ಷಿಯಾದ ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಮತದಾನ ಬುಧವಾರ ಮುಗಿದಿದ್ದು, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಶೇ.75ರಷ್ಟು ಮತ ದಾನ ದಾಖಲಾಗಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಲ್ಲಲ್ಲಿ ದೋಷವಾಗಿದ್ದರಿಂದ ಸಣ್ಣ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿದ್ದು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಚುನಾವಣೆ ನಡೆದಿದೆ. ದೇಶದ ಹೃದಯ ಭಾಗವಾದ ಮಧ್ಯಪ್ರದೇಶದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಹೆಚ್ಚು ಮತದಾನ ದಾಖಲಾಗಿದೆ. 2013ರಲ್ಲಿ ಇಲ್ಲಿ ಮತದಾನದ ಪ್ರಮಾಣ ಶೇ.72.69 ಆಗಿತ್ತು. ಇವಿಎಂಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಬರೋಬ್ಬರಿ 1,145 ಇವಿಎಂಗಳು ಹಾಗೂ 1,545 ವಿವಿಪ್ಯಾಟ್ ಯಂತ್ರಗಳನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರ್, ಇಂದೋರ್ ಮತ್ತು ಗುನಾ ಜಿಲ್ಲೆಯಲ್ಲಿ ಕರ್ತವ್ಯ ನಿರತರಾಗಿದ್ದ ಮೂವರು ನೌಕರರು ಮೃತಪಟ್ಟ ಘಟನೆ ನಡೆದಿದೆ. 230 ಸದಸ್ಯಬಲದ ವಿಧಾನಸಭೆಯ ಚುನಾವಣೆಗೆ 2,899 ಅಭ್ಯರ್ಥಿ ಗಳು ಕಣಕ್ಕಿಳಿದಿದ್ದು, ಡಿ.11ರಂದು ಇವರ ಹಣೆಬರಹ ನಿರ್ಧಾರವಾಗಲಿದೆ.
ಮಿಜೋರಾಂನಲ್ಲಿ ಉತ್ತಮ ಮತದಾನ: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ 40 ಅಸೆಂಬ್ಲಿ ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಶೇ.75 ರಷ್ಟು ಮತದಾನ ದಾಖಲಾಗಿದೆ. ಸಿಎಂ ಲಾಲ್ ಥನ್‌ಹಾವ್ಲಾ ಅವರು ಕಣಕ್ಕಿಳಿದಿರುವಂಥ ಸರ್ಚಿಪ್ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ ಶೇ.81ರಷ್ಟು ಮತದಾನವಾಗಿದೆ. ಲಂಗ್‌ಲೈ ಜಿಲ್ಲೆಯಲ್ಲಿ ಮೂವರು ಮತಗಟ್ಟೆ ಅಧಿಕಾರಿಗಳು ಮದ್ಯ ಸೇವಿಸಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಅತಿ ಹಿರಿಯ ಮತದಾರ: ಮಿಜೋರಾಂನ ಅತಿ ಹಿರಿಯ ಮತದಾರ ಎಂಬ ಖ್ಯಾತಿಗೆ ಪಾತ್ರವಾಗಿರುವ 108 ವರ್ಷ ವಯಸ್ಸಿನ ರೋಚಿಂಗಾ ಅವರು ತನ್ನ ನೆರೆಮನೆಯ ವ್ಯಕ್ತಿಯ ಸಹಾಯ ಪಡೆದು, ಕೈಯ ಲ್ಲೊಂದು ವಾಕಿಂಗ್ ಸ್ಟಿಕ್ ಹಿಡಿದು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ನಾನು ಯಾವತ್ತೂ ಮತದಾನವನ್ನು ಮಿಸ್ ಮಾಡಲ್ಲ. ಅದು ನನ್ನ ಹಕ್ಕು ಮತ್ತು ಕರ್ತವ್ಯ ಎಂದೂ ರೋಚಿಂಗಾ ಹೇಳಿದ್ದಾರೆ. ಇವರಲ್ಲದೆ, 106, 104 ಹಾಗೂ 96 ವಯಸ್ಸಿನ ವ್ಯಕ್ತಿಗಳೂ ಮತ ಚಲಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಕಾಮ್‌ಧಾರ್ ವರ್ಸಸ್ ನಾಮ್‌ಧಾರ್: ಮೋದಿ: ರಾಜಸ್ಥಾನದ ಭರತ್‌ಪುರ ಮತ್ತು ನಗೌರ್‌ನಲ್ಲಿ ಬುಧವಾರ ಪ್ರಧಾನಿ ಮೋದಿ ರ್ಯಾಲಿ ನಡೆಸಿದ್ದು, ಈ ಬಾರಿಯ ಚುನಾವಣೆಯು ಕಾಮ್‌ಧಾರ್(ಕೆಲಸ ಮಾಡುವ) ಮತ್ತು ನಾಮ್‌ಧಾರ್(ನಾಮಧಾರಿ) ನಡುವಿನದ್ದು ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬೇಳೆಯ ಹೆಸರು ಹೇಳಲು ಗೊತ್ತಿಲ್ಲದವರೂ ಈಗ ರೈತರ ಬಗ್ಗೆ ಮಾತನಾಡ ತೊಡಗಿದ್ದಾರೆ. ನಾನು ನಿಮ್ಮಂತೆಯೇ ಬೆಳೆದವನು. ನಿಮ್ಮ ಕಷ್ಟ ಅರ್ಥ ವಾಗುತ್ತದೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವನು ನಾನಲ್ಲ ಎಂದಿದ್ದಾರೆ. ಅಲ್ಲದೆ, ರಾಹುಲ್‌ರ ಆಪ್ತ ಸಹಚರರು ನಕ್ಸಲರನ್ನು ಕ್ರಾಂತಿಕಾರಿಗಳೆಂದೂ, ಸೇನಾ ಮುಖ್ಯಸ್ಥನ್ನು ಬೀದಿಬದಿಯ ಕ್ರಿಮಿನಲ್ ಎಂದೂ ಕರೆಯುತ್ತಾರೆ. ಇಂಥವರ ಕೈಯ್ಯಲ್ಲಿ ದೇಶವನ್ನು ರಕ್ಷಿಸಲು ಸಾಧ್ಯವೇ ಎಂದೂ ಪ್ರಶ್ನಿಸಿದ್ದಾರೆ.
ಆರೆಸ್ಸೆಸ್-ಬಿಜೆಪಿಯ ಬಿ ಟೀಂ ಟಿಆರ್‌ಎಸ್: ರಾಹುಲ್: ತೆಲಂಗಾಣದಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಟಿಆರ್‌ಎಸ್ ವಿರುದ್ಧ ಹರಿಹಾಯ್ದಿದ್ದು, ಆ ಪಕ್ಷವನ್ನು ಬಿಜೆಪಿ ಮತ್ತು ಆರೆಸ್ಸೆಸ್‌ನ ಬಿ ಟೀಂ ಎಂದು ಕರೆದಿದ್ದಾರೆ. ಟಿಆರ್‌ಎಸ್ ಮತ್ತು ಒವೈಸಿ ಸೇರಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಇದೇ ವೇಳೆ, ತೆಲಂಗಾಣದ ಹೈದರಾಬಾದ್‌ನ ಮತದಾರರ ಪಟ್ಟಿಯಲ್ಲಿ ರೋಹಿಂಗ್ಯಾ ಮುಸ್ಲಿಮರ ಹೆಸರುಗಳನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಹನುಮಾನ್ ದಲಿತ ಎಂದ ಯೋಗಿ
ಈಗ ಚುನಾವಣಾ ರಾಜಕೀಯಕ್ಕೆ ಆಂಜನೇಯನ ಜಾತಿಯನ್ನೂ ಎಳೆದುತರಲಾಗಿದೆ. ಜೈಪುರದಲ್ಲಿ ಬುಧವಾರ ಮಾತನಾಡಿದ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, “ಹನುಮಾನ್ ಮೂಲತಃ ದಲಿತ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಶ್ರೀರಾಮನ ಆಸೆಯಂತೆ ಬಜರಂಗಬಲಿಯು ಭಾರತದ ಎಲ್ಲ ಸಮುದಾಯವನ್ನೂ ಒಂದುಗೂಡಿಸಲು ಯತ್ನಿಸಿದ. ಹನುಮಾನ್‌ನಂತೆಯೇ ನಾವೂ ಶ್ರೀರಾಮನ ಆಸೆ ಈಡೇರಿಸುವವರೆಗೂ ವಿಶ್ರಮಿಸಬಾರದು’ ಎಂದಿದ್ದು, ಬಿಜೆಪಿ ಅಭ್ಯರ್ಥಿಗೇ ಮತ ಹಾಕುವಂತೆ ದಲಿತ ಸಮುದಾಯವನ್ನು ಕೋರಿಕೊಂಡಿದ್ದಾರೆ.
ಕೇವಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಹಂ ಅನ್ನು ತೃಪ್ತಿಗೊಳಿಸುವ ಸಲುವಾಗಿ ನಾವು ಸಂಸತ್‌ನಲ್ಲಿ ನೋಟು ಅಮಾನ್ಯದ ಕುರಿತು ಚರ್ಚಿಸುವ ಅಗತ್ಯವಿಲ್ಲ. ಗುಜರಾತ್, ಉತ್ತರಪ್ರದೇಶದ ಚುನಾವಣೆ ವೇಳೆಯೂ ಇದೇ ವಿಚಾರವನ್ನೆತ್ತಿ ಪ್ರಚಾರ ಮಾಡಿದ್ದ ಕಾಂಗ್ರೆಸ್ ಸೋಲುಂಡಿಲ್ಲವೇ?
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
ಕೊನೇ ಕ್ಷಣದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಬಿಜೆಪಿಯ ಹಳೇ ತಂತ್ರವಾಗಿದೆ. ಅದು ಈಗ ನಡೆಯುವುದಿಲ್ಲ. ನಾಲ್ಕೂವರೆ ವರ್ಷಗಳಲ್ಲಿ ರಾಮಮಂದಿರದ ಬಗ್ಗೆ ತುಟಿಪಿಟಿಕ್ಕೆನ್ನದ ಬಿಜೆಪಿ ಈಗ ವಿಧಾನಸಭೆ ಚುನಾವಣೆಗಳಲ್ಲಿ ಸೋಲುತ್ತೇವೆಂಬ ಭಯದಿಂದ ಮಂದಿರದ ವಿಚಾರ ಎತ್ತಿದೆ.
ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ
ತೆಲಂಗಾಣದಲ್ಲಿ ಟಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಲ್ಪಸಂಖ್ಯಾಕರ ಓಲೈಕೆಯಲ್ಲಿ ತೊಡಗಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಗ್ರಾಮದಲ್ಲೂ ತೆಲಂಗಾಣ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಅಮಿತ್ ಶಾ, ಬಿಜೆಪಿ ಅಧ್ಯಕ್ಷ