Advertisement

ಕೋವಿಡ್ 19: ಲಾಕ್ ಡೌನ್ ವೇಳೆ 13 ಪುಸ್ತಕ ಬರೆದ ಮಿಜೋರಾಂ ಗವರ್ನರ್, ಯಾರಿವರು?

02:29 PM Aug 07, 2020 | Nagendra Trasi |

ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ದೇಶದಲ್ಲಿ ಬಹುತೇಕ ಮಂದಿ ಮಹಿಳೆಯರು, ಯುವತಿಯರು ಹೊಸ, ಹೊಸ ರುಚಿಯ ಅಡುಗೆ ಮಾಡೋದು ಹೇಗೆ ಎಂಬ ಬಗ್ಗೆ ತಿಳಿದುಕೊಂಡಿದ್ದರು. ಇನ್ನೂ ಹಲವರು ಸಿನಿಮಾ, ಕಥೆ, ಕಾದಂಬರಿ, ಡಿಡಿ ದೂರದರ್ಶನದಲ್ಲಿನ ಧಾರಾವಾಹಿಗಳ ಮೊರೆ ಹೋಗಿದ್ದರು. ಆದರೆ ಮಿಜೋರಾ ಗವರ್ನರ್, ಕೇರಳ ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು ಲಾಕ್ ಡೌನ್ ಸಮಯದಲ್ಲಿ ಬರೋಬ್ಬರಿ 13 ಪುಸ್ತಕಗಳನ್ನು ಬರೆದಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

ರಾಜಭವನದಲ್ಲಿ ಕುಳಿತು ಪುಸ್ತಕ ಮತ್ತು ಕವನ ಬರೆದಿರುವುದಾಗಿ ತಿಳಿಸಿರುವ ಪಿಳ್ಳೈ, ಮಾರ್ಚ್ ತಿಂಗಳಿನಿಂದ ಈವರೆಗೆ 13 ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಬರೆದಿದ್ದು, ಇದರಲ್ಲಿ ಕವಿತೆಗೆಗಳು ಸೇರಿರುವುದಾಗಿ ವರದಿ ತಿಳಿಸಿದೆ.

ಪಿಟಿಐ ಜತೆ ಮಾತನಾಡಿರುವ ಗವರ್ನರ್ ಪಿಳ್ಳೈ, ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ತನಗೆ ಓದಲು ಮತ್ತು ಬರೆಯಲು ಹೆಚ್ಚಿನ ಸಮಯ ಸಿಕ್ಕಿರುವುದಾಗಿ ಹೇಳಿದರು. ರಾಜಭವನದೊಳಗೆ ಯಾವ ವೈರಸ್ ಗೂ ಭೇಟಿ ನೀಡಲು ಅವಕಾಶ ಕೊಟ್ಟಿಲ್ಲ! ಸಾರ್ವಜನಿಕರ ಜತೆಗಿನ ನನ್ನ ಸಂವಹನಕ್ಕೂ ನಿರ್ಬಂಧ ವಿಧಿಸಲಾಗಿತ್ತು. ನನ್ನ ಎಲ್ಲಾ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ನನಗೆ ಓದಲು ಮತ್ತು ಬರೆಯಲು ಹೆಚ್ಚಿನ ಸಮಯ ಸಿಕ್ಕಿದಂತಾಗಿತ್ತು ಎಂದು ವಿವರಿಸಿದ್ದಾರೆ.

ಲಾಕ್ ಡೌನ್ ಆರಂಭದಿಂದ ಪುಸ್ತಕ ಬರೆಯಲು ಶುರು:

Advertisement

ಕೋವಿಡ್ 19 ವೈರಸ್ ಹರಡದಂತೆ ಮುನ್ನಚ್ಚರಿಕಾ ಕ್ರಮವಾಗಿ ದೇಶದಲ್ಲಿ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಘೋಷಿಸಿದ ನಂತರ ರಾಜ್ಯಪಾಲರು ಪುಸ್ತಕ ಓದಲು ಆರಂಭಿಸಿದ್ದರು.  ಬೆಳಗ್ಗೆ 4ಗಂಟೆಗೆ ಎದ್ದ ನಂತರ ಮೊದಲು ಪುಸ್ತಕ ಓದಿ, ಆಮೇಲೆ ಬರೆಯಲು ಆರಂಭಿಸುತ್ತಿದ್ದೆ ಎಂದು ಪಿಳ್ಳೈ ಹೇಳಿದ್ದಾರೆ. ರಾಜಭವನ ಕಚೇರಿಯ ಕೆಲಸ ಮುಗಿದ ನಂತರ ಓದುವ ಕೋಣೆಯಲ್ಲಿ ಕುಳಿತು ಬರವಣಿಗೆ ಕೆಲಸದಲ್ಲಿ ತೊಡಗುತ್ತಿದ್ದೆ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಇದರೊಂದಿಗೆ ಸಮೂಹವನ್ನು ತಿದ್ದಲು ಸಾಧ್ಯವಾಗುತ್ತದೆ. ಬಾಲ್ಯದಿಂದಲೇ ಗ್ರಾಮೀಣ ರಾಜಕೀಯ ಹಾಗೂ ಸಾರ್ಜನಿಕ ಜೀವನದಲ್ಲಿ ತುಂಬಾ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕೋವಿಡ್ 19 ವೈರಸ್ ನಿಂದ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಿದೆ. ಆದರೆ ಇಂತಹ ಸಂದರ್ಭದಲ್ಲಿಯೂ ಸಕ್ರಿಯವಾಗಿರುವುದನ್ನು ನಾವು ಕಲಿತುಕೊಳ್ಳಬೇಕಾಗಿದೆ ಎಂಬುದು ಪಿಳ್ಳೈ ಅವರ ಅಭಿಪ್ರಾಯ.

ಕೋವಿಡ್ 19 ವೈರಸ್ ಮನುಷ್ಯತ್ವದ ಬಗ್ಗೆ ಕಲಿಸಿಕೊಟ್ಟಿದೆ. ಒಬ್ಬರ ಮೇಲೊಬ್ಬರು ಹೇಗೆ ಅವಲಂಬಿತರಾಗಿದ್ದಾರೆ ಎಂಬುದನ್ನು ಹೇಳಿಕೊಟ್ಟಿದೆ. ಅಲ್ಲದೇ ನಮ್ಮ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಮಲಯಾಳಂನಲ್ಲಿ ಬರೆದ ಕೋವಿಡ್ ಕವಿತಾಕಲ್ ಸೇರಿದಂತೆ ಹತ್ತು ಕವನಗಳನ್ನು ಬರೆದಿದ್ದಾರೆ. ಮತ್ತೊಂದು ಕವಿತೆ ಮಹಾಮಾರಿ ಬಗ್ಗೆ ಬರೆದಿದ್ದಾರೆ. ದೇಶದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಪ್ಲೇಗ್, ಕಾಲರಾದಂತಹ ಸೋಂಕನ್ನು ಗೆದ್ದಿದ್ದೇವೆ. ಈಗ ನಾವು ಪೋಲಿಯೊ, ಸಿಡುಬು ಮುಕ್ತರಾಗಿದ್ದೇವೆ, ಈಗ ನಾವು ಪ್ರಸ್ತುತ ಸೋಂಕಿನ ಸಂದರ್ಭದಲ್ಲಿಯೂ ಪ್ರೀತಿ, ಮಾನವೀಯತೆ ಮೂಲಕ ಎದುರಿಸಿ ಹೊರಬರಬೇಕಾಗಿದೆ ಎಂದು ಪಿಳ್ಳೈ ತಿಳಿಸಿದ್ದಾರೆ.

ಈವರೆಗೆ ಬರೆದ ಪುಸ್ತಕಗಳ ಸಂಖ್ಯೆ 121:

ಶ್ರೀಧರನ್ ಪಿಳ್ಳೈ ಅವರು ಸುಮಾರು ಮೂರು ದಶಕಗಳ ಹಿಂದೆಯೇ ಬರೆಯಲು ಆರಂಭಿಸಿದ್ದರು. ಇವರ ಮೊದಲ ಪುಸ್ತಕ ಬಿಡುಗಡೆಯಾಗಿದ್ದು 1983ರಲ್ಲಿ. ಇವರು ರಾಜ್ಯಪಾಲರಾಗುವ ಮೊದಲೇ 105 ಪುಸ್ತಕಗಳು ಬಿಡುಗಡೆಯಾಗಿದ್ದವು. ಈವರೆಗೆ ಶ್ರೀಧರನ್ ಪಿಳ್ಳೈ ಅವರು ಕವಿತೆ ಸೇರಿದಂತೆ ಸುಮಾರು 121 ಪುಸ್ತಕಗಳನ್ನು ಬರೆದಿರುವುದಾಗಿ ವರದಿ ವಿವರಿಸಿದೆ.

ಸದ್ಯ ನಾಲ್ಕು ಪುಸ್ತಕ ಬರೆಯುತ್ತಿದ್ದು, ಶೇ.90ರಷ್ಟು ಮುಕ್ತಾಯವಾಗಿದೆ. ಶನಿವಾರ (ಆಗಸ್ಟ್ 08-2020) ಗುವಾಹಟಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಜಯ್ ಲಾಂಬಾ ಅವರು ಪಿಳ್ಳೈ ಅವರ ಎರಡು ಕೃತಿಗಳನ್ನು (ರಿಪಬ್ಲಿಕ್ ಡೇ 2020 ಮತ್ತು ದಸ್ ಸ್ಪೀಕ್ಸ್ ದ ಗವರ್ನರ್) ಬಿಡುಗಡೆಗೊಳಿಸಲಿದ್ದಾರೆ.

ಶ್ರೀಧರನ್ ಪಿಳ್ಳೈ ಅವರು ಕೇರಳದ ಅಳಪ್ಪುಝಾ ಜಿಲ್ಲೆಯಲ್ಲಿ ಜನಿಸಿದ್ದರು. ವಿಜಿ ಸುಕುಮಾರನ್ ನಾಯರ್ ಹಾಗೂ ಭವಾನಿ ಅಮ್ಮ ದಂಪತಿ ಪುತ್ರ. ಪಿಳ್ಳೈ ಅವರು ಬಿಎ ಪದವಿ ಪಡೆದ ನಂತರ ಕಾನೂನು ಪದವಿ ಪಡೆದಿದ್ದರು. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ, ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪಿಳ್ಳೈ ಕಾಲೇಜು ಮ್ಯಾಗಜೀನ್ ಸಂಪಾದಕರಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಇವರು ಎಬಿವಿಪಿ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 1978ರಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿದ್ದರು. ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಪಡೆದಿದ್ದ ಇವರು ನಂತರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. 2019ರ ಅಕ್ಟೋಬರ್ 25ರಂದು ಮಿಜೋರಾಂ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next