Advertisement

ಜಿಲ್ಲೆಯಲ್ಲಿ ಸ್ವಚ್ಛ-ಸುಂದರ ಶೌಚಾಲಯ ಸ್ಪರ್ಧೆಗೆ ಮಿಶ್ರ ಪ್ರತಿಕ್ರಿಯೆ

09:51 AM Jan 18, 2019 | |

ಗದಗ: ಗ್ರಾಮೀಣ ಭಾಗದಲ್ಲಿ ರೂಢಿಯಲ್ಲಿದ್ದ ಬಯಲು ಬಹಿರ್ದೆಸೆಯಿಂದ ಜನರನ್ನು ಮುಕ್ತಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಪರಿಣಾಕಾರಿ ಹೆಜ್ಜೆಯಿಟ್ಟಿದೆ. ಅದರ ಭಾಗವಾಗಿ ಶೌಚಾಲಯಗಳ ಸಮರ್ಪಕ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ‘ಸ್ವಚ್ಛ ಮತ್ತು ಸುಂದರ ಶೌಚಾಲಯ’ ಹೆಸರಲ್ಲಿ ಸಾರ್ವಜನಿಕರಿಗೆ ಮುಕ್ತ ಸ್ಪರ್ಧೆ ಏರ್ಪಡಿಸಿದ್ದು, ಜಿಲ್ಲೆಯ ಹಲವೆಡೆ ಶೌಚಾಲಯಗಳ ಸುಣ್ಣ-ಬಣ್ಣ ಜೋರಾಗಿದೆ.

Advertisement

ಜಿಲ್ಲೆಯಲ್ಲಿ 2012-13ರಲ್ಲಿ ನಡೆದ ಬೇಸ್‌ಲೈನ್‌ ಸಮೀಕ್ಷೆಯಲ್ಲಿ ಒಟ್ಟು 18145 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದವು. ಇನ್ನುಳಿದಂತೆ 135434 ಕುಟುಂಬಸ್ಥರು ಬಯಲು ಬಹಿರ್ದೆಸೆಯನ್ನೇ ಅಲವಂಬಿಸಿದ್ದರು. ಬಳಿಕ ಸ್ವಚ್ಛ ಭಾರತ ಯೋಜನೆಯಡಿ ವೈಯಕ್ತಿಕ ಹಾಗೂ ಗುಂಪು ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಯಿತು. 2013-14ರಿಂದ ಐದು ವರ್ಷಗಳಲ್ಲಿ ಒಟ್ಟು 135434 ಶೌಚಾಲಯ ನಿರ್ಮಿಸುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಿತ್ತು. ಆದರೆ, ಹಲವೆಡೆ ಶೌಚಾಲಯಗಳ ನಿರ್ವಹಣೆ ಮತ್ತು ಬಳಕೆಗೆ ಸಾರ್ವಜನಿಕರಿಂದ ನಿರುತ್ಸಾಹ ವ್ಯಕ್ತವಾಗುತ್ತಿದೆ. ಶೌಚಾಲಯಗಳು ಭೌತಿಕ ಪ್ರಗತಿಗೆ ಸೀಮಿತ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಪ್ರಗತಿ ಸಾಧಿಸುವ ಜಿಲ್ಲೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಸನ್ಮಾನಿಸುವಂತೆ ಇದೇ ಮೊದಲ ಬಾರಿಗೆ ‘ಸ್ವಚ್ಛ- ಸುಂದರ ಶೌಚಾಲಯ’ ಹೆಸರಲ್ಲಿ ಸಾರ್ವಜನಿಕರಿಗೂ ವೈಯಕ್ತಿಕವಾಗಿ ಸ್ಪರ್ಧೆ ಆಯೋಜಿಸಿದೆ.

ಸ್ಪರ್ಧೆಗೆ ಇನ್ನೂ 15 ದಿನ ಗಡುವು: ಸಾರ್ವಜನಿಕರು ತಮ್ಮ ಶೌಚಾಲಯಗಳಿಗೆ ಸುಣ್ಣ- ಬಣ್ಣ ಬಳಿಯುವುದರೊಂದಿಗೆ ಆಕರ್ಷಕ ಚಿತ್ರ ಬಿಡಿಸಬೇಕು. ‘ಸ್ವಚ್ಛ ಭಾರತ ಅಭಿಯಾನ’ ಸೇರಿದಂತೆ ವಿವಿಧ ಯೋಜನೆಗಳು, ಗೊಂಬೆ, ನಿಸರ್ಗ, ಕಾರ್ಟೂನ್‌ ಮತ್ತಿತರೆ ಚಿತ್ರಗಳಿಂದ ಕಂಗೊಳಿಸುವಂತೆ ಮಾಡಬೇಕು. ಆ ಪೈಕಿ ಅತ್ಯುತ್ತಮ ಶೌಚಾಲಯಗಳನ್ನು 10 ಫೋಟೋಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ಡಿಡಿಡಬ್ಲ್ಯೂಎಸ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಬಳಿಕ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಶೌಚಾಲಯಗಳ ಮಾಲೀಕರಿಗೆ ಪುರಸ್ಕಾರ ನೀಡಲಾಗುತ್ತದೆ. ಹೀಗಾಗಿ ಗದಗ ತಾಲೂಕಿನ ತಿಮ್ಮಾಪುರ, ನರಗುಂದ ತಾಲೂಕಿನ ರೆಡ್ಡೇರನಾಗನೂರು, ಕೊಣ್ಣೂರು, ಹುಣಸಿಕಟ್ಟಿ, ಮುಂಡರಗಿ ತಾಲೂಕು ಕೊರ್ಲಹಳ್ಳಿ, ರೋಣ ತಾಲೂಕಿನ ಮಾಡಲಗೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ವೈಯಕ್ತಿಕ ಹಾಗೂ ಗುಂಪು ಶೌಚಾಲಯಗಳು ಸುಣ್ಣ-ಬಣ್ಣ ಕಾಣುತ್ತಿವೆ. ಇನ್ನು, ಗುಂಪು ಶೌಚಾಲಯಗಳಿಗೆ ಗ್ರಾಪಂ ವತಿಯಿಂದಲೇ ಸುಣ್ಣ- ಬಣ್ಣ ಬಳಿಯಲಾಗುತ್ತಿದೆ.

ಸುಣ್ಣ-ಬಣ್ಣಕ್ಕೂ ‘ಬರ’ ಅಡ್ಡಿ: ಈಗಾಗಲೇ ಸತತ ಬರಿಂದ ಕಂಗೆಟ್ಟಿರುವ ಜಿಲ್ಲೆಯ ಗ್ರಾಮೀಣ ಜನರು ಕೂಲಿಗಾಗಿ ಗುಳೆ ಹೋಗಿದ್ದಾರೆ. ಅಲ್ಲದೇ, ಸ್ಥಳೀಯವಾಗಿ ಸಿಗುವ ಕೂಲಿ ಹಣದಲ್ಲೇ ಅನೇಕರು ದಿನ ದೂಡುವಂತಾಗಿದೆ. ಹೀಗಾಗಿ ಸ್ವಚ್ಛ- ಸುಂದರ ಶೌಚಾಲಯ ಸ್ಪರ್ಧೆಗೆ ಸಹಜವಾಗಿಯೇ ನಿರುತ್ಸಾಹ ವ್ಯಕ್ತವಾಗುತ್ತಿದೆ. ಸದ್ಯ ಬರಗಾಲದಲ್ಲಿ ತಿನ್ನುವುದಕ್ಕೂ ಪರದಾಡುವಂತ ಪರಿಸ್ಥಿತಿಯಿದೆ. ಶೌಚಾಲಯಗಳಿಗೆ ಸಿಂಗಾರಕ್ಕೆ ಏನಿಲ್ಲ ಎಂದರೂ ಒಂದು ಸಾವಿರ ರೂ. ಖರ್ಚಾಗುತ್ತದೆ. ಅಷ್ಟು ಹಣ ಎಲ್ಲಿಂದ ತರಬೇಕು ಎಂಬುದು ಗ್ರಾಮೀಣ ಜನರ ಪ್ರಶ್ನೆಯಾಗಿದೆ. ಶೌಚಾಲಯಗಳನ್ನು ಕಟ್ಟಿಕೊಟ್ಟಿಸಿರುವ ಸರಕಾರವೇ ಅವುಗಳ ಸುಣ್ಣ-ಬಣ್ಣಕ್ಕೂ ಹಣ ನೀಡಬೇಕು ಎಂಬ ಮಾತುಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೂ, ಸ್ವಚ್ಛ-ಸುಂದರ ಸ್ಪರ್ಧೆ ಯಶಸ್ವಿಗಾಗಿ ಜನರನ್ನು ಪ್ರೇರೇಪಿಸಲು ಪಿಡಿಒಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಜನ ಜಾಗೃತಿಗಾಗಿ ಹಲವೆಡೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೆರವನ್ನೂ ಪಡೆಯಲಾಗುತ್ತಿದೆ.

‘ಸ್ವಚ್ಛ, ಸುಂದರ’ ಶೌಚಾಲಯ ಸ್ಪರ್ಧೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಅನೇಕರು ಸುಣ್ಣ- ಬಣ್ಣ ಕಾರ್ಯ ಆರಂಭಿಸಿದ್ದಾರೆ. ಸಮುದಾಯ ಮೂತ್ರಾಲಯ ಮತ್ತು ಶೌಚಾಲಯಗಳಿಗೆ ಗ್ರಾಪಂ ವತಿಯಿಂದಲೇ ಬಣ್ಣ ಬಳಿಯಲಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ಪ್ರಯತ್ನಿಸುತ್ತೇವೆ.
• ಕೆ.ಎಲ್‌. ಪೂಜಾರ,
ಕುರ್ತಕೋಟಿ ಪಿಡಿಒ

Advertisement

ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರಕಾರ ಸ್ಪರ್ಧೆ ಆಯೋಜಿಸಿದೆ. ಅದಕ್ಕೆ ತಗಲುವ ವೆಚ್ಚವನ್ನು ಆಯಾ ಮನೆ ಮಾಲೀಕರೆ ಭರಿಸಬೇಕು. ಜ.1 ರಿಂದ 31ರ ವರೆಗೆ ಸ್ಪರ್ಧೆ ನಡೆಯಲಿದ್ದು, ಪ್ರತಿ ನಿತ್ಯ 10 ಅತ್ಯತ್ತಮ ಶೌಚಾಲಯಗಳ ಚಿತ್ರಗಳನ್ನು ಡಿಡಿಡಬ್ಲ್ಯೂಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ.
• ಕೃಷ್ಣ ದೊಡ್ಡಮನಿ,
ಜಿಪಂ ಸ್ವಚ್ಛ ಭಾರತ ಅಭಿಯಾನ ಜಿಲ್ಲಾ ಸಂಯೋಜಕ

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next