Advertisement
ಧನಾತ್ಮಕ: ಮಧ್ಯಮ ವರ್ಗದ ಜನರಿಗೆ ಕೊಂಚ ಸಮಾಧಾನ ತರುವ 7 ಲಕ್ಷ ರೂ.ಗಳವರೆಗಿನ ಗೃಹ ಸಾಲಕ್ಕೆ 15 ವರ್ಷಗಳ ಅವಧಿಗೆ ತೆರಿಗೆ ವಿನಾಯಿತಿ, ವಾರ್ಷಿಕ 5 ಲಕ್ಷ ಆದಾಯಕ್ಕಿಂತ ಇರುವವರಿಗೆ ತೆರಿಗೆ ವಿನಾಯಿತಿ, ಜಿಎಸ್‌ಟಿಯಿಂದ 17 ತೆರಿಗೆಗಳ ರದ್ದು, ನಾರಿ ಟು ನಾರಾಯಣಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳ ಮಹಿಳೆಯರ ಪಾಲುದಾರಿಕೆಗೆ ಒತ್ತು, ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೆ ಒತ್ತು, 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ರೂ. ಮಾಸಿಕ ಪಿಂಚಣಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಐದು ವರ್ಷಗಳಲ್ಲಿ 1.25 ಲಕ್ಷ ಕಿ.ಮೀ. ರಸ್ತೆ ಅಭಿವೃದ್ಧಿ, ಶೂನ್ಯ ಬಂಡವಾಳ ಕೃಷಿಯನ್ನು ಉತ್ತೇಜಿಸುವುದು, 2024ರೊಳಗೆ ಎಲ್ಲ ಮನೆಗಳಿಗೂ ನೀರು ನೀಡುವ ಹರ್ ಘರ್ ಜಲ್, ಇತ್ಯಾದಿ ಯೋಜನೆಗಳು ಮಧ್ಯಮ ವರ್ಗದ ಜನರಿಗೆ ಸಂತಸ ಮೂಡಿಸಿವೆ.
Related Articles
Advertisement
ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ.ಗಳನ್ನೂ ನೀಡಿದ್ದರು. ಅದಾದ ಬಳಿಕ ಇದಕ್ಕೆ ಕೇಂದ್ರ ಅನುದಾನ ನೀಡಿಲ್ಲ. ಈ ಬಾರಿಯೂ ಯಾವುದೇ ಅನುದಾನ ಘೋಷಿಸಿಲ್ಲ.
ರಾಜ್ಯದ ಕೊನೆ ರೈಲ್ವೆ ನಿಲ್ದಾಣ:ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾಗಿದೆ. ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ, ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ.
ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಈ ಮಾರ್ಗದಲ್ಲಿ ಯಾವುದೇ ಕ್ರಾಸಿಂಗ್ ಪಾಯಿಂಟ್ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ, ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್ ಪಾಯಿಂಟ್ ಮಾಡಿದರೆ ಬಹಳ ಅನುಕೂಲವಾಗಲಿದೆ ಎಂದು ಹಿಂದಿನ ಸಂಸದರು ಮನವಿ ಸಲ್ಲಿಸಿದ್ದರು.
ರೈಲುಗಳ ಸ್ವಚ್ಛತಾ ಘಟಕವೂ ಈಡೇರಿಲ್ಲ: ಮೈಸೂರಿನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾ.ನಗರದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾ.ನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ಬಹಳ ಅನುಕೂಲವಾಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ ಎಂಬ ಕಾರಣದಿಂದ ಚಾಮರಾಜನಗರದಲ್ಲಿ ರೈಲುಗಳ ಸ್ವಚ್ಛತಾ ಘಟಕ ಸ್ಥಾಪಿಸಬೇಕೆಂದು ಕೋರಲಾಗಿತ್ತು. ಇದಾವುದೂ ಈಡೇರಿಲ್ಲ.
ಸಂಶೋಧನಾ ಸಂಸ್ಥೆ ಕಾರ್ಯಗತವಾಗಿಲ್ಲ: ಕಳೆದ ಬಾರಿಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಹಿಂದಿನ ಸಂಸದ ಆರ್. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಚಾಮರಾಜನಗರ ಜಿಲ್ಲೆಗೆ ಈ ಸಂಸ್ಥೆಯನ್ನು ಮಂಜೂರು ಮಾಡಿಕೊಡಬೇಕು ಎಂದು ಕೋರಿದ್ದರು. ಇದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಲಯವನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದರು ಅದು ಸಹ ಕಾರ್ಯಗತವಾಗಿಲ್ಲ.