Advertisement

ಮಿಕ್ಸೆಡ್‌ ರಿಲೇ : ಫೈನಲಿಗೆ ತೇರ್ಗಡೆ, ಒಲಿಂಪಿಕ್ಸ್‌ಗೆ ಅರ್ಹತೆ

09:53 AM Oct 01, 2019 | Team Udayavani |

ದೋಹಾ: ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಭಾರತೀಯ 4×400 ಮೀ. ಮಿಕ್ಸೆಡ್‌ ರಿಲೇ ತಂಡವು ಫೈನಲಿಗೇರಿದ ಸಾಧನೆ ಮಾಡಿತಲ್ಲದೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ.

Advertisement

ಮುಹಮ್ಮದ್‌ ಅನಾಸ್‌, ವಿ.ಕೆ. ವಿಸ್ಮಯ, ನಿರ್ಮಲ್‌ ನೋಹ್‌ ಮತ್ತು ಜಿಸ್ನಾ ಮ್ಯಾಥ್ಯೂ ಅವರನ್ನೊಳಗೊಂಡ ಭಾರತೀಯ ತಂಡವು ತಮ್ಮ ಹೀಟ್‌ನಲ್ಲಿ 3:16.14 ಸೆಕೆಂಡುಗಳ ದಾಖಲೆಯ ಸಮಯದೊಂದಿಗೆ 3ನೇ ಸ್ಥಾನ ಪಡೆದು ಫೈನಲಿಗೆ ತೇರ್ಗಡೆಯಾಯಿತು.

ಎರಡು ಹೀಟ್‌ಗಳ ತಲಾ ಮೂರು ಅಗ್ರ ತಂಡಗಳ ಸಹಿತ ಇನ್ನೆರಡು ಅತೀವೇಗವಾಗಿ ಸ್ಪರ್ಧೆ ಮುಗಿಸಿದ ತಂಡಗಳು ಫೈನಲಿಗೆ ತೇರ್ಗಡೆ ಯಾಗಲಿವೆ. ಫೈನಲಿಗೇರಿದ ಅಗ್ರ 8 ತಂಡಗಳು ನೇರವಾಗಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲಿವೆ.

ರಿಲೇ ಓಟದ ಕ್ಷಣ
ರಾಷ್ಟ್ರೀಯ ದಾಖಲೆ ಹೊಂದಿರುವ ಅನಾಸ್‌ ಮೊದಲಾಗಿ ಓಡಿದರು. ಆಬಳಿಕ ವಿಸ್ಮಯ ಅಮೋಘ ನಿರ್ವಹಣೆ ನೀಡಿ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಜಿಸ್ನಾ ಓಡುವ ವೇಳೆ ಜಪಾನ್‌ ಮತ್ತು ಪೋಲಂಡ್‌ ಮುನ್ನಡೆಯಲ್ಲಿತ್ತು. ಜಿಸ್ನಾ ಮತ್ತು ಕೊನೆಯ ಸ್ಪರ್ಧಿ ನೋಹ್‌ ಅವರ ನಡುವಣ ಬಾಟನ್‌ ವಿನಿಮಯ ಸಾಂಗವಾಗಿ ನಡೆದಿರಲಿಲ್ಲ. ಆದರೆ ನೋಹ್‌ ಚಿರತೆಯಂತೆ ಓಡಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾದರು. ಈ ಮೂಲಕ ಭಾರತ ಫೈನಲಿಗೆ ಮತ್ತು ಒಲಿಂಪಿಕ್ಸ್‌ ಗೆ ಅರ್ಹತೆ ಗಳಿಸಿತು. ಭಾರತ ಒಟ್ಟಾರೆ 7ನೇ ಸ್ಥಾನದಲ್ಲಿದ್ದರೆ 3:12.42 ಸೆ.ನಲ್ಲಿ ಗುರಿ ತಲುಪಿದ ಅಮೆರಿಕ ಅಗ್ರಸ್ಥಾನದಲ್ಲಿದೆ.

ಸಿಫಾನ್‌ಗೆ ಚಿನ್ನ
ವನಿತೆಯರ 10,000 ಮೀ. ಸ್ಪರ್ಧೆಯಲ್ಲಿ ನೆದರ್ಲೆಂಡಿನ ಸಿಫಾನ್‌ ಹಾಸನ್‌ ತನ್ನ ಜೀವನಶ್ರೇಷ್ಠ ನಿರ್ವಹಣೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಕೊನೆಯ ಲ್ಯಾಪ್‌ನಲ್ಲಿ ಅಮೋಘವಾಗಿ ಓಡಿದ ಅವರು 30 ನಿಮಿಷ 17.63 ಸೆ.ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಇದು ಅವರ ಬಾಳ್ವೆಯ ಮೊದಲ ವಿಶ್ವ ಪ್ರಶಸ್ತಿಯಾಗಿದೆ. ಇಥಿಯೋಪಿಯಾದ ಲೆಟೆಸೆನ್‌ಬೆಟ್‌ ಗಿಡೆ ಬೆಳ್ಳಿ ಮತ್ತು ಕೀನ್ಯದ ಆ್ಯಗ್ನೆಸ್‌ ತಿರೋಪ್‌ ಕಂಚು ಪಡೆದರು.

Advertisement

ಕೋಲ್‌ವುನ್‌ ಮಿಂಚು
ಖಲೀಫಾ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದ ಅಮೆರಿಕದ ಕ್ರಿಸ್ಟಿಯನ್‌ ಕೋಲ್‌ವುನ್‌ 100 ಮೀ. ಸ್ಪರ್ಧೆಯಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. 9.76 ಸೆ.ನಲ್ಲಿ ಗುರಿ ತಲುಪಿದ ಅವರು ಹಾಲಿ ಚಾಂಪಿಯನ್‌ 37ರ ಹರೆಯದ ಜಸ್ಟಿನ್‌ ಗ್ಯಾಟಿÉನ್‌ (9.89 ಸೆ.) ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು. ಕಂಚು ಕೆನಡಾದ ಆಂದ್ರೆ ಡಿ ಗ್ರೇಸ್‌ ಪಾಲಾಯಿತು.

ಉಸೇನ್‌ ಬೋಲ್ಟ್ ಅವರಿಗಿಂತ ಕೇವಲ 0.18 ಸೆಕೆಂಡು ತಡವಾಗಿ ಗುರಿ ತಲುಪಿದ್ದ ಕೋಲ್‌ವುನ್‌ ಆ್ಯತ್ಲೆಟಿಕ್‌ ರಂಗದ ಹೊಸ ತಾರೆಯಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಬಾಳ್ವೆಯ ಪ್ರಮುಖ ಪ್ರಶಸ್ತಿಯೂ ಆಗಿದೆ.

ಪ್ರೈಸ್‌ಗೆ ಹ್ಯಾಮರ್‌ ಚಿನ್ನ
ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ಅನಿತಾ ವೋಡರ್‌ಝಿಕ್‌ ಅವರ ಅನುಪಸ್ಥಿತಿಯ ಲಾಭವೆತ್ತಿದ ಅಮೆರಿಕದ ಡಿಅನ್ನಾ ಪ್ರೈಸ್‌ ಅವರು ತನ್ನ ಮೂರನೇ ಪ್ರಯತ್ನದಲ್ಲಿ 77.54 ಮೀ. ದೂರ ಎಸೆದು ಹ್ಯಾಮರ್‌ ಸ್ಪರ್ಧೆಯ ಚಿನ್ನ ಗೆದ್ದುಕೊಂಡರು. ಈ ಸ್ಪರ್ಧೆಯಲ್ಲಿ ವಿಶ್ವ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ವನಿತೆ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ. ಕಳೆದ ಜುಲೈಯಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 78.24 ಮೀ. ದೂರ ಹ್ಯಾಮರ್‌ ಎಸೆದಿರುವುದು ಶ್ರೇಷ್ಠ ನಿರ್ವಹಣೆಯಾಗಿದೆ.

76.35 ಮೀ. ದೂರ ಎಸೆದಿರುವ ಜೋನಾ ಫಿಡೊರೊ ಬೆಳ್ಳಿ ಗೆದ್ದರೆ ಚೀನದ ವಾಂಗ್‌ ಜೆಂಗ್‌ (74.76 ಸೆ.) ಕಂಚು ಪಡೆದರು. ಗಾಯದ ಸಮಸ್ಯೆಯಿಂದಾಗಿ ವೋಡರ್‌ಝಿಕ್‌ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. ಕಳೆದ ಎರಡು ಒಲಿಂಪಿಕ್ಸ್‌ ನಲ್ಲಿ ಚಿನ್ನ ಜಯಿಸಿದ್ದ ವೋಡರ್‌ಝಿಕ್‌ ಕಳೆದ ಐದು ವಿಶ್ವ ಆ್ಯತ್ಲೆಟಿಕ್ಸ್‌ನ ಸ್ಪರ್ಧೆಗಳಲ್ಲಿ ನಾಲ್ಕು ಬಾರಿ ಚಿನ್ನ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next