Advertisement

ವಿದ್ಯುತ್‌ ಕಂಬದಲ್ಲಿ ನೆಟ್‌ವರ್ಕ್‌ ಕೇಬಲ್‌ ಅಳವಡಿಸಲು ಪಾಲಿಕೆ ಅನುಮತಿ ಕಡ್ಡಾಯ 

08:46 PM Aug 26, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗ, ರಸ್ತೆ ಪಕ್ಕದ ಮರಗಳು, ವಿದ್ಯುತ್‌ ಕಂಬಗಳಲ್ಲಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ದೂರಸಂಪರ್ಕ ಕೇಬಲ್‌ಗ‌ಳನ್ನು ಅಳವಡಿಸಲು ಇನ್ನು ಮುಂದೆ ಮನಪಾ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

Advertisement

ಈ ರೀತಿ ವಿದ್ಯುತ್‌ ಕಂಬಗಳಲ್ಲಿ ಕೇಬಲ್‌ ಅಳವಡಿಸಲು ಈ ಹಿಂದೆ ಮೆಸ್ಕಾಂ ಅನುಮತಿ ನೀಡುತ್ತಿತ್ತು. ಅದರಂತೆ, ಆಯಾ ಸಂಸ್ಥೆಯವರು ನಿರ್ದಿಷ್ಟ ಪ್ರದೇಶದಲ್ಲಿ ಕೇಬಲ್‌ ಅಳವಡಿಕೆ ಮಾಡುತ್ತಿದ್ದರು. ಹೀಗಿದ್ದಾಗಲೂ ನಗರದ ಅಲ್ಲಲ್ಲಿ ಅನಧಿಕೃತವಾಗಿಯೂ ಕೇಬಲ್‌ಗ‌ಳು ಕಾಣಿಸಿಕೊಂಡಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾ ಗುತ್ತದೆ ಎಂದು ಮನಪಾ ಸಾಮಾನ್ಯ ಸಭೆಯ ಲ್ಲಿಯೂ ಸದಸ್ಯರಿಂದ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನಪಾ ಆಯುಕ್ತರು ಮೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದೀಗ ಮೆಸ್ಕಾಂನಿಂದ ಅನುಮತಿಗೆ ಪಾಲಿಕೆಯ ನಿರಾಕ್ಷೇಪಣೆ ಪತ್ರವನ್ನು ಕಡ್ಡಾಯಗೊಳಿಸಿದೆ.

ನೂತನ ನಿಯಮದಂತೆ ನಗರದಲ್ಲಿ ಕರೆಂಟ್‌ ಕಂಬಗಳಲ್ಲಿ ಕೇಬಲ್‌ ಅಳವಡಿಸಲು ಪಾಲಿಕೆಯಿಂದ ನಿರಾಕ್ಷೇಪಣೆ ಪತ್ರವನ್ನು ತರಬೇಕು. ಬಳಿಕ ಆ ಪತ್ರವನ್ನು ಮೆಸ್ಕಾಂಗೆ ಸಲ್ಲಿಸಬೇಕಾಗುತ್ತದೆ. ಅದರ ಆಧಾರದಲ್ಲಿ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಳಿಕವಷ್ಟೇ ಕೇಬಲ್‌ ಅಳವಡಿಸಲು ಅನುಮತಿ ನೀಡುತ್ತಾರೆ.

ಕಂಬದ ಮೇಲೆ ಕೇಬಲ್‌ ಬಂಡಲ್‌:

ರಥಬೀದಿ, ಬಂದರು, ಮಣ್ಣಗುಡ್ಡೆ, ಕದ್ರಿ, ಕುಂಟಿಕಾನ, ಕೊಡಿಯಾಲಬೈಲ್‌, ಕೊಟ್ಟಾರ ಸಹಿತ ವಿವಿಧ ಕಡೆಗಳಲ್ಲಿ ವಿದ್ಯುತ್‌ ಕಂಬಗಳಲ್ಲಿ ಮಾಮೂಲಿ ವಿದ್ಯುತ್‌ ತಂತಿಗಳಲ್ಲದೆ, ಪ್ರತ್ಯೇಕ ಕೇಬಲ್‌ಗ‌ಳನ್ನು ಅಳವಡಿಸಲಾಗಿದೆ. ಎಲ್ಲ ಕಂಬಗಳ ಮೇಲೆ ಸುರುಳಿ ಸುತ್ತಿದ ಕೇಬಲ್‌ ಬಂಡಲ್‌ಗ‌ಳನ್ನು ಅನಗತ್ಯವಾಗಿ ನೇತು ಹಾಕಲಾಗಿದೆ. ಈ ಕಂಬಗಳಲ್ಲಿ ರಿಪೇರಿ ಬಂದರೆ ಲೈನ್‌ಮನ್‌ಗೆ

Advertisement

ಕಂಬವೇರುವುದು ತ್ರಾಸದಾಯಕ ಕೆಲಸ. ಅವಘಡ ಸಾಧ್ಯತೆಯೂ ಹೆಚ್ಚು. ತುರ್ತು ಸಂದರ್ಭಗಳಲ್ಲಿ ಕಂಬದ ಮೇಲೇರುವಂತೆಯೂ ಇಲ್ಲ, ತತ್‌ಕ್ಷಣ ಕೆಳಗೆ ಬರಲೂ ಸಾಧ್ಯವಿಲ್ಲ. ಮಳೆಗಾಲದಲ್ಲಿ ಕಂಬಗಳಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೇತುಹಾಕಿರುವ ಟಿವಿ ಕೇಬಲ್‌ ಹಾಗೂ ಆಪ್ಟಿಕ್‌ ಕೇಬಲ್‌ಗ‌ಳನ್ನು (ಒಎಫ್‌ಸಿ) ತೆರವುಗೊಳಿಸಬೇಕು ಎಂದು ಕೆಲವು ತಿಂಗಳ ಹಿಂದೆ ಹೈಕೋರ್ಟ್‌ ಕೂಡ ಸೂಚನೆ ನೀಡಿತ್ತು.

ಈಗಿದ್ದ ಕೇಬಲ್‌ಗ‌ಳಿಗೆ ಅನುಮತಿಯೇ?:

“ಮಂಗಳೂರಿನಲ್ಲಿ ಕಂಬಗಳಲ್ಲಿ ಹೊಸದಾಗಿ ಕೇಬಲ್‌ ಅಳವಡಿಕೆ ನಿರಾಕ್ಷೇಪಣೆ ಪತ್ರವನ್ನು ಮನಪಾ ಕಡ್ಡಾಯಗೊಳಿಸಿದೆ. ಆದರೆ ಈಗಾಗಲೇ ನಗರದ ವಿವಿಧ ಕಡೆಗಳ ಕಂಬಗಳಲ್ಲಿ ಕೇಬಲ್‌ ಅಳವಡಿಸಲಾಗಿದೆ. ಹಲವು ಕಡೆ ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಮನಪಾ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಒಂದು ವೇಳೆ ಕೇಬಲ್‌ ಅಳವಡಿಸಿದರೆ ಅದರಿಂದ ಮನಪಾಕ್ಕೆ ಆದಾಯ ಬರಬೇಕು. ಸದ್ಯ ನಗರದ ಸೌಂದ ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆಯೇ ವಿನಾ ಯಾವುದೇ ರೀತಿಯ ಆದಾಯ ಬರುತ್ತಿಲ್ಲ. ತತ್‌ಕ್ಷಣ ಈ ರೀತಿಯ ಕೇಬಲ್‌ ತೆರವು ಮಾಡಲು ಮನಪಾ ಮುಂದಾಗಬೇಕಿದೆ. ಇನ್ನು, ಈಗಿದ್ದ ಕೇಬಲ್‌ಗ‌ಳನ್ನು ನೆಲದೊಳಗೆ ಅಳವಡಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕಿದೆ’ ಎನ್ನುತ್ತಾರೆ ಮನಪಾ ಸದಸ್ಯ ಅಬ್ದುಲ್‌ ರವೂಫ್‌.

ಮಂಗಳೂರು ನಗರದಲ್ಲಿ ನೆಟ್‌ವರ್ಕ್‌ ಕಂಪೆನಿಯವರು ಹೊಸದಾಗಿ ಕೇಬಲ್‌ ಅಳವಡಿಸುವಾಗ ಪಾಲಿಕೆಯಿಂದ ನಿರಾಕ್ಷೇಪಣೆ ಪತ್ರವನ್ನು ಕಡ್ಡಾಯಗೊಳಿಸಿದ್ದೇವೆ. ನಗರದ ಪಾದಚಾರಿ ಮಾರ್ಗ ಸಹಿತ ಹಲವು ಕಡೆಗಳ ರಸ್ತೆ ಬದಿ ಕಂಬಗಳಲ್ಲಿ ಕೇಬಲ್‌ಗ‌ಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಕೇಬಲ್‌ಗ‌ಳನ್ನು ತತ್‌ಕ್ಷಣ ತೆರವುಗೊಳಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. – ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತ

ಮೆಸ್ಕಾಂನ ವಿದ್ಯುತ್‌ ಕಂಬದಲ್ಲಿ ನೆಟ್‌ವರ್ಕ್‌ ಕೇಬಲ್‌ ಅಳವಡಿಸಲು ಅವಕಾಶ ಇದೆ. ಅದಕ್ಕೆಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆಯಾ ಸಂಸ್ಥೆಯವರಿಗೆ ನಿಗದಿತ ದರ ನಿಗದಿಪಡಿಸಿದೆ. ಅದರಂತೆ ಅವರಿಂದ ಹಣ ಪಡೆಯಲಾಗುತ್ತದೆ. ಆದರೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಕೇಬಲ್‌ ಅಳವಡಿಸಬಾರದು. – ಪ್ರಶಾಂತ್‌ ಕುಮಾರ್‌ ಮಿಶ್ರಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next