ಕೊಪ್ಪಳ: ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರಿನಲ್ಲಿ ಬೆಳೆ ಕಟಾವು ಸಮೀಕ್ಷೆಯಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರಿಗೆ ಬರಬೇಕಿದ್ದ ಬೆಳೆವಿಮೆ ಬರದಂತ ಪರಿಸ್ಥಿತಿ ಎದುರಾಗಿದೆ. ಅಚ್ಚರಿಯಂದರೆ ಯಾರದೋ ಜಮೀನಿನಲ್ಲಿ ಮಾಡಬೇಕಿದ್ದ ಬೆಳೆ ಕಟಾವು ಸಮೀಕ್ಷೆ ಇನ್ಯಾರಧ್ದೋ ಜಮೀನಿನಲ್ಲಿ ಮಾಡಿದ್ದಾರೆ.
ಹೌದು.. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಕಟಾವು ಸಮೀಕ್ಷೆ ಕಳೆದ ವರ್ಷ ಸರಿಯಾಗಿ ನಡೆದಿಲ್ಲ. ಇದರಿಂದ ನಮಗೆ ಬೆಳೆ ವಿಮೆಯೂ ಬಂದಿಲ್ಲ ಎಂದು ರೈತರು ವೇದನೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ಭೀಕರ ಬರದ ಪರಿಸ್ಥಿತಿಯಿಂದಾಗಿ ರೈತ ಸಮೂಹ ಬೆಂದು ಹೋಗಿತ್ತು. ಬಿತ್ತನೆ ಮಾಡಿದ ಬೆಳೆ ಮೊಳಕೆ ಒಡೆಯುವ ಹಂತದಲ್ಲೇ ಕಮರಿ ಹೋಗಿತ್ತು. ಬೆಳೆ ರಕ್ಷಣೆಗಾಗಿ ಮೊದಲೇ ವಿಮೆ ಮಾಡಿಸಿಕೊಂಡಿದ್ದ ಹಲವು ರೈತರು ವಿಮೆ ಹಣವಾದರೂ ನಮ್ಮ ಕೈ ಸೇರಲಿದೆ ಎಂಬ ನಂಬಿಕೆಯಿಂದ ವಿಮೆ ಹಣಕ್ಕಾಗಿ ಕಾಯುತ್ತಿದ್ದರು. ಇಲಾಖೆ ಹಂತದಲ್ಲಿ ಮಾಡಿದ ಎಡವಟ್ಟು ಈಗ ಬೆಳಕಿಗೆ ಬಂದಿದೆ.
ಬೆಳೆ ಕಟಾವು ಸಮೀಕ್ಷೆ ಮಾಡುತ್ತೆ: ಸರ್ಕಾರ ಪ್ರತಿ ವರ್ಷ ಬೆಳೆ ಕಟಾವು ಸಮೀಕ್ಷೆಯನ್ನು ಕೈಗೊಳ್ಳುತ್ತದೆ. ಜಿಲ್ಲೆಯಲ್ಲಿನ ಗ್ರಾಪಂ ಹಂತದಲ್ಲಿ ಮಳೆಯಾಶ್ರಿತ ಪ್ರದೇಶದ ಆಯ್ದ ರೈತರ ಜಮೀನುಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳುತ್ತದೆ. ಆ ರೈತರ ಜಮೀನಿನಲ್ಲಿ ಇರುವ ಬೆಳೆಯನ್ನು ನಾಲ್ಕು ವಿಧಾನದಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡುತ್ತದೆ. ಆ ಇಳುವರಿ ಜಿಪಿಎಸ್ ಆಧಾರಿತವಾಗಿರುತ್ತದೆ. ಅಲ್ಲದೇ ಇದೇ ಬೆಳೆ ಕಟಾವು ಸಮೀಕ್ಷೆ ಇಳುವರಿ ಲೆಕ್ಕಾಚಾರದ ಮೇಲೆ ಬೆಳೆ ವಿಮೆಯು ರೈತರಿಗೆ ಬರಲಿದೆ. ಒಂದು ವೇಳೆ ಕಟಾವಿನ ವಿಧಾನದಲ್ಲಿ ನಿಗದಿಗಿಂತ ಹೆಚ್ಚಿನ ಇಳುವರಿ ಬಂದರೆ ಆ ರೈತನಿಗೆ ಬೆಳೆ ವಿಮೆ ಬರುವುದಿಲ್ಲ.
ನಡೆದಿರುವುದು ಏನು?: ತಾಲೂಕಿನ ಬೆಟಗೇರಿ ಗ್ರಾಪಂನಲ್ಲಿ 2018-19ನೇ ಸಾಲಿನಲ್ಲಿ ನಾಲ್ಕು ಬೆಳೆ ಕಟಾವು ಸಮೀಕ್ಷೆ ಆಯ್ಕೆಯಾಗಿವೆ. ಈ ಪೈಕಿ 151/ಸಿ ಸರ್ವೇ ನಂಬರ್‌ನ ರೈತನ ಜಮೀನಿನಲ್ಲಿ ಸರ್ವೇ ಮಾಡಬೇಕು. ಅದನ್ನು ಬಿಟ್ಟು ಗ್ರಾಪಂ ಪಿಡಿಒ ನೀರಾವರಿ ಪ್ರದೇಶದ ರೈತನ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಿದ್ದಾರೆ. ಇದರಿಂದ ಸರಾಸರಿಗಿಂತ ಹೆಚ್ಚು ಇಳುವರಿ ಬಂದಿದೆ. ಇದಲ್ಲದೇ 519/1ರ ರೈತನ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಬೇಕಿತ್ತು. ಆದರೆ ಇದನ್ನೂ ಬೇರೆ ರೈತನ ಜಮೀನಿನಲ್ಲಿ ಸಮೀಕ್ಷೆ ಮಾಡಿದ್ದಾರೆ. ಇನ್ನೂ ಮೋರನಾಳ ಗ್ರಾಮದಲ್ಲಿ 7/ಆ ಸರ್ವೇ ನಂಬರ್‌ನ ರೈತರ ಜಮೀನು ಬೆಳೆ ಕಟಾವು ಸಮೀಕ್ಷೆಗೆ ಆಯ್ಕೆಯಾಗಿತ್ತು. ಆದರೆ ಅದು ನೀರಾವರಿ ಪ್ರದೇಶವಾಗಿದೆ. ಹೀಗೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಬರದಲ್ಲೂ ಹೆಚ್ಚು ಇಳುವರಿ ಸಮೀಕ್ಷಾ ವರದಿ ಬಂದಿವೆ. ಹೀಗಾಗಿ ರೈತರಿಗೆ ಬೆಳೆವಿಮೆ ಬಾರದಂತಾಗಿದೆ.
ಕೃಷಿ, ಸಾಂಖೀಕ ಇಲಾಖೆ ಹೊಣೆ: ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಪಿಡಿಒ ಸೇರಿದಂತೆ ಕೆಳ ಹಂತದ ಅಧಿಕಾರಿಗಳು ನಿಗದಿತ ರೈತನ ಜಮೀನಿನಲ್ಲಿ ಜಿಪಿಎಸ್ ಮಾಡಬೇಕು. ಆದರೆ ಅವರ ಎಡವಟ್ಟಿನಿಂದ ಇನ್ಯಾವುದೋ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಿ ವರದಿ ನೀಡಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ಈ ಹೊಣೆಯನ್ನು ಕೃಷಿ ಹಾಗೂ ಸಾಂಖೀಕ ಇಲಾಖೆ ಹೊರಬೇಕಿದೆ. ಜಿಲ್ಲಾದ್ಯಂತ ಇಂತಹ ಪ್ರಕರಣಗಳು ನಡೆದಿವೆ. ಆದರೆ ಇದು ತಾಂತ್ರಿಕವಾಗಿ ಲೆಕ್ಕಾಚಾರ ಹಾಕಿದಾಗ ಮಾತ್ರ ಬೆಳಕಿಗೆ ಬರಲಿದೆ.
ಜಿಲ್ಲಾದ್ಯಂತ ಬೆಳೆ ಕಟಾವು ಸಮೀಕ್ಷೆ ವರದಿ ತನಿಖೆ ಮಾಡಿದರೆ ಮಾತ್ರ ಇಂತಹ ಹಲವು ಪ್ರಕರಣ ಹೊರ ಬರಲಿವೆ. ಅಲ್ಲದೇ, ಸರ್ಕಾರ ಹಾಗೂ ವಿಮೆ ಕಂಪನಿಯೂ ಈ ಬೆಳೆ ಕಟಾವು ಇಳುವರಿ ಲೆಕ್ಕಾಚಾರದ ಆಧಾರದ ಮೇಲೆಯೇ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿವೆ. ಅಧಿಕಾರಿಗಳು ಮಾಡುವ ಸಣ್ಣ ಎಡವಟ್ಟಿನಿಂದ ಇಂದು ರೈತರು ಬರದಲ್ಲೂ ಬೆಳೆವಿಮೆ ಪಡೆಯದಂತ ಸ್ಥಿತಿ ಎದುರಾಗಿದೆ.
•ದತ್ತು ಕಮ್ಮಾರ