ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಮತದಾನ ನಡೆಯಿತು. ಮತದಾನಕ್ಕೆ ಬೆಳಗಿನ ಜಾವ 7ಗಂಟೆಯ ಸಮಯಕ್ಕೂ ಮೊದಲೆ ಅಲ್ಲಲ್ಲಿನ ಮತಗಟ್ಟೆಗಳ ಎದುರು ಮತದಾರರು ಮತ ಚಲಾಯಿಸಲು ಸರಣಿಯಲ್ಲಿ ನಿಂತುಕೊಂಡಿದ್ದರು. ಪಟ್ಟಣದ ವಾರ್ಡ್ 4ರ ಮತಗಟ್ಟೆಯಲ್ಲಿ ಅಧಿಕಾರಿಗಳಿಂದ ಮತಯಂತ್ರ ನಿರ್ವಹಣೆ ತೊಂದರೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ
ವಿಳಂಬವಾಯಿತು.
ತಾಲೂಕಿನ ಖಂಡಾಳ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 21ರಲ್ಲಿ ಬೆಳಗಿನ ಜಾವ ಹಾಗೂ ಮಧ್ಯಾಹ್ನ ವೇಳೆ ಮತಯಂತ್ರ ದೋಷದಿಂದ ಸುಮಾರು ಮೂರು ಗಂಟೆ ಕಾಲ ಮತದಾನಕ್ಕೆ ಅಡ್ಡಿಯಾಗಿದ್ದು, ಮತಚಲಾಯಿಸಲು ಸರಣಿಗೆ ನಿಂತುಕೊಂಡಿದ್ದ ಮತದಾರರು ಪರದಾಡಿದ ಬಗ್ಗೆ ವರದಿಯಾಗಿದೆ.
ಆಳಂದ ವಾರ್ಡ್ 4ರ ಹಾಗೂ ಶರಣನಗರ ಮತಗಟ್ಟೆ, ಧಂಗಾಪುರ, ಕಲವಗಾ, ನೆಲ್ಲೂರ, ಚಿತಲಿ, ನಿಂಬಾಳ, ಜಮಗಾ (ಜೆ), ಕಮಲಾನಗರ ಇನ್ನಿತರ ಕೆಲ ಮತಗಟ್ಟೆಗಳಲ್ಲಿ ಮತಗಳಲ್ಲಿ ಮತಯಂತ್ರ ತಾಂತ್ರಿಕ ದೋಷಗಳಿಂದ ಕೆಲಕಾಲ ಮತದಾನಕ್ಕೆ ಅಡ್ಡಿ ಆಯಿತಾದರೂ ಸ್ಥಳಕ್ಕೆ ದಾವಿಸಿದ ಇಂಜಿನಿಯರ್‌ಗಳು ಯಂತ್ರಗಳ ದೋಷ ನಿವಾರಿಸಿದ ಬಳಿಕ ಮತದಾನ ಪ್ರಾರಂಭಿಸಲಾಯಿತು. ಅಲ್ಲಲ್ಲಿನ ಮತಗಟ್ಟೆಗಳಲ್ಲಿ ಮತಯಂತ್ರ ದೋಷ ಹಾಗೂ ಸಣ್ಣ-ಪುಟ್ಟ ಕಲಹ ಹೊರತು ಪಡಿಸಿದರೆ ಉಳಿದೆಲ್ಲ ಕಡೆ ಮತದಾನ ಶಾಂತಿಯುತವಾಗಿ ನಡೆಯಿತು.
ಅಭ್ಯರ್ಥಿಗಳಿಂದ ಮತ: ಸರಸಂಬಾ ಗ್ರಾಮದಲ್ಲಿ ಶಾಸಕ ಬಿ.ಆರ್. ಪಾಟೀಲ, ತಡಕಲ್ ಗ್ರಾಮದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಕೋರಳ್ಳಿ ಗ್ರಾಮದಲ್ಲಿ ಸೂರ್ಯಕಾಂತ ಕೋರಳ್ಳಿ, ಹಳ್ಳಿಸಲಗರ ಗ್ರಾಮದಲ್ಲಿ ಜೆಡಿಯು ಅಭ್ಯರ್ಥಿ ಅರುಣಕುಮಾರ ಸಿ. ಪಾಟೀಲ, ಆಳಂದನಲ್ಲಿ ಎಂಇಪಿ ಅಭ್ಯರ್ಥಿ ಅಫಜಲ್ ಅನ್ಸಾರಿ ಸೇರಿದಂತೆ ಇನ್ನಿತರ ಅಭ್ಯರ್ಥಿಗಳು ತಮ್ಮ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.
ಗಣ್ಯರಿಂದ ಮತ: ಖಜೂರಿ ಮತಗಟ್ಟೆ 12ರಲ್ಲಿ ಮುರುಘೇಂದ್ರ ಶ್ರೀ, ಮಾದನಹಿಪ್ಪರಗಾ ಮತಗಟ್ಟೆ ಸಂಖ್ಯೆ 6ರಲ್ಲಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಸಂಖ್ಯೆ 3ರಲ್ಲಿ ಶಾಂತವೀರ ಶಿವಾಚಾರ್ಯರು, ಮಾಡಿಯಾಳದಲ್ಲಿ ಒಪ್ಪತ್ತೇಶ್ವರ ಸ್ವಾಮೀಜಿ, ಜಿಪಂ ಸದಸ್ಯರಾದ ತಡಕಲ್‌ನಲ್ಲಿ ಹರ್ಷಾನಂದ ಗುತ್ತೇದಾರ, ನಿಂಬಾಳದಲ್ಲಿ ಗುರುಶಾಂತ ಪಾಟೀಲ, ಮಾಡಿಯಾಳದಲ್ಲಿ ಸಿದ್ದರಾಮ ಪ್ಯಾಟಿ, ಬೆಳಮಗಿ ಗ್ರಾಮದಲ್ಲಿ ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ ಮತಚಲಾಯಿಸಿದ್ದಾರೆ.
ಗಮನ ಸೆಳೆದ ಸಖೀ ಪಿಂಕ್ ಮತಗಟ್ಟೆ: ಮಹಿಳೆಯರನ್ನು ಮತಗಟ್ಟೆ ಕಡೆಗೆ ಆಕರ್ಷಿಸಿ ಪ್ರೇರೇಪಿಸುವ ಸಂಬಂಧ ಸ್ಥಾಪಿಲಾದ ಸಖೀ ಪಿಂಕ್ ಮತಗಟ್ಟೆ ಕೇಂದ್ರಕ್ಕೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಕೈಗೊಂಡರು. ಪಟ್ಟಣದ ಜೂನಿಯರ್ ಕಾಲೇಜು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಖೀ ಪಿಂಕ್ ಮತ್ತು ಮಾದರಿ ಮತದಾನ ಕೇಂದ್ರದಲ್ಲಿ ಮತದಾನ ನಡೆಯಿತು.
ಯಂತ್ರ ಸರಿಪಡಿಸಿ ಮತದಾನ ಮಾಡಿದರು: ಪಟ್ಟಣದ ವಾರ್ಡ್ 4ರ ಮತಗಟ್ಟೆ ಸಂಖ್ಯೆ 81ರಲ್ಲಿ ಮತದಾನ ಆರಂಭ ವಿಳಂಬವಾಯಿತು. ಈ ಮಧ್ಯ ಮತ ಚಲಾಯಿಸಲು ಆಗಮಿಸಿದ್ದ ಚುನಾವಣೆಯ ಮಾಸ್ಟ್‌ರ ಟ್ರೇನರ್ ಸಂತೋಷ ವೇದಪಾಠಕ ಯಂತ್ರನಿರ್ವಹಣೆ ಮಾಹಿತಿ ಒದಗಿಸಿ ತಾಂತ್ರಿಕ ತೊಂದರೆ ಸರಿಪಡಿಸುವ ಮೂಲಕ ಮೊದಲು ಮತದಾನ ಕೈಗೊಂಡರು.