ಹುಬ್ಬಳ್ಳಿ:16 ಯುವಜನರಿರುವ ಮಿಷನ್ ಹಂಗರ್ ತಂಡ ಕಳೆದ 98 ದಿನಗಳಿಂದ ನಗರದ ವಿವಿಧ ಪ್ರದೇಶಗಳಲ್ಲಿರುವ ಬೀದಿ ನಾಯಿ ಹಾಗೂ ಬಿಡಾಡಿ ದನಗಳಿಗೆ ಪ್ರತಿದಿನ ರಾತ್ರಿ ಆಹಾರದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ.ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗೋಕುಲ ರಸ್ತೆ, ತಾರಿಹಾಳ, ವಿದ್ಯಾನಗರ, ಲಿಂಗರಾಜ ನಗರ, ಕಾಳಿದಾಸ ನಗರ, ವಿಮಾನ ನಿಲ್ದಾಣ, ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಬಳಿ ಹಾಗೂ ಹೈವೆ ಮತ್ತು ವಿದ್ಯಾನಗರ, ಉದ್ಯಮ ನಗರ, ರವಿನಗರ, ಲಿಡ್ಕರ್ ಕಾಲೋನಿ ಸೇರಿದಂತೆ ಬರುವ ಸ್ಮಶಾನಗಳಲ್ಲಿ ಬರುವ ಪ್ರದೇಶಗಳಲ್ಲಿರುವ ಬೀದಿ ನಾಯಿಗಳಿಗೆ ಊಟ ನೀಡಲಾಗುತ್ತಿದೆ. ಸುಶಾಂತ ಕುಲಕರ್ಣಿ ನೇತೃತ್ವದಲ್ಲಿ ಏಪ್ರಿಲ್ 5ರಿಂದ ಆರಂಭಗೊಂಡಿದ್ದು, ಒಂದು ವರ್ಷ ಪೂರೈಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಪ್ರತಿದಿನ 20-25 ಕೆಜಿ ಅನ್ನದ ಜತೆಯಲ್ಲಿ ಪೆಡಿಗ್ರಿ, ಹಾಲು, ತತ್ತಿ, ವಾರದಲ್ಲಿ ಒಂದು ದಿನ ಪ್ರತಿ ರವಿವಾರ ಮಟನ್ ಅಂಗಡಿಗಳಲ್ಲಿ ಉಳಿದಿರುವ ಮಾಂಸವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ಪ್ರತಿದಿನ ಸುಮಾರು 400 ರಿಂದ 500 ಹಾಗೂ ಒಂದೊಂದು ದಿನ 1000 ದಿಂದ 1500 ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ ಯುವಕರು.
ಪರಿಚಯಸ್ಥರು ಪ್ರತಿದಿನ ಸಹಾಯ ನೀಡುತ್ತಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ಕೆಲವರು ಇವರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಕೇವಲ ಬೀದಿ ನಾಯಿಗಳಷ್ಟೇ ಅಲ್ಲ ಬೀದಿ ಹಸುಗಳಿಗೂ ಆಹಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪ್ರತಿದಿನ ಸುಮಾರು 25 ರಿಂದ 30 ಬೀದಿ ಹಸುಗಳಿಗೆ ಆಹಾರ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿದಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸಂತೆಯ ನಂತರ ಉಳಿದ ತರಕಾರಿ ಸಂಗ್ರಹಿಸಿ ಹಸುಗಳಿಗೆ ನೀಡಲಾಗುತ್ತಿದೆ.
ಸುಶಾಂತ ಕುಲಕರ್ಣಿ, ಸೌಮ್ಯ ಕುಂಬಾರ, ಹರೀಶ ಅಣ್ಣಾದೊರೆ, ಇಮ್ಯಾನುವಲ್ ಪತ್ತಾರ, ಶಿವಾನಂದ ಗಡಾದ, ಗೌತಮ ಮಧುರಕರ, ನಮೃತಾ ಹುಲ್ಲಂಬಿ, ಪೂಜಾ, ಅಂಜಲಿ, ದಿವ್ಯಾ, ತ್ರಿಮಲ ದಾಣಿ, ಓಂಕಾರ ರಾಮದುರ್ಗಕರ, ಶ್ರೀಹರಿ ರಾಮದುರ್ಗಕರ, ಹೇಮರಾಜ, ಜಯತೀರ್ಥ, ವಿಲಾಸ, ರಾಹುಲ್ ಹಿರೇಮನಿ, ಲೋಕೇಶ, ವೀರೇಶ, ಶ್ವೇತಾ ಸೂರಿ, ವೈಷ್ಣವಿ ಸಾಣಿಕೊಪ್ಪ, ಶ್ರೇಯಸ್ ಶೆಟ್ಟಿ, ತನುಶ್ರಿ ಡಿ.ಇರುವ ಈ ತಂಡದಲ್ಲಿ ಇಬ್ಬರ ಒಂದು ತಂಡ ಮಾಡಿಕೊಂಡು ಪ್ರತಿದಿನ ರಾತ್ರಿ ನಗರದ ವಿವಿಧ ರಸ್ತೆಗಳಲ್ಲಿ ಊಟ ನೀಡಲು ತೆರಳುತ್ತಾರೆ. ಒಂದು ತಂಡದಿಂದ ಸುಮಾರು 50-60 ಬೀದಿ ನಾಯಿಗಳಿಗೆ ಖಾದ್ಯ ನೀಡಲಾಗುತ್ತಿದೆ.
ಕಳೆದ 98 ದಿನಗಳಿಂದ ನಗರದ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದ್ದು, ಇದೀಗ ಶತ ದಿನದತ್ತ ದಾಪುಗಾಲು ಇಡುತ್ತಿದೆ. ಒಂದು ವರ್ಷದ ಗುರಿ ಹೊಂದಲಾಗಿದೆ. ಇದುವರೆಗೂ 86,746 ಬೀದಿ ನಾಯಿಗಳಿಗೆ ಊಟ ನೀಡಲಾಗಿದ್ದು, ಹಸುಗಳಿಗೂ ಆಹಾರ ನೀಡಲಾಗಿದೆ. ಒಂದು ವರ್ಷ ಆಹಾರ ಪೂರೈಸುವ ಇಚ್ಚೆ ಹೊಂದಲಾಗಿದೆ. ಯೋಜನೆಗೆ ಹಲವರು ಕೈ ಜೋಡಿಸಿದ್ದು, ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪೆಡಿಗ್ರಿ, ಹಾಲು, ಮೊಟ್ಟೆ, ಅಕ್ಕಿ ಸೇರಿದಂತೆ ಇನ್ನಿತರರ ವಸ್ತುಗಳನ್ನು ನೀಡಿದ್ದಾರೆ. ಈ ಕಾರ್ಯ ಸಮಾಧಾನ ನೀಡಿದೆ. ಈ ಕಾರ್ಯಕ್ಕೆ ಕೈ ಜೋಡಿಸಲು ಇಚ್ಚಿಸುವವರು ಮೊ:9972472418 ಸಂಪರ್ಕಿಸಬಹುದು.
-ಸುಶಾಂತ ಕುಲಕರ್ಣಿ, ಮಿಷನ್ ಹಂಗರ್‌ನ ಮುಖ್ಯಸ್ಥ
-ಬಸವರಾಜ ಹೂಗಾರ