Advertisement

ಮಿಷನ್‌ 2022 ನಕಾಶೆ : ಅನ್ಯ ನಗರಗಳಿಗೂ ಆದ್ಯತೆ ಇರಲಿ

12:15 AM Dec 19, 2020 | mahesh |

ರಾಜಧಾನಿ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯ ಜತೆಗೆ ಸುಗಮ ಸಂಚಾರ, ಸಮರ್ಪಕ ತ್ಯಾಜ್ಯ ವಿಲೇವಾರಿ, ಸ್ವತ್ಛತೆ, ಹಸುರೀಕರಣ, ಕೆರೆ ಹಾಗೂ ರಾಜಕಾಲುವೆ ಅಭಿವೃದ್ಧಿಗಾಗಿ ರಾಜ್ಯ ಸರಕಾರ ರೂಪಿಸಿರುವ “ಮಿಷನ್‌ 2022′ ನಕಾಶೆ ನಗರದ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಮಹತ್ವದ್ದು.

Advertisement

“ಮಿಷನ್‌-2022′ ನಗರದ ನಾಗರಿಕರಲ್ಲಿ ಭರವಸೆ ಮೂಡಿಸಿರುವ ಜತೆಗೆ ಒಂದಷ್ಟು ಅನುಮಾನಗಳನ್ನೂ ಹುಟ್ಟುಹಾಕಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಎರಡು ವರ್ಷಗಳಲ್ಲಿ ಇದನ್ನು ಸಾಕಾರಗೊಳಿಸುವುದಾಗಿ ಘೋಷಣೆ ಮಾಡಿರುವುದು ಸಮಾಧಾನಕರ ಸಂಗತಿ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಖುದ್ದಾಗಿ ನಾನೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ, ಆರು ತಿಂಗಳುಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದು ಹೇಳಿರುವು ದರಿಂದ ನಾಗರಿಕರು ಮಿಷನ್‌-2022 ಸಾಕಾರದ ನಿರೀಕ್ಷೆಯಲ್ಲಿದ್ದಾರೆ.

ಇದರ ನಡುವೆ, “ಮಿಷನ್‌-2022′ ಸಕಾಲದಲ್ಲಿ ಅನುಷ್ಠಾನಕ್ಕಾಗಿ ರಾಜ್ಯ ಸರಕಾ ರದ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಸಮನ್ವಯದ ಕಾರ್ಯ ನಿರ್ವಹಣೆ ವ್ಯವಸ್ಥೆ. ನಾಲ್ಕು ತಿಂಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪೂರ್ಣಗೊಳಿಸುವುದು, ಪಾರ್ಕಿಂಗ್‌ ನೀತಿ, ಜಾಹೀರಾತು ನೀತಿ ಜಾರಿಗೊಳಿಸುವುದು ಸೇರಿ ಇತರ ಮಹತ್ವದ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ರಚನೆಗೆ ತೀರ್ಮಾನಿಸಿರುವುದು ಒಳ್ಳೆಯ ತೀರ್ಮಾನ. ಮೆಟ್ರೋ, ಉಪ ನಗರ ರೈಲು, ಸಮೂಹ ಸಾರಿಗೆ ವ್ಯವಸ್ಥೆ ಉತ್ತಮ ಪಡಿಸಿ, 190 ಕಿ.ಮೀ. ಉದ್ದದ 12 ಅತೀ ದಟ್ಟಣೆಯ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸುಗಮ ಸಂಚಾರಕ್ಕೆ ಒತ್ತು ಕೊಡುವುದು. ಎನ್‌ಜಿಎಫ್, ಮೈಸೂರು ಲ್ಯಾಂಪ್ಸ್‌ ಜಾಗದಲ್ಲಿ ಬೃಹತ್‌ ಉದ್ಯಾನವನ, 25 ಕೆರೆಗಳ ಅಭಿವೃದ್ಧಿ, ನಗರದ ಸೌಂದರ್ಯಕ್ಕೆ ಪೂರಕವಾಗಿ ರಾಜಕಾಲುವೆಗಳ ಅಭಿವೃದ್ಧಿ ಮಾಡುವ ನಿರ್ಧಾರವೂ ಸ್ವಾಗತಾರ್ಹ.

ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಸರಕಾರ ಈ ಯೋಜನೆ ರೂಪಿಸಿದೆ ಎಂಬ ಮಾತುಗಳಿದ್ದರೂ ವಿಶ್ವದ ಗಮನಸೆಳೆದಿರುವ ಹಾಗೂ ಐಟಿ ಕ್ಯಾಪಿಟಲ್‌ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ, ಪ್ರವಾಸೋದ್ಯಮ ಸೇರಿದಂತೆ ಇತರ ಆಕರ್ಷಣೆಗಳಿಗೆ ಮಿಷನ್‌-2022 ಸಹಕಾರಿಯಾಗಲಿದೆ. ಇದೇ ರೀತಿ ರಾಜ್ಯದ ಇತರ ಪ್ರಮುಖ ನಗರಗಳ ಅಭಿವೃದ್ಧಿಗೂ ನೀಲನಕ್ಷೆ ರೂಪಿಸಬೇಕಾದ ಅಗತ್ಯವಿದೆ. ಮಂಗ ಳೂ ರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಕಲಬುರಗಿ, ಬಳ್ಳಾರಿ ಸೇರಿದಂತೆ ಎರಡನೇ ಹಂತದ ನಗರಗಳಲ್ಲೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆ ರೂಪಿಸುವುದು ಸೂಕ್ತ.

ಏಕೆಂದರೆ, ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಎರಡನೇ ಹಂತದ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾದರೆ ಎಲ್ಲವೂ ಬೆಂಗಳೂರು ಕೇಂದ್ರಿತ ಎಂಬುದು ಬಿಟ್ಟು ರಾಜ್ಯದ ಬೇರೆ ನಗರಗಳಲ್ಲೂ ಕೈಗಾರಿಕೆಗಳು, ಉದ್ಯಮಗಳು ಪ್ರಾರಂಭವಾಗಲು ಅನುಕೂಲವಾಗುತ್ತದೆ. ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹಲವು ಕಾಮಗಾರಿ ಕೈಗೊಂಡಿದ್ದರೂ ಪ್ರಮುಖ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬೆಂಗಳೂರು ಮಾದರಿ “ಮಿಷನ್‌-2022′ ರೂಪಿಸಿದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿಯೂ ರಾಜ್ಯ ಸರಕಾರ ಮುಂದಾಗಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next