Advertisement
ಕಾರ್ಕಳ ಕ್ಷೇತ್ರ: ಶೇ.100 ಫಲಿತಾಂಶಕ್ಕೆ ಪ್ರಯತ್ನಪ್ರತಿ ವಿದ್ಯಾರ್ಥಿಗಳ ಮನೆಗೆ ಭೇಟಿ ಮಾಡಿ ಯಾವ ರೀತಿ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ನೈತಿಕ ಪ್ರೇರಣೆಯನ್ನು ವಿದ್ಯಾರ್ಥಿ ಗಳಿಗೆ ನೀಡುವುದರ ಜತೆಗೆ ಕಾರ್ಕಳ ಕ್ಷೇತ್ರವು ಶೇ.100 ಫಲಿತಾಂಶ ಪಡೆಯಬೇಕೆಂಬ ಉದ್ದೇಶದಿಂದ ಪ್ರತಿನಿತ್ಯ ಬೆಳಗ್ಗೆ ಹಾಗೂ ರಾತ್ರಿ ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ ಎಂದವರು ತಿಳಿಸಿದರು.
ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಮನೆ ಮನೆ ಭೇಟಿ ನೀಡುವುದಲ್ಲ. ತನ್ನ ಕ್ಷೇತ್ರದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಬೇಕು ಎಂಬ ಉದ್ದೇಶ ಹಾಗೂ ಜವಾಬ್ದಾರಿಯನ್ನು ಹೊತ್ತು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಅಧಿಕಾರಿಗಳ ಜತೆ ಮನೆ ಮನೆ ಭೇಟಿ ಕಾರ್ಯದಲ್ಲಿ ಜನಪ್ರತಿನಿಧಿಗಳು ನಿರತರಾಗಿದ್ದಾರೆ. ಶಾಸಕರ ಭೇಟಿ
ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಈಗಾಗಲೇ ಇಲಾಖಾಧಿಕಾರಿಗಳ ಜತೆ ಮನೆ ಮನೆಗೆ ಭೇಟಿ ನೀಡಿದ್ದಾರೆ. ಕಳೆದ ವಾರ ತಾ.ಪಂ. ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ ಸೇರಿದಂತೆ ಜಿ.ಪಂ., ತಾ.ಪಂ, ಗ್ರಾ.ಪಂ. ಸದಸ್ಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಈ ಬಾರಿ ಕಾರ್ಕಳ ಕ್ಷೇತ್ರ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೆ ದಾಖಲೆ ನಿರ್ಮಿಸಲಿದೆ ಎನ್ನುವ ಅಭಿಪ್ರಾಯ ಮೂಡಿದೆ.
Related Articles
ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಇದು ವರೆಗೆ ಸುಮಾರು 250ಕ್ಕೂ ಮಿಕ್ಕಿ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಓದುವ ಒಲವನ್ನು ಮೂಡಿಸಿ ಹುರಿದುಂಬಿಸಿದ್ದು ಎಲ್ಲರ ಪ್ರೋತ್ಸಾಹದೊಂದಿಗೆ ಹೆತ್ತವರ ಸಹಕಾರ ಮುಖ್ಯ ಎನ್ನುವುದು ಶಿಕ್ಷಣ ಇಲಾಖೆಯ ಅಭಿಪ್ರಾಯ. ತನ್ನ ಶಾಲಾ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳ ಮನೆಗೆ ಇಲಾಖೆಯ ಜತೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಮನೆಭೇಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹೆತ್ತವರಲ್ಲಿ ಇನ್ನಷ್ಟು ತಮ್ಮ ಮಕ್ಕಳ ಕಾಳಜಿ ಬಗ್ಗೆ ಇಲಾಖೆಯ ಮೇಲೆ ಅಭಿಮಾನ ಮೂಡಿದೆ.
Advertisement
ಎಸೆಸೆಲ್ಸಿ ಅನಂತರ ಮುಂದಿನ ಕನಸು ಏನು ?ಕೇವಲ ವಿದ್ಯಾರ್ಥಿ ಓದುತ್ತಾನೆ ಎನ್ನುವುದನ್ನು ನೋಡುವುದು ಮಾತ್ರ ಈ ಮನೆ ಭೇಟಿ ಕಾರ್ಯಕ್ರಮದ ಉದ್ದೇಶ ಅಲ್ಲ; ಅದರ ಜತೆಗೆ ಎಸೆಸೆಲ್ಸಿ ಆದ ಮೇಲೆ ಮುಂದೇನು ಎಂಬ ವಿದ್ಯಾರ್ಥಿಗಳ, ಪೋಷಕರ ಪ್ರಶ್ನೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ಅದರ ಬಗ್ಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಶಿಕ್ಷಣ ಇಲಾಖೆಯಿಂದ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ತಿಳಿಸಿದ್ದಾರೆ. ಜನವರಿ 1ರಿಂದ ರಾತ್ರಿ ತರಗತಿ
ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಅವರು ಕುಚ್ಚಾರು ವ್ಯಾಪ್ತಿಯಲ್ಲಿ ಡಿ.13ರಂದು ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಓದು , ಅಭ್ಯಾಸ ಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಜನವರಿ 1ರಿಂದ ಪ್ರತಿ ಹೋಬಳಿಯ ಒಂದೊಂದು ಶಾಲೆಗಳಾದ ಕುಚ್ಚಾರು ಸರಕಾರಿ ಪ್ರೌಢಶಾಲೆ, ಬಜಗೋಳಿ ಜೂನಿಯರ್ ಕಾಲೇಜು , ಬೆಳ್ಮಣ್ , ಕಾರ್ಕಳ ಇಂತಹ ನಾಲ್ಕು ಹೋಬಳಿಗಳಲ್ಲಿ ಎಸೆಸೆಲ್ಸಿ ಬಾಲಕ ವಿದ್ಯಾರ್ಥಿಗಳಿಗೆ ರಾತ್ರಿ ತರಬೇತಿ ನೀಡುವುದರ ಮೂಲಕ ಸುತ್ತಮುತ್ತಲಿನ ಶಾಲೆಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆಯ್ದ ಶಾಲೆಗಳಲ್ಲಿ ಹುಡುಗರಿಗೆ ಮಾತ್ರ ರಾತ್ರಿ ಶಾಲೆ ನಡೆಯಲಿದ್ದು ಹುಡುಗಿಯರಿಗೆ ಸಂಜೆ 7ರ ತನಕ ತರಗತಿ ನಡೆಯುತ್ತದೆ. ಹೆಣ್ಣು ಮಕ್ಕಳ ಭದ್ರತಾ ನೆಲೆಯಲ್ಲಿ ರಾತ್ರಿ ಶಾಲೆ ಮಾಡುತ್ತಿಲ್ಲ , ಅಲ್ಲದೆ ಶಿಕ್ಷಕಿಯರನ್ನು ಕೂಡ ರಾತ್ರಿ ತರಗತಿಗೆ ನಿಲ್ಲಿಸುತ್ತಿಲ್ಲ
ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಬೆಂಬಲ ಅಗತ್ಯ
ಈ ಬಾರಿ ಕಾರ್ಕಳ ಕ್ಷೇತ್ರ ಶೇ.100 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆಗೆ ಮುಂದಾಗಿ ದ್ದೇವೆ. ನಮ್ಮೊಂದಿಗೆ ಆಯಾ ಶಾಲಾ ಶಿಕ್ಷಕರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಂಬಲ ನೀಡಿ ನಮ್ಮೊಂದಿಗೆ ಸಹಕರಿಸುತ್ತಿದ್ದು ನಾವು ಕೆಲಸಮಾಡಲು ಇನ್ನಷ್ಟು ಉತ್ಸುಕರಾಗಿದ್ದೇವೆ. ಜನರು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರಿಯಾಗುತ್ತದೆ.
-ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ,ಕಾರ್ಕಳ – ಹೆಬ್ರಿ ಉದಯಕುಮಾರ್ ಶೆಟ್ಟಿ