Advertisement

ವುಹಾನ್…ನಿಗೂಢವಾಗಿ 2 ತಿಂಗಳು ನಾಪತ್ತೆಯಾಗಿದ್ದ ಪತ್ರಕರ್ತ ಬಿಚ್ಚಿಟ್ಟ ಚೀನಾದ ಕರಾಳಮುಖ!

09:46 AM Apr 24, 2020 | Nagendra Trasi |

ಬೀಜಿಂಗ್: ಕೋವಿಡ್ 19 ಮಹಾಮಾರಿ ವೈರಸ್ ಮೂಲ ಚೀನಾ ಎಂಬುದಾಗಿ ಆಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಆರೋಪಿಸುವ ಮೂಲಕ ಉಭಯ ರಾಷ್ಟ್ರಗಳ ನಡುವೆ ವಾಕ್ಸಮರ ನಡೆದಿತ್ತು. ಏತನ್ಮಧ್ಯೆ ಮಾರಣಾಂತಿಕ ಕೋವಿಡ್ 19 ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಬಹಳಷ್ಟು ವಿಚಾರಗಳನ್ನು ಮುಚ್ಚಿಟ್ಟಿತ್ತು ಹಾಗೂ ಕೋವಿಡ್ ವಿಚಾರದಲ್ಲಿ ಸತ್ಯ ಹೊರಹಾಕಲು ಹೊರಟವರನ್ನು ಮಟ್ಟಹಾಕಿರುವ ಒಂದೊಂದು ವಿಚಾರ ಇದೀಗ ಬೆಳಕಿಗೆ ಬರತೊಡಗಿದೆ ಎಂದು ದ ಗಾರ್ಡಿಯನ್ ವರದಿ ಮಾಡಿದೆ.ಸತ್ಯ ಬಹಿರಂಗಪಡಿಸಿದ್ದ ಮೂವರು ಪತ್ರಕರ್ತರು ನಿಗೂಢವಾಗಿ ನಾಪತ್ತೆಯಾಗಿದ್ದರು!

Advertisement

ಚೀನಾದ ವುಹಾನಲ್ಲಿ ಕೋವಿಡ್ 19ನ ಕರಾಳ ಮುಖದ ಬಗ್ಗೆ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದ ಚೀನಾದ ಪತ್ರಕರ್ತನೊಬ್ಬ ನಾಪತ್ತೆ ಎರಡು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದು ಇದೀಗ ನಾಪತ್ತೆಯಾಗಿದ್ದ ಪತ್ರಕರ್ತ ವಾಪಸ್ ಬಂದಿದ್ದು, ತನ್ನನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಕ್ವಾರಂಟೈನ್ ನಲ್ಲಿ ಇಟ್ಟಿರುವುದಾಗಿ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಕೋವಿಡ್ 19 ವೈರಸ್ ಹರಡುತ್ತಿದ್ದ ಆರಂಭದಲ್ಲಿಯೇ ಈ ಕುರಿತು ವುಹಾನ್ ನಲ್ಲಿ ವರದಿ ಮಾಡಲು ತೆರಳಿದ್ದ ಲೀ ಝೆಹುವಾ ಸೇರಿ ಮೂವರು ಪತ್ರಕರ್ತರು ನಿಗೂಢವಾಗಿ ಕಣ್ಮರೆಯಾಗಿಬಿಟ್ಟಿದ್ದರು. ಚೀನಾ ಸರ್ಕಾರದ ಅಧೀನದಲ್ಲಿರುವ ಸಿಸಿಟಿವಿ ಬ್ರಾಡ್ ಕಾಸ್ಟ್ ಸಂಸ್ಥೆಯ ಮಾಜಿ ಉದ್ಯೋಗಿ ಲೀ ಕೊನೆಯದಾಗಿ ಕಾಣಿಸಿಕೊಂಡಿದ್ದು ಫೆಬ್ರುವರಿ 26ರಂದು, ಆ ಬಳಿಕ ನಾಪತ್ತೆಯಾಗಿದ್ದ ಎಂದು ವರದಿ ತಿಳಿಸಿದೆ.

ಸದ್ದಿಲ್ಲದೇ ಅಪಾರ್ಟ್ ಮೆಂಟ್ ಗೆ ಬಂದು ಕರೆದೊಯ್ದಿದ್ದರು:
ವುಹಾನ್ ನಲ್ಲಿ ವರದಿ ಮಾಡಿ ಹೊರಟಾಗ ಅಧಿಕಾರಿಗಳು ತನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಭಯದಿಂದ ನಾನು ಕೊನೆಗೆ ಅಪಾರ್ಟ್ ಮೆಂಟ್ ಗೆ ಬಂದಿದ್ದೆ. ಅಷ್ಟರಲ್ಲಿ ವಿಡಿಯೋವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿಬಿಟ್ಟಿರುವುದಾಗಿ ಲೀ ಝೆಹುವಾ ತಿಳಿಸಿದ್ದಾರೆ. ಅಪಾರ್ಟ್ ಮೆಂಟ್ ಗೆ ಬಂದು ಸುಮಾರು ದೀಪಗಳನ್ನು ಆರಿಸಿ ಸುಮಾರು ಗಂಟೆಗಳ ಕಾಲ ಕಾದಿರುವುದಾಗಿ ಹೇಳಿದ್ದಾರೆ.

ಸುಮಾರು ಒಂದು ಗಂಟೆ ಬಳಿಕ ಅಪಾರ್ಟ್ ಮೆಂಟ್ ಬಾಗಿಲು ತಟ್ಟಿದ್ದರು. ಕೂಡಲೇ ಹೊರ ಹೋಗಿ ನೋಡಿದಾಗ ಮೂವರು ವ್ಯಕ್ತಿಗಳು ಯೂನಿಫಾರಂನಲ್ಲಿ ಆಗಮಿಸಿದ್ದರು. ತಮ್ಮನ್ನು ಪಬ್ಲಿಕ್ ಸೆಕ್ಯುರಿಟಿ ಎಂದು ಪರಿಚಯಿಸಿಕೊಂಡಿದ್ದರಂತೆ. ನಂತರ ಲೀಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಸಾರ್ವಜನಿಕ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ತನಿಖೆ ನಡೆಸುವುದಾಗಿ ಪೊಲೀಸ್ ಅಧೀಕಾರಿ ತಿಳಿಸಿದ್ದರಂತೆ. ನಾವು ನಿನ್ನ ಮೇಲೆ ದೂರು ದಾಖಲಿಸುವುದಿಲ್ಲ. ಯಾಕೆಂದರೆ ನೀನು ಸೋಂಕಿತ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರಿಂದ ಕ್ವಾರಂಟೈನ್ ಗೆ ಹೋಗಬೇಕು ಎಂದು ಸೂಚಿಸಿದ್ದರು ಎಂದು ವರದಿ ವಿವರಿಸಿದೆ.

Advertisement

ಚೆನ್ ಕ್ವಿಶಿ ಕಥೆಯೂ ಹೀಗೆ ಆಗಿತ್ತು…

ಫೆಬ್ರುವರಿ ತಿಂಗಳಲ್ಲಿ ಲೀ ಝೆಹುವಾ, ಚೆನ್ ಕ್ವಿಶಿ ಹಾಗೂ ಫಾಂಗ್ ಬಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲವಾಗಿತ್ತು. ಆದರೆ ಈ ಬಗ್ಗೆ ಚೀನಾದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು. ಈ ಮೂವರು ಚೀನಾದ ಪತ್ರಕರ್ತರು. ದೇಶದಲ್ಲಿ ಆರಂಭಿಕವಾಗಿ ಕೋವಿಡ್ 19 ವೈರಸ್ ಹರಡಲು ಆರಂಭವಾದಾಗ ಅದರ ಭೀಕರತೆಯ ಸತ್ಯ ಘಟನೆಯನ್ನು ಬಹಿರಂಗಪಡಿಸಲು ಹೊರಟಿದ್ದರು. ಅಲ್ಲದೇ ಚೀನಾದಲ್ಲಿ ನಿಷೇಧಿಸಲ್ಪಟ್ಟ ಯೂಟ್ಯೂಬ್ ಹಾಗೂ ಟ್ವೀಟರ್ ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಿಬಿಟ್ಟಿದ್ದರು!

ಫೆಬ್ರುವರಿ 6ರಂದು 34ವರ್ಷದ ಚೆನ್ ಕ್ವಿಶಿ ನಾಪತ್ತೆಯಾಗಿದ್ದ. ಈಗ ವುಹಾನ್ ನಲ್ಲಿ ಲಾಕ್ ಡೌನ್ ಘೋಷಿಸುವುದಕ್ಕಿಂತಲೂ ಮೊದಲೇ ಭೇಟಿ ನೀಡಿ ನೀಡಿದ್ದ. ಕೋವಿಡ್ 19 ವೈರಸ್ ಕುರಿತ ಸತ್ಯ ವರದಿ ನೀಡಬೇಕು ಎಂಬ ಏಕೈಕ ಗುರಿಯನ್ನು ಆತ ಹೊಂದಿದ್ದ. ಆತನ ಒಂದು ವರದಿಯ ಪ್ರಕಾರ, ಶವದ ಬಳಿ ವೀಲ್ ಚೇರ್ ನಲ್ಲಿ ಕುಳಿತ ಮಹಿಳೆಯೊಬ್ಬರ ಜತೆ ದೂರವಾಣಿಯಲ್ಲಿ ಚೆನ್ ಮಾತನಾಡಿ ಮಾಹಿತಿ ಕಲೆ ಹಾಕಿದ್ದ. ಮತ್ತೊಂದು ವರದಿಯಲ್ಲಿ ವುಹಾನ್ ಆಸ್ಪತ್ರೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ರೋಗಿಗಳ ಕುರಿತುಬಹಿರಂಗಗೊಳಿಸಿದ್ದರು ಎಂದು ವರದಿ ತಿಳಿಸಿದೆ.

ಚೆನ್ ತಾನು ಕಣ್ಮರೆಯಾಗುವ ಮೊದಲು ಫಾಂಗ್ ಕಾಂಗ್ ಆಸ್ಪತ್ರೆಗೆ ಭೇಟಿ ನೀಡಲು ಸಿದ್ದತೆ ನಡೆಸಿದ್ದ. ನಂತರ ಈ ಬಗ್ಗೆ ಆತನ ಗೆಳೆಯ ಟ್ವೀಟ್ ಮಾಡುವ ಮೂಲಕ ಚೆನ್ ನಾಪತ್ತೆಯಾಗಿದ್ದ ಎಂದು ತಿಳಿಸಿದ್ದ. ತನ್ನ ಮಗ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ತಾಯಿ ಕೂಡಾ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಬಸ್ ಗಳಲ್ಲಿ ಶವ ಸಾಗಿಸುತ್ತಿದ್ದ ವಿಡಿಯೋ ಪೋಸ್ಟ್ ಮಾಡಿದ್ದ ಫಾಂಗ್ ಕೂಡಾ ನಾಪತ್ತೆ:
ವುಹಾನ್ ನಿವಾಸಿ ಫಾಂಗ್ ಬಿನ್ ಕೂಡಾ ಫೆಬ್ರುವರಿ 9ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಅದಕ್ಕೆ ಕಾರಣ ಇಡೀ ಬಸ್ ನಲ್ಲಿ ಶವಗಳನ್ನು ತುಂಬಿಕೊಂಡು ಹೋಗುತ್ತಿರುವ ಸರಣಿ ವಿಡಿಯೋಗಳನ್ನು ಫಾಂಗ್ ಅಪ್ ಲೋಡ್ ಮಾಡಿದ್ದರು. ಫಾಂಗ್ ನಾಪತ್ತೆಯಾಗುವ ಮುನ್ನ ಪೊಲೀಸರು ಬಂಧಿಸಿ ಎಳೆದೊಯ್ದಿದ್ದರು ಎಂದು ವರದಿ ತಿಳಿಸಿದೆ.

ಬಿನ್ ಕೊನೆಯದಾಗಿ ಅಪ್ ಲೋಡ್ ಮಾಡಿದ್ದ ವಿಡಿಯೋದಲ್ಲಿ, ವುಹಾನ್ ಆರೋಗ್ಯ ಅಧಿಕಾರಿಗಳು ಬಿನ್ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದಿದ್ದರು. ನಂತರ ಆತನ ದೇಹದ ಉಷ್ಣಾಂಶ ಪರೀಕ್ಷಿಸಿದ್ದರು. ಈ ವಿಡಿಯೋದಲ್ಲಿ ಫಾಂಗ್ ತನ್ನ ದೇಹದ ಉಷ್ಣತೆ ಸರಿಯಾಗಿದೆ ಎಂದು ಹೇಳಲು ಪ್ರಯತ್ನಿಸಿರುವುದು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next