Advertisement

ಲಕ್ಷಾಂತರ ರೂ.ಮೌಲ್ಯದ ಕಲ್ಲು ದಿಮ್ಮಿ ನಾಪತ್ತೆ

12:41 PM Jul 22, 2018 | |

ದೇವನಹಳ್ಳಿ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದ ಲಕ್ಷಾಂತರ ರೂ. ಮೌಲ್ಯದ ಕಲ್ಲು ದಿಮ್ಮಿಗಳು ನಾಪತ್ತೆಯಾಗಿದ್ದು ಸ್ಥಳೀಯ ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ.  ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ ಹಲವು ಕಡೆ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕಲು 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ವಿ. ಶಂಕರ್‌ ನೇತೃತ್ವದ ಅಧಿಕಾರಿಗಳ ತಂಡ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಕಲ್ಲು ದಿಮ್ಮಿಗಳನ್ನು ವಶಕ್ಕೆ ಪಡೆದಿತ್ತು. ಈ ಕುರಿತು 2014ರ ಮೇ.24ರಂದು ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಯಿರಾ ಪ್ರದೇಶ ಅರ್ಕಾವತಿ ಜಲಾಯನ ಪ್ರದೇಶ ವ್ಯಾಪ್ತಿಗೆ ಬರುವ ಕಾರಣ
ಕಲ್ಲು ಗಣಿಗಾರಿಕೆಗೆ ನಿಷೇಧ ಹೇರಲಾಗಿತ್ತು. ದಾಳಿವೇಳೆ 29 ವಾಹನ ಸೇರಿದಂತೆ 3524 ಹೆಚ್ಚು ಕಲ್ಲುದಿಮ್ಮಿಗಳನ್ನು ಜಪ್ತಿ ಮಾಡಲಾಗಿತ್ತು. ಕೊಯಿರಾ, ಚಿಕ್ಕಗೊಲ್ಲಹಳ್ಳಿ, ಬ್ಯಾಡರಹಳ್ಳಿ, ಮಾಯಸಂದ್ರ, ಮನಗೊಂಡನಹಳ್ಳಿ, ಜ್ಯೋತಿಪುರ, ಮೀಸಗಾನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿತ್ತು. 

Advertisement

ಲಕ್ಷಾಂತರ ರೂ ನಷ್ಟ: ಜಿಲ್ಲಾಡಳಿತ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ. ಮೌಲ್ಯದ ಕಲ್ಲು ದಿಮ್ಮಿಗಳು ನಾಪತ್ತೆಯಾಗಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸ್ಥಳೀಯ ರೈತರು ಹೇಳುತ್ತಿದ್ದಾರೆ.

ಜು.12ರಂದು 11 ಗಂಟೆಯಿಂದ ಬೆಳಗಿನ ಜಾವದ ವರೆಗೆ ಪೊಲೀಸರು ದಿಮ್ಮಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಗನವಾಡಿ ಗ್ರ್ಯಾನೈಟ್‌ ಘಟಕದ ಬಳಿ 16, ಬ್ಯಾಡರಹಳ್ಳಿ ಗ್ರಾಮದ ಬಳಿ 10 ಕಲ್ಲು ದಿಮ್ಮಿಗಳನ್ನು ಮರು ವಶಪಡಿಸಿಕೊಂಡಿದ್ದಾರೆ. ಅಕ್ರಮ ದಿಮ್ಮಿ ಸಾಗಣೆಗೆ ಬಳಕೆಯಾದ ಲಾರಿ, ಯಂತ್ರಗಳನ್ನು ವಶಕ್ಕೆ ಪಡೆದಿಲ್ಲ. ಕಳ್ಳ ಸಾಕಾಣಿಕೆದಾರರು ಕಳೆದ 10ದಿನಗಳ ಹಿಂದೆ ನಾಪತ್ತೆಯಾಗಿದ್ದರೂ. ಈಗ ರಾಜಾರೋಷವಾಗಿ ಓಡಾಡಿಕೊಂಡು ಇದ್ದಾರೆ. ಕೊಯಿರಾ ಗ್ರಾಮದ ಪ್ರಭಾವಿ ಮುಖಂಡನ ಅಕ್ರಮ ಕಲ್ಲು ತುಂಬಿದ ಟ್ರ್ಯಾಕ್ಟರ್‌ನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಲ್ಲ ಎಂದು ಗ್ರಾಮಸ್ಥ ಪ್ರಕಾಶ್‌ ದೂರಿದ್ದಾರೆ.  ದಿಮ್ಮಿಗಳನ್ನು ಬಹಿರಂಗ ಹರಾಜು ಹಾಕಬೇಕಾಗಿದ್ದ ಜಿಲ್ಲಾಡಳಿತ 1 ವರ್ಷ ತಡವಾಗಿ 2015ರಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿತ್ತು. ಆದರೆ, ಕೆಲವು
ಗುಣಮಟ್ಟದ ದಿಮ್ಮಿಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವು. ಇನ್ನು ಬಿಟ್‌ದಾರರು ಹರಾಜಿನಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಮುಂದೂಡಲಾಗಿತ್ತು ಎಂದು ಸ್ಥಳೀಯರಾದ ಎನ್‌.ಪ್ರಸನ್ನ ಹೇಳುತ್ತಾರೆ.

ಸ್ಥಳೀಯರು ಹೇಳ್ಳೋದೇನು?
ಕಲ್ಲು ದಿಮ್ಮಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈಗ ದಿಮ್ಮಿಗಳ ಸರ್ವೆಗೆ ಮುಂದಾಗಿದೆ. 2014ರಲ್ಲಿ ವಶಪಡಿಸಿಕೊಂಡ ದಿಮ್ಮಿಗಳ ಸಂಖ್ಯೆ ಎಷ್ಟು, ಯಾವ ಜಮೀನಿನಲ್ಲಿ ಎಷ್ಟಿವೆ ಎಂಬುವುದನ್ನು ಅಂದಾಜು ಮೌಲ್ಯ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. 

ಹಾಗೆಯೇ ಸರ್ವೆ ಮುಗಿದ ಬಳಿಕ ದಿಮ್ಮಿಗಳನ್ನು ಹರಾಜು ಹಾಕುವ ಬಗ್ಗೆಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಏ.11, 2016ರಂದು 2ನೇ ಬಾರಿಗೆ ಬಹಿರಂಗ ನಡೆಸಿದಾಗ 93ಲಕ್ಷ 97ಸಾವಿರಕ್ಕೆ ಬಿಟ್‌ ಕೂರಲಾಗಿತ್ತು. ಬಿಟ್‌ ಮೊತ್ತ ಮಾರುಕಟ್ಟೆಗಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ಅನುಮೋ ದನೆ ಮಾಡಿರಲಿಲ್ಲ. ಅಂದಿನಿಂದ ಬಹುತೇಕ ನಾಪತ್ತೆಯಾಗುತ್ತಿವೆ. ಉಳಿದಿರುವ ದಿಮ್ಮಿಗಳು ಎಷ್ಟು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಸ್ಥಳೀಯ ಎನ್‌.ಪ್ರಸನ್ನ ಆರೋಪಿಸಿದ್ದಾರೆ.

Advertisement

2014ರಲ್ಲಿ ವಶಪಡಿಸಿಕೊಂಡಿದ್ದ ಕಲ್ಲುದಿಮ್ಮಿಗಳು ನಾಪತ್ತೆಯಾಗಿರುವ ಬಗ್ಗೆ ಎಫ್ಐಆರ್‌ ದಾಖಲಿಸಲಾಗಿದೆ. 15 ದಿನಗಳೊಳಗಾಗಿ ಕಲ್ಲು ದಿಮ್ಮಿಗಳ ಸರ್ವೆ ನಡೆಸಲಾಗುವುದು. ನಂತರ ಟೆಂಡರ್‌ ಕರೆದು ಹರಾಜು ಹಾಕಲಾಗುವುದು. ದಿಮ್ಮಿಗಳ ನಾಪತ್ತೆ ಕುರಿತು ಪೊಲೀಸರು, ನಮ್ಮ ಇಲಾಖೆ ತನಿಖೆ ನಡೆಸುತ್ತಿದೆ.  ಬಿ.ಆರ್‌.ಸುರೇಶ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಉಪನಿರ್ದೇಶಕ

ಕಲ್ಲು ದಿಮ್ಮಿಗಳ ಕಳವು ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದ್ದೇವೆ. ಯಾರು ಕಳವು ಮಾಡಿದ್ದಾರೆ ಎಂಬುದನ್ನು
ಬಹಿರಂಗಪಡಿಸಲ್ಲ. ಪ್ರಸ್ತುತ ಗಂಭೀರ ಪ್ರಕರಣವಾಗಿರುವುದರಿಂದ ತನಿಖೆ ಕೈಗೊಂಡಿದ್ದೇವೆ. ಆರೋಪಿಗಳನ್ನು ಬಂಧಿಸಿದ ನಂತರ ಮಾಹಿತಿ ನೀಡುತ್ತೇವೆ.
 ಮಂಜುನಾಥ್‌,ವೃತ್ತ ನಿರೀಕ್ಷಕ

ಎನ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next