ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಇಂಡಿಗೋ ವಿಮಾನಗಳು ಹಾರಾಡುತ್ತಿರುವಾಗಲೇ
ಡಿಕ್ಕಿಯಿಂದಾಗಿ ಆಗಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಬೆಂಗಳೂರಿನಿಂದ ಕೊಚ್ಚಿಗೆ ಹಾಗೂ ಕೊಯಮತ್ತೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಹಾರಾಡುತ್ತಿರುವಾಗ ಒಂದು ಸಮಯದಲ್ಲಿ ಕೇವಲ 200 ಅಡಿ ಅಂತರಕ್ಕೆ ಬಂದಿದ್ದವು. ಆಗ ಡಿಕ್ಕಿ ತಡೆ ವ್ಯವಸ್ಥೆ ಚಾಲನೆ ಗೊಂಡಿದ್ದರಿಂದ ಎರಡೂ ವಿಮಾನಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ವಿಮಾನ ಡಿಕ್ಕಿ ವ್ಯವಸ್ಥೆ ಸಕ್ರಿಯಗೊಂಡು ಸಂಜ್ಞೆಗಳನ್ನು ನೀಡುವ ವೇಳೆಗೆ ಎರಡೂ ವಿಮಾನಗಳು ಕೇವಲ 8 ಕಿ.ಮೀ. ಅಂತರದಲ್ಲಿದ್ದವು ಎಂದು ಮೂಲಗಳು ಹೇಳಿವೆ. ಇದರಿಂದಾಗಿ ಎರಡೂ ವಿಮಾನ ಗಳಲ್ಲಿದ್ದ ಒಟ್ಟು 328 (162 ಹಾಗೂ 166) ಪ್ರಯಾಣಿಕರು ಬಚಾವಾದಂತಾಗಿದೆ. ವಿಮಾನಗಳು ಗಂಟೆಗೆ ಹಲವು ನೂರು ಕಿ.ಮೀ. ವೇಗದಲ್ಲಿ ಸಂಚರಿಸುವುದರಿಂದ ಇಂತಹ ಸನ್ನಿವೇಶ ದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಡಿಕ್ಕಿಯಾಗಬಹುದಾದ ಸಾಧ್ಯತೆ ಇರುತ್ತದೆ. ಈ ಘಟನೆ ಯಲ್ಲೂ ಕೆಲವೇ ಕ್ಷಣಗಳಲ್ಲಿ ಡಿಕ್ಕಿಯನ್ನು ತಪ್ಪಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 27 ಸಾವಿರ ಅಡಿ ಎತ್ತರದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ಜುಲೈ 10 ರಂದು ಎಂಬುದಾಗಿ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿ ತನಿಖೆ ಆರಂಭಿಸಿದೆ.