Advertisement

ಸಮಾಜವಾದಿ ನಾಯಕನ ಆಶ್ರಮದಲ್ಲಿ ಮೃತದೇಹ; ದಲಿತ ಮಹಿಳೆಯ  ಶವ ಹೂತಿದ್ದ ದುಷ್ಕರ್ಮಿಗಳು

01:31 AM Feb 12, 2022 | Team Udayavani |

ಉನ್ನಾವ್‌: ಉತ್ತರಪ್ರದೇಶದ ಚುನಾವಣೆ ನಡೆಯುತ್ತಿರುವಂತೆಯೇ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್‌ಗೆ ದೊಡ್ಡಮಟ್ಟದ ಸಂಕಷ್ಟ ಎದುರಾಗಿದೆ. ಕಳೆದ ಎರಡು ತಿಂಗಳುಗಳಿಂದ ನಾಪತ್ತೆಯಾಗಿದ್ದ 22 ವರ್ಷದ ದಲಿತ ಮಹಿಳೆಯೊಬ್ಬರ ಮೃತದೇಹ ಶುಕ್ರವಾರ ಎಸ್‌ಪಿ ಮಾಜಿ ಶಾಸಕ, ಸಚಿವ ಫ‌ತೇಹ್‌ ಬಹಾದೂರ್‌ ಸಿಂಗ್‌ ಅವರ ಆಶ್ರಮದಲ್ಲಿ ಪತ್ತೆಯಾಗಿದೆ.

Advertisement

ಹೂತಿಟ್ಟಿದ್ದ ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಬಿಜೆಪಿ, ಬಿಎಸ್‌ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಖೀಲೇಶ್‌ ಮೇಲೆ ಮುಗಿಬಿದ್ದಿದ್ದಾರೆ. ತಮ್ಮ ಪಕ್ಷದ ನಾಯಕನ ಆಶ್ರಮದಲ್ಲೇ ಈ ಕೃತ್ಯ ನಡೆದಿರುವುದು ಅಖೀಲೇಶ್‌ಗೆ ತೀವ್ರ ಮುಖಭಂಗ ಉಂಟುಮಾಡಿದೆ. ಆದರೆ ಫ‌ತೇಹ್‌ ಬಹಾದೂರ್‌ ಸಿಂಗ್‌ ಅವರು 4 ವರ್ಷಗಳ ಹಿಂದೆಯೇ ಕೊನೆಯುಸಿರೆಳೆದಿದ್ದು, ಅವರ ಪುತ್ರ ರಾಜೋಲ್‌ ಸಿಂಗ್‌ ಆಶ್ರಮ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕೊಲೆಯ ಹಿಂದೆ ಅವರ ಪುತ್ರನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಆಗಿದ್ದೇನು?: 2012-17ರ ಎಸ್‌ಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಫ‌ತೇಹ್‌ ಸಿಂಗ್‌ ಅವರ ಆಶ್ರಮದ ಸಮೀಪದ ಭೂಮಿಯಲ್ಲಿ ನೆಲ ಅಗೆದಾಗ ದಲಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. 2 ತಿಂಗಳ ಹಿಂದೆ ಈಕೆ ನಾಪತ್ತೆಯಾಗಿದ್ದರು. ಆಗಲೇ ಮಹಿಳೆಯ ಕುಟುಂಬ ರಾಜೋಲ್‌ ಸಿಂಗ್‌ ವಿರುದ್ಧ ಕೇಸು ದಾಖಲಿಸಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬ ಆರೋಪಿಸಿದೆ. ಅನಂತರ ಒತ್ತಡಕ್ಕೆ ಮಣಿದು ರಾಜೋಲ್‌ರನ್ನು ಬಂಧಿಸಿದಾಗ, ಆಕೆಯ ಮೃತದೇಹ ಹೂತಿರುವ ವಿಚಾರ ಬಾಯಿಬಿಟ್ಟಿದ್ದರು. ಹಾಗಾಗಿ ಶುಕ್ರವಾರ ಆಶ್ರಮದಲ್ಲಿ ನೆಲ ಅಗೆದಾಗ ಶವ ಪತ್ತೆಯಾಗಿದೆ.

ಈ ನಡುವೆ ಸಂತ್ರಸ್ತೆಯ ತಾಯಿಯು ಸಿಎಂ ಯೋಗಿ ಅವರನ್ನು ಭೇಟಿಯಾಗಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ನನ್ನ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂಬ ಸಂಶಯವಿದೆ. ಪೊಲೀಸರ ಮೇಲೆ ನನಗೆ ನಂಬಿಕೆಯಿಲ್ಲ ಎಂದೂ ಅವರು ಹೇಳಿದ್ದಾರೆ.

ಅಖಿಲೇಶ್ ಅವರೇ, ಎಸ್‌ಪಿ ನಾಯಕನ ಜಮೀನಿನಲ್ಲಿ ದಲಿತ ಹೆಣ್ಣುಮಗಳ ಮೃತದೇಹ ಪತ್ತೆಯಾಗಿದೆ. ಸಮಾಜವಾದಿ ಪಕ್ಷದವರು ಏನೇ ಅಪರಾಧ ಮಾಡಿದರೂ ನೀವು ಅವರನ್ನು ರಕ್ಷಿಸುತ್ತೀರಿ. ಆರೋಪಿ ಗಳಿಗೆ ಸಹಾಯ ಮಾಡುವುದಕ್ಕೆ ಹಿಂಜರಿಯುವುದಿಲ್ಲ.
-ಕೇಶವಪ್ರಸಾದ್‌ ಮೌರ್ಯ, ಡಿಸಿಎಂ

Advertisement

ಇವರೆಲ್ಲರೂ “ಎಸ್‌ಪಿ ನಾಯಕ’ ಎಂದು ಆರೋಪಿಸುತ್ತಿರುವ ವ್ಯಕ್ತಿಯು 4 ವರ್ಷಗಳ ಹಿಂದೆಯೇ ಮೃತಪಟ್ಟಿ ದ್ದಾರೆ. ಮಹಿಳೆಯ ನಾಪತ್ತೆ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಇಷ್ಟು ದಿನ ಬೇಕಾಯಿತೇ?  ಘಟನೆ ಬಗ್ಗೆ ತನಿಖೆ ನಡೆಯಲಿ.
-ಅಖಿಲೇಶ್ ಯಾದವ್‌,
ಎಸ್‌ಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next