Advertisement

ನಾಪತ್ತೆಯಾಗುವವರ ಸಂಖ್ಯೆ ಹೆಚ್ಚಳ: ಕಳೆದ ಐದು ತಿಂಗಳಲ್ಲಿ 1830 ಮಂದಿ ನಾಪತ್ತೆ

12:48 PM Jun 06, 2022 | Team Udayavani |

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಹಲವಾರು ಕಾರಣಗಳಿವೆ. ವಿಶೇಷವಾಗಿ ಕೌಟುಂಬಿಕ ಕಲಹ, ಮನೆಯವರೊಂದಿಗಿನ ಮನಸ್ತಾನದಿಂದ ಮನೆ ತೊರೆಯುವವರಲ್ಲಿ ಬಹುತೇಕ ಯುವತಿಯರು ಹಾಗೂ ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚಾಗಿದ್ದಾರೆ. ದುಡುಕಿನ ನಿರ್ಧಾರದಿಂದ ತೆಗೆದುಕೊಂಡ ತೀರ್ಮಾನದಿಂದ ಮನೆಯವರಿಗೆ ಮುಖ ತೋರಿಸಲಾಗದೇ, ಮನೆಗೆ ಬಂದರೂ ಮರ್ಯಾದೆ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಎಷ್ಟೋ ಜನರು ಮನೆಗೆ ವಾಪಸ್‌ ಬರಲಾಗದೆ. ಏಕಾಂಗಿಯಾಗಿ ಬದುಕಲು ಸಾಧ್ಯವಾಗದೇ ಜೀವನವನ್ನೇ ಕಳೆದುಕೊಳ್ಳುತ್ತಿರುವ ದುರಂತಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಈ ಬಗ್ಗೆ ಸುದ್ದಿ ಸುತ್ತಾಟದಲ್ಲಿ ಒಂದು ನೋಟ.

Advertisement

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವುದೇ ಹೆಚ್ಚು. ಕೌಟುಂಬಿಕ ಸಮಸ್ಯೆ, ಪ್ರೇಮ ಪ್ರಕರಣ, ಆರ್ಥಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಗೆ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬುದು ಪೊಲೀಸ್‌ ಇಲಾಖೆಯ ಅಂಕಿ-ಆಂಶ ಹೇಳುತ್ತದೆ. ಐದು ತಿಂಗಳಲ್ಲಿ 1830 ಮಂದಿ ನಾಪತ್ತೆಯಾಗಿದ್ದು, ಈ ಪೈಕಿ 1100 ಮಂದಿ ಮಹಿಳೆಯ(18 ವರ್ಷ ಮೇಲ್ಪ ಟ್ಟವರು)ರೇ ಇದ್ದಾರೆ. ಈ ರೀತಿ ಮಹಿಳೆಯರು ಕಾಣೆಯಾಗುವುದಕ್ಕೆ “ಕೌಟುಂಬಿಕ ಕಲಹ’ವೇ ಪ್ರಮುಖ ಕಾರಣ. ಬೆಂಗಳೂರು ನಗರದಲ್ಲಿ ಕಾಣೆಯಾಗುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಕೌಟುಂಬಿಕ ಕಲಹ ಮಾತ್ರವಲ್ಲದೆ, ಪ್ರೇಮ ಪ್ರಕರಣಗಳು, ವಿವಾಹಿತೆಯರಲ್ಲಿ ಹೆಚ್ಚಾಗುತ್ತಿರುವ ದಂಪತಿಗಳ ಕಲಹ, ಮನಸ್ತಾಪ, ಅಕ್ರಮ ಸಂಬಂಧ, ಬಲವಂತದ ಮದುವೆ, ಅಪಹರಣ ಹೀಗೆ ನಾನಾ ಕಾರಣಗಳಿಂದಾಗಿ ಮನೆ ಬಿಟ್ಟು ಹೋಗುತ್ತಿದ್ದಾರೆ.

ಹೀಗೆ ಮನೆ ಬಿಟ್ಟು ಹೋದವರ ಪೈಕಿ ಶೇ.80-83ರಷ್ಟು ಮಹಿಳೆಯರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಸಾಕಷ್ಟು ಮಹಿಳೆಯರು ಪತ್ತೆಯಾಗಿಲ್ಲ. ಮತ್ತೂಂದೆಡೆ ನಾಪತ್ತೆ ಎಂದು ದಾಖಲಾದ ಪ್ರಕರಣಗಳು ಕೆಲ ದಿನಗಳು, ತಿಂಗಳ ಬಳಿಕ ಆತ್ಮಹತ್ಯೆ ಎಂದು ಬದಲಾಗಿರುವ ಸಾಕಷ್ಟು ಉದಾಹರಣೆಗಳು ಇವೆ. ಈ ಮಧ್ಯೆ ಕೆಲವೊಂದು ಒತ್ತಡಗಳಿಂದ ಹಾಗೂ ದುಡುಕಿನ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಮನೆ ಬಿಟ್ಟು ಹೋದ ಮಹಿಳೆಯರು, ವಾಪಸ್‌ ಬಂದರೆ, ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸಿ, ಕೆಲವರು ಕುಟುಂಬ ಸದಸ್ಯರ ಜತೆ ಸಂಪರ್ಕ ಹೊಂದಿ, ಬೇರೆಲ್ಲೊ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯ ಪ್ರಕರಣಗಳು ಬೆರಳೆಣಿಕೆಯಷ್ಟು ಇವೆ. ಆದರೆ, ಎಲ್ಲರೂ ಇದೇ ರೀತಿ ಚಿಂತಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ತಪ್ಪಿನ ಅರಿವಾಗಿ ಪೋಷಕರ ಬಳಿ ಕ್ಷೇಮೆ ಕೇಳಿ ಜೀವನ ನಡೆಸುತ್ತಿರುವವರು ಇದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಹಸುಗೂಸುಗಳ ಅಪಹರಣ ಆತಂಕ ವಿಚಾರವೆಂದರೆ ಇತ್ತೀಚೆಗೆ ನಗರದಲ್ಲಿ ಹಸುಗೂಸುಗಳನ್ನು ಅಪಹರಣ ಮಾಡಲಾಗುತ್ತಿದೆ. ಕಳೆದ ವರ್ಷ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ನರ್ಸ್‌ವೊಬ್ಬರು ಎರಡು ದಿನದ ಮಗು ಅಪಹರಿಸಿ, ವೈದ್ಯೆಯೊಬ್ಬರಿಗೆ ಮಾರಾಟ ಮಾಡಿದ್ದರು. ಜೆ.ಜೆ.ನಗರದಲ್ಲಿ ಮನೆ ವೊರಾಂಡದಲ್ಲಿ ಮಲಗಿಸಿದ್ದ 2 ತಿಂಗಳ ಮಗುವನ್ನು ಅಪಹರಿಸಲಾಗಿದೆ.

ಏನಂತಾರೆ ಮನೋವೈದ್ಯರು?: ಈ ಬಗ್ಗೆ ಮನೋವೈದ್ಯೆ ಡಾ.ಶ್ರದ್ಧಾ ಶೇಖರ್‌ ಮಾತನಾಡಿ, “ಸಾಮಾನ್ಯವಾಗಿ 20ರಿಂದ 30 ವರ್ಷದೊಳಗಿನ ವಯಸ್ಸಿನಲ್ಲಿ ಹೆಣ್ಣು ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಸುಮಾರು 18 ವರ್ಷಗಳ ಕಾಲ ಮೋಜು ಮಸ್ತಿಯಲ್ಲಿರುವವರಿಗೆ ಏಕಾಏಕಿ ಜವಾಬ್ದಾರಿ ಹೇರಿಕೆಯಾಗುತ್ತದೆ. ಇದು ಪೋಷಕರ ಅನಾರೋಗ್ಯ ಸಮಸ್ಯೆ, ಶಿಕ್ಷಣ, ಉದ್ಯೋಗ ಸೇರಿ ನಾನಾ ವಿಷಯಗಳು ಅವರ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಜತೆಗೆ ಇದೇ ವಯಸ್ಸಿನಲ್ಲಿ ಅವರ ಸ್ವಭಾವ ಸಹ ಬದಲಾವಣೆಯಾಗುತ್ತದೆ’. “ಪೋಷಕರ ಅತೀಯಾದ ನಿರೀಕ್ಷೆ ಸುಳ್ಳು ಮಾಡುತ್ತೇವೆಯೋ? ಎಂಬ ಭಯ ಒಂದೆಡೆಯಾದರೆ, ಇನ್ನೊಂದೆಡೆ ಸ್ವಾತಂತ್ರ್ಯ ಬಯಸುವ ಅನೇಕರು ಮನೆಯ ಹಾಗೂ ಸಂಸಾರದ ಜವಾಬ್ದಾರಿಂದ ಬಿಡುಗಡೆ ಪಡೆಯಲು ಮನೆ ಬಿಟ್ಟು ಹೋಗುತ್ತಾರೆ. ಇಂತಹ ಸ್ವಭಾವದವರನ್ನು ತಡೆಯಲು ಸಾಧ್ಯವಿಲ್ಲ’. “ಆದರೆ ಪೋಷಕರು ತಮ್ಮ ಮಕ್ಕಳಿಗೆ ಸ್ವ-ಇಚ್ಛೆಯಿಂದ ಜೀವಿಸಲು ಅವಕಾಶ ನೀಡಬೇಕು.

Advertisement

ಸುಮಾರು 17ರಿಂದ 20 : ವರ್ಷದೊಳಗೆ ಅವರಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣವೇ ಮನೋವೈದ್ಯರನ್ನು ಸಂಪರ್ಕಿಸಿ ಆಪ್ತ ಸಮಾಲೋಚನೆ ಮಾಡುವುದು ಉತ್ತಮ. ಇದರಿಂದ ಮುಂದೆ ಮನನೊಂದು ಹಾಗೂ ಭಯದಿಂದ ಮನೆ ಬಿಟ್ಟು ಹೋಗುವುದು ತಪ್ಪುತ್ತದೆ’ ಎಂದು ತಿಳಿಸಿದರು.

ಕ್ಷುಲ್ಲಕ ಕಾರಣಕ್ಕೆ ನಾಪತ್ತೆ: 18 ವರ್ಷದೊಳಗಿನ ಹೆಣ್ಣು ಮಕ್ಕಳು ನಾಪತ್ತೆಯಾದರೆ ಅಪಹರಣ ಪ್ರಕರಣ ದಾಖಲಿಸಲಾಗುತ್ತದೆ. ಈ ಪ್ರಕರಣಗಲ್ಲಿ ಪೋಷಕರಿಂದ ಓದಲು ಒತ್ತಡ, ಹೊರಗಿನ ಪ್ರದೇಶಗಳಿಗೆ ಹೋಗಲು ತವಕ. ಮೊಬೈಲ್‌ ಕೊಡಿಸದಿರುವುದು, ಪೋಷಕರು ನಿಂದಿಸಿದಕ್ಕೆ, ಜತೆಗೆ ಹದಿಹರೆಯದಲ್ಲೇ ಪ್ರೀತಿಗೆ ಬಿದ್ದು, ಪ್ರಿಯಕರನ ಜತೆ ಹೋಗುತ್ತಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳುತ್ತಾರೆ.

ಪುರುಷರ ನಾಪತ್ತೆಯೂ ಹೆಚ್ಚು: ಪುರುಷರ ನಾಪತ್ತೆ ಪ್ರಕರಣಗಳಲ್ಲೂ ಏರಿಕೆ ಕಂಡು ಬಂದಿದೆ. ಕಳೆದ ನಾಲ್ಕು ವರ್ಷದಲ್ಲಿ ಐದೂವರೆ ಸಾವಿರ ಮಂದಿ ಪುರುಷರು ನಾಪತ್ತೆಯಾಗಿದ್ದು, 4770 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಸಕ್ತ ವರ್ಷದಲ್ಲಿ(ಮೇ ಅಂತ್ಯದವರೆಗೆ) 730 ಮಂದಿ ಪುರುಷರು ನಾಪತ್ತೆಯಾಗಿದ್ದು, 501 ಮಂದಿಯನ್ನು ಪತ್ತೆಹಚ್ಚಲಾಗಿದೆ.

ಏನೆಲ್ಲ ಕಾರಣಗಳು?:

  • ಈ ನಾಪತ್ತೆ ಪ್ರಕರಣಗಳಲ್ಲಿ ವಿವಾಹಿತ ಮಹಿಳೆಯರು, ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ. ಮೂಲಗಳ ಪ್ರಕಾರ, ಮನೆ ಸದಸ್ಯರ ಜತೆ ಮನಸ್ತಾಪ, ಕೌಟುಂಬಿಕ ವಿಚಾರ, ಪ್ರೀತಿ ಪ್ರೇಮಾ, ಅಕ್ರಮ ಸಂಬಂಧ. ಇದರೊಂದಿಗೆ ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ತೊಡಗುವಿಕೆಯೇ ಮತ್ತೂಂದು ಕಾರಣ ಎಂದು ಹೇಳಲಾಗಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟ್ರಾಗ್ರಾಂಗಳಲ್ಲಿ ಪರಿಚಯವಾಗುವ ಯುವಕರ ಪ್ರೀತಿಗೆ ಸಿಲುಕಿ ಮನೆ ಬಿಟ್ಟು ಹೋಗುತ್ತಾರೆ. ವಿವಾಹಿತ ಮಹಿಳೆಯರು ಸಹ ಪರಪುರುಷನ ಮೋಹಕ್ಕೊಳಗಾಗಿ ಕುಟುಂಬ ತೊರೆಯುತ್ತಿರುವುದು ಪತ್ತೆಯಾಗುತ್ತಿವೆ.
  • ನಾಪತ್ತೆ ಪ್ರಕರಣಗಳ ಪತ್ತೆ ಕಾರ್ಯಕ್ಕೆ ಪ್ರತಿ ಪೊಲೀಸ್‌ ಠಾಣೆಯಲ್ಲಿ ಒಬ್ಬ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿ ನೇಮಿಸಲಾಗುತ್ತದೆ. ಈ ತಂಡ ಕ್ಷೀಪ್ರ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
  • ಪೊಲೀಸರ ಪ್ರಕಾರ, ಕೆಲ ಮಹಿಳೆಯರು ಉದ್ದೇಶಪೂರ್ವಕವಾಗಿಯೇ ಮನೆ ಬಿಟ್ಟು ಹೋದವರ ಪತ್ತೆ ಕಾರ್ಯ ಸುಲಭವಲ್ಲ. ಯಾಕೆಂದರೆ, ಪೊಲೀಸರ ಶೋಧಕಾರ್ಯದ ಬಗ್ಗೆ ತಿಳಿದು, ಬೇರೆಡೆ ಹೋದಾಗ ತಮ್ಮ ಸಂಪೂರ್ಣ ಮಾಹಿತಿಯನ್ನು ಬದಲಿಸಿಕೊಂಡಿರುತ್ತಾರೆ. ಇನ್ನು ಕೆಲ ಸಂದರ್ಭದಲ್ಲಿ ಕುಟುಂಬದ ಘನತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಪುತ್ರಿ ಅಥವಾ ಪತ್ನಿ ಪತ್ತೆಯಾದರೂ ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳ ನಾಪತ್ತೆ ಅಥವಾ ಅಪಹರಣ ಪ್ರಕರಣ ವನ್ನು ಅತಿ ಗಂಭೀರವಾಗಿ ಪರಿಗಣಿಸಿ ಪತ್ತೆ ಹಚ್ಚಲು ವಿಶೇಷ ತಂಡ ಕೂಡ ರಚಿಸಲಾಗುತ್ತದೆ. ಅವರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. -ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಆಯುಕ್ತ

2019/ ಪುರುಷರು /ಮಹಿಳೆಯರು

ನಾಪತ್ತೆ/ 2028/ 2958

ಪತ್ತೆ /1795 /2870

2020/ ಪುರುಷರು/ ಮಹಿಳೆಯರು

ನಾಪತ್ತೆ /1370/ 2304

ಪತ್ತೆ/ 1209/ 2251

2021 /ಪುರುಷರು /ಮಹಿಳೆಯರು

ನಾಪತ್ತೆ/ 1491/ 2363

ಪತ್ತೆ/ 1265/ 2254

2022(ಮೇ) ಪುರುಷರು /ಮಹಿಳೆಯರು

ನಾಪತ್ತೆ/ 730/ 1100

ಪತ್ತೆ 501 /865

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next