Advertisement

ಟ್ರೇಲರ್‌ನಲ್ಲಿ ಕಂಗೊಳಿಸಿದ ಸುಂದರಿ

12:30 AM Jan 25, 2019 | Team Udayavani |

ಕನ್ನಡದಲ್ಲೀಗ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳ ಪರ್ವ. ಹೌದು, ಈಗಾಗಲೇ ಇತಿಹಾಸ ವಿಷಯ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ, “ಸುವರ್ಣ ಸುಂದರಿ’ ಎಂಬ ಚಿತ್ರವೂ ಸೇರಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿದ್ದು, ಇದೊಂದು ಪುನರ್ಜನ್ಮದ ಕಥಾವಸ್ತು ಹೊಂದಿದೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಮುಹೂರ್ತ ಆಚರಿಸಿಕೊಂಡಿದ್ದ ಈ ಚಿತ್ರ, ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಎಂ.ಎಸ್‌.ಎನ್‌.ಸೂರ್ಯ ನಿರ್ದೇಶಕರಾಗಿದ್ದು, ಚಿತ್ರವನ್ನು ಲಕ್ಷ್ಮೀ ನಿರ್ಮಾಣ ಮಾಡಿದ್ದಾರೆ.

Advertisement

ಎಲ್ಲಾ ಸರಿ, ಈ “ಸುವರ್ಣ ಸುಂದರಿ’ ಕಥೆ ಏನು? ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ಎಂ.ಎಸ್‌.ಎನ್‌.ಸೂರ್ಯ, “ಇದು ನಾಲ್ಕು ತಲೆಮಾರಿನ ಕಥೆ ಹೊಂದಿದೆ. ಸುಮಾರು 600 ವರ್ಷಗಳ ಹಿಂದಿನ ಕಥೆ ಹೇಳಹೊರಟಿದ್ದು,  ಕ್ರಿ.ಶ. 1508 ರಿಂದ ಪ್ರಸಕ್ತ 2018ರ ವರೆಗಿನ ನಾಲ್ಕು ತಲೆಮಾರಿನ ಕತೆ ಇಲ್ಲಿ ಬಂದು ಹೋಗಲಿದೆ. ಕೃಷ್ಣದೇವರಾಯರ ಅವಧಿಯಲ್ಲಿ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಬಳಸಲಾಗಿದೆ. ಇತಿಹಾಸದ ಕಥೆ ಮತ್ತು ಪುನರ್ಜನ್ಮದ ಕಥೆಗಳನ್ನು ಹೇಳಬೇಕೆಂದರೆ, ಸಾಕಷ್ಟು ಸಮಯ ಬೇಕು. ಕಥೆಗೆ ಪೂರಕವಾಗಿ ಇಲ್ಲಿ ಸುಮಾರು 50 ನಿಮಿಷಗಳ ಕಾಲ ಗ್ರಾಫಿಕ್ಸ್‌ಗೆ ಜಾಗ ಕೊಡಲಾಗಿದೆ. ಕೇರಳ, ಹೈದರಾಬಾದ್‌, ಬೀದರ್‌ ಸೇರಿದಂತೆ ಇತರೆಡೆ ಚಿತ್ರೀಕರಣವಾಗಿದೆ’ ಎಂಬುದು ನಿರ್ದೇಶಕರ ಮಾತು

ಚಿತ್ರದಲ್ಲಿ ಸಾಕ್ಷಿ ಎರಡು ತಲೆಮಾರು ದೃಶ್ಯಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ ಹೊರಬಂದಿದ್ದು, ಅದಕ್ಕೆ ಸಾಯಿಕುಮಾರ್‌ ಅವರ ಹಿನ್ನೆಲೆ ಧ್ವನಿ ಇದೆ. ಚಿತ್ರದಲ್ಲಿ ತಿಲಕ್‌, ಇನ್ನೊಬ್ಬ ನಾಯಕಿ ಪೂರ್ಣ ಇದ್ದಾರೆ. ಜಯಪ್ರದ ಅವರು ಸಹ ಇಲ್ಲಿ ಆಕರ್ಷಣೆಯಾಗಿದ್ದಾರೆ ಎಂಬುದು ವಿಶೇಷ. ಸಾಯಿಕಾರ್ತಿಕ್‌ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ಬಾಹುಬಲಿ-2′ ಚಿತ್ರದ ಸೆಕೆಂಡ್‌ ಯುನಿಟ್‌ ಕ್ಯಾಮೆರಾಮೆನ್‌ ಯಲ್ಲ ಮಹಂತಿ ಈಶ್ವರ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಾಮ್‌ ಸುಂಕರ ಸಾಹಸ ಮಾಡಿದ್ದಾರೆ. ಆರಂಭದಲ್ಲಿ ಕಡಿಮೆ ಬಜೆಟ್‌ನಲ್ಲಿ ತಯಾರಿ ಮಾಡಿಕೊಂಡಿದ್ದ ಚಿತ್ರಕ್ಕೆ ಈಗ ಅದು ದುಪ್ಪಟ್ಟಾಗಿದೆ ಎಂಬುದು ನಿರ್ಮಾಪಕಿ ಎಂ.ಎನ್‌.ಲಕ್ಷೀ ಅವರ ಹೇಳàಕೆ. ಅಂದಹಾಗೆ, ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರದಲ್ಲಿ ಮಹ್ಮದ್‌ ಖಾನ್‌, ಅವಿನಾಶ್‌, ಜೈ ಜಗದೀಶ್‌ ಸೇರಿದಂತೆ ಹಲವು ನಟರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next