Advertisement

ʻಮಿಶ್ರಾʼ ಸಾವಯವ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ

12:25 PM Feb 08, 2023 | Team Udayavani |

ಕಲಬುರಗಿ: ಕೃಷಿಯಲ್ಲಿ ತಾಳ್ಮೆ-ದುಡಿಮೆ ಹೊಂದಿದ್ದಲ್ಲಿ ಖಂಡಿತವಾಗಿ ಯಶಸ್ಸು ಹೊಂದಬಹುದು. ಭೂಮಿ ತಾಯಿಗಾಗಿ ದುಡಿದರೆ ಖಂಡಿತ ಕೈ ಹಿಡಿಯುತ್ತಾಳೆ ಎಂಬುದಕ್ಕೆ ಬಿಇ ಎಂಜಿನಿಯರಿಂಗ್‌ ಪದವಿ ಹೊಂದಿ ಕೃಷಿ ಕಾಯಕ ಮೈಗೂಡಿಸಿಕೊಂಡು ಯಶಸ್ವಿ ರೈತನಾಗಿ ಹೊರ ಹೊಮ್ಮಿರುವ ಜೀತೇಂದ್ರ ಮಿಶ್ರಾ ಅವರೇ ಸಾಕ್ಷಿ. ಕಲಬುರಗಿ-ಬೀದರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಹಾಗಾಂವ-ಕಮಲಾಪುರ ನಡುವೆ ಇರುವ 20 ಎಕರೆ ಜಮೀನನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಅದರಲ್ಲೂ ಕಬ್ಬಿನ ಗಾಣ (ಆಲೆಮನೆ) ರೂಪಿಸಿ ಸಾವಯವ ಬೆಲ್ಲ ತಯಾರಿಸಿ ಲಕ್ಷಾಂತರ ರೂ. ಆದಾಯ ಕಂಡುಕೊಳ್ಳುತ್ತಿದ್ದಾರೆ.

Advertisement

ನಗರದ ಶಹಾಬಜಾರ ನಿವಾಸಿ ಜೀತೇಂದ್ರ ಮಿಶ್ರಾ ಅಭಿವೃದ್ಧಿ ಕೃಷಿ ಕಾಯಕದಿಂದ ಜಿಲ್ಲಾದ್ಯಂತ ಮನೆ ಮಾತಾಗಿರುವುದು ಸಣ್ಣ ಸಾಧನೆಯಲ್ಲ. ಇದರ ಹಿಂದೆ ನಿರಂತರ ದುಡಿಮೆ-ತಾಳ್ಮೆಯ ಶ್ರಮವಿದೆ. ಸಾವಯವ ಕೃಷಿ ಅಳವಡಿಸಿಕೊಂಡ ಪ್ರಾರಂಭದ ಎರಡೂ ಮೂರು ವರ್ಷ ನಷ್ಟ ಅನುಭವಿಸಿದರೂ ಶ್ರದ್ಧೆಯಿಂದ ಕೃಷಿ ಕಾಯಕ ಕೈಗೊಂಡ ಪರಿಣಾಮ ಇಂದು ಯಶಸ್ವಿ ಹಾಗೂ ಪ್ರಗತಿಪರ ರೈತನಾಗಿ ಹೊರ ಹೊಮ್ಮಿದ್ದಾರೆ.

ಇದೇ ಕಾರಣಕ್ಕೆ ಅವರನ್ನು ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾವಯವ ಕೃಷಿ, ಮಾದರಿ ಕೃಷಿ ಹೊಂಡಗಳ ನಿರ್ಮಾಣ, ವಿವಿಧ ಹಣ್ಣು ಹಂಪಲು ಕೃಷಿ, ಹೈನುಗಾರಿಕೆ, ಅದರಲ್ಲೂ ಗಾಣದಿಂದ ತಯಾರಿಸುವ ಬೆಲ್ಲ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಕೃಷಿ ಕಾಯಕ ಅವಲೋಕಿಸುತ್ತಿದ್ದಾರೆ.

ತುಪ್ಪದಂತೆ ಮಾರಾಟವಾಗುತ್ತಿದೆ ಬೆಲ್ಲ:

ಕಬ್ಬು ಕಾರ್ಖಾನೆಗೆ ಸರಬರಾಜು ಮಾಡಬಹುದಿತ್ತು. ಆದರೆ ಬಿಲ್‌ಗಾಗಿ ಅಲೆಯುವ ಬದಲು ಜತೆಗೆ ಕಬ್ಬು ಕಟಾವು ಮಾಡಲು ಕಾರ್ಮಿಕರ ಸಮಸ್ಯೆ ಇರುವುದನ್ನು ಮನಗಂಡು ಗಾಣ ಮಾಡಿ ಬೆಲ್ಲ ತಯಾರಿಸಿದರೆ ಜನತೆಗೆ ಶುದ್ಧ ಬೆಲ್ಲ ನೀಡಬಹುದು ಎಂಬುದನ್ನು ಮನಗಂಡು ಕಬ್ಬಿಗೆ ಯಾವುದೇ ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಕೃಷಿ ಮೂಲಕ 1001 ತಳಿಯ ಕಬ್ಬಿನ ತಳಿ ಬೆಳೆದು ಅದರಿಂದ ಗಾಣ ಮಾಡಿ ಬೆಲ್ಲ ತಯಾರಿಸುತ್ತಿದ್ದಾರೆ.

Advertisement

ತಯಾರಿಸಿದ ಬೆಲ್ಲವನ್ನು ಗ್ರಾಹಕರು ಹೊಲಕ್ಕೆ ಹೋಗಿ ಖರೀದಿಸುತ್ತಿದ್ದಾರೆ. ನಗರದ ಅವರ ಮನೆಯಲ್ಲೂ ಮಾರಾಟ ಮಾಡುತ್ತಿರುವ ಜತೆಗೆ ದೂರದ ಊರಿನವರಿಗೆ ಕೋರಿಯರ್‌ ಮೂಲಕ ಕಳುಹಿಸಲಾಗುತ್ತಿದೆ. ಮಿಶ್ರಾ ಅವರ ಬೆಲ್ಲ ಗಾಣ ನಡೆಯುವ ಒಂದು ತಿಂಗಳು ಹಾಗೂ ತದನಂತರ ತಿಂಗಳಲ್ಲೇ ಸಂಪೂರ್ಣ ಮಾರಾಟವಾಗುತ್ತದೆ. ಹೊಲಕ್ಕೆ ಹಾಗೂ ಮನೆಗೆ ಬಂದು ಸಾರ್ವಜನಿಕರು, ಸೂಪರ್‌ ಶಾಪ್‌ನವರು ಖರೀದಿಸುತ್ತಿರುವುದರಿಂದ ಮಿಶ್ರಾ ಅವರಿಗೆ ಮಾರುಕಟ್ಟೆ ಸಮಸ್ಯೆಯೇ ಇಲ್ಲ.

ಕಬ್ಬಿನ (ಆಲೆಮನೆ) ಗಾಣದಿಂದ ಬೆಲ್ಲ ತಯಾರಿಕೆ ಈಗ ಅಪರೂಪ. ಕಾರ್ಮಿಕರ ಸಮಸ್ಯೆಯಿಂದ ಗಾಣದಿಂದ ಬೆಲ್ಲ ತಯಾರಿಕೆ ಕೈ ಬಿಟ್ಟು ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದಾರೆ. ಅದಲ್ಲದೇ 10 ಕೆಜಿಯುಳ್ಳ ಬೆಲ್ಲದ ಮುದ್ದೆ ತಯಾರಿಸಲಾಗುತ್ತಿದೆ. ಆದರೆ ಮಿಶ್ರಾ 15ರಿಂದ 50 ಗ್ರಾಂನಿಂದ ಹಿಡಿದು ಕೆಜಿ, ಐದು ಹಾಗೂ 10 ಕೆಜಿಯುಳ್ಳ ಬೆಲ್ಲದ ಮುದ್ದೆ ರೂಪಿಸುತ್ತಿದ್ದಾರೆ. ಮಕ್ಕಳಿಗೆ ಚಾಕೋಲೇಟ್‌ ಕೊಡುವ ಬದಲು 15 ಗ್ರಾಂ ಬೆಲ್ಲದ ತುಣಕು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದು ಹೊಸತನಕ್ಕೆ ಮುಂದಾಗಿದ್ದಾರೆ. ಈ ತರಹದ ಬೆಲ್ಲದ ಚಾಕೋಲೇಟ್‌ ಮಾದರಿಯಲ್ಲಿ ಕಬ್ಬಿನ ತುಣುಕು ಯಾರೂ ತಯಾರಿಸಿಲ್ಲ. ಪ್ರತ್ಯೇಕ ಸಾಧನ ರೂಪಿಸಿ ಚಾಕೋಕೇಟ್‌ ತಯಾರಿಸಲಾಗಿದೆ.

ಒಟ್ಟಾರೆ ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸಾವಯವ ಕಬ್ಬನ್ನು ಗಾಣ ಮಾಡಿ ಎಕರೆಗೆ ಎರಡು ಲಕ್ಷ ರೂ.ದಂತೆ ಒಟ್ಟಾರೆ 7ರಿಂದ 8 ಲಕ್ಷ ರೂ. ಆದಾಯ ಕಂಡುಕೊಳ್ಳಲಾಗಿದೆ. ಒಂದು ವೇಳೆ ಕಬ್ಬು ಕಾರ್ಖಾನೆಗೆ ಸರಬರಾಜು ಮಾಡಿದ್ದರೆ ನಾಲ್ಕು ಲಕ್ಷ ರೂ. ಬರುತ್ತಿತ್ತು. ಆದರೆ ಆಲೆಮನೆಯಿಂದ ಬೆಲ್ಲ ತಯಾರಿಸಿದರೆ ನೂರಾರು ಕಾರ್ಮಿಕರಿಗೆ ಕೆಲಸ ಕೊಡುವ ಜತೆಗೆ ಜನರಿಗೆ ಉತ್ತಮ ಬೆಲ್ಲ ಕೊಡಲು ಸಾಧ್ಯ ಎಂಬುದನ್ನು ಮನಗಂಡು ಜೀತೇಂದ್ರ ಮಿಶ್ರಾ ಕಳೆದ ಹಲವಾರು ವರ್ಷಗಳಿಂದ ಕಬ್ಬಿನ ಗಾಣದಿಂದ ಬೆಲ್ಲ ತಯಾರಿಕೆ ಮುಂದುವರಿಸಿದ್ದಾರೆ.

ಸಮಗ್ರ ಕೃಷಿ ಏನೇನು?
ಮಿಶ್ರಾ ಅವರಿಗೆ 20 ಎಕರೆ ಭೂಮಿಯಿದೆ. ಈ ಭೂಮಿಯಲ್ಲಿ ಕಬ್ಬು, ಉಳಾಗಡ್ಡಿ, ಮಾವು, ನಿಂಬೆಕಾಯಿ, ಪೇರು ಇತರೆ ಹಣ್ಣು-ಹಂಪಲು ಜತೆಗೆ ಒಣಬೇಸಾಯದಲ್ಲಿ ತೊಗರಿ, ಜೋಳ, ಕಡಲೆ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಒಂದು ಬೇಳೆ ನಷ್ಟವಾದರೆ ಹಾಗೂ ಒಂದಕ್ಕೆ ಬೆಲೆ ಸಿಗದಿದ್ದರೆ ಬೇರೆ ಬೆಳೆಯಲ್ಲಿ ಸರಿದೂಗಿಸಬಹುದು ಎಂಬ ನಿಟ್ಟಿನಲ್ಲಿ ಸಮಗ್ರ ಕೃಷಿ ಕೈಗೊಂಡಿದ್ದಾರೆ. ಪ್ರತಿ ದಿನ ನಗರದಿಂದ ಬೆಳಗ್ಗೆ ಹೊಲಕ್ಕೆ ಎಲ್ಲ ಕೆಲಸ ಮುಂದೆ ನಿಂತು ಮಾಡಿಸುವ ಹಾಗೂ ಮಾರುಕಟ್ಟೆಗೆ ಹೊಸ ತಾಂತ್ರಿಕತೆ ಮೈಗೂಡಿಸಿಕೊಂಡಿರುವ ಮಿಶ್ರಾ ಅವರ ಸಮಗ್ರ

ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ ಕೃಷಿ ಮಾದರಿಯಾಗಿದೆ. ಆಗಾಗ್ಗೆ ಹೋಗಿ ಬಂದು ಕೃಷಿ ಕಾಯಕ ಅವಲೋಕಿಸಿ ಅಳವಡಿಸಿಕೊಳ್ಳಲಾಗುತ್ತಿದ್ದು, ನಿಷ್ಠೆಯಿಂದ ಕೃಷಿ ಕಾಯಕ ಕೈಗೊಂಡರೆ ಕೈಬಿಡದು. ಇದನ್ನು ಎಲ್ಲರೂ ಮನಗಾಣಬೇಕು.

-ಜೀತೇಂದ್ರ ಮಿಶ್ರಾ, ಪ್ರಗತಿಪರ ರೈತ

ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಕಬ್ಬು ಬೆಳೆಯಲು ಸಮಸ್ಯೆ ಇಲ್ಲ. ಆದರೆ ಸಾಗಾಟ ಮಾಡುವುದು ಹಾಗೂ ಬಿಲ್‌ ಪಡೆಯಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಗಾಣ ಮಾಡಿ ಬೆಲ್ಲ ತಯಾರಿಸುವುದೇ ಸೂಕ್ತ ಪರಿಹಾರ. ಈ ನಿಟ್ಟಿನಲ್ಲಿ ಜೀತೇಂದ್ರ ಮಿಶ್ರಾ ಕಳೆದ ಹಲವಾರು ವರ್ಷಗಳಿಂದ ಗಾಣ ಮಾಡುತ್ತಿರುವುದು ಮಾದರಿಯಾಗಿದೆ.

-ಚಂದ್ರಕಾಂತ ಜೀವಣಗಿ,ಸಹಾಯಕ ಕೃಷಿ ನಿರ್ದೇಶಕ, ಕಲಬುರಗಿ

ಜೀತೇಂದ್ರ ಮಿಶ್ರಾ ತಮ್ಮ ಮಾದರಿಯ ಅದರಲ್ಲೂ ಸಾವಯವ ಕೃಷಿ ಉತ್ಪನ್ನಗಳಿಗೆ ತಮ್ಮದೇಯಾದ ಮಿಶ್ರಾ ಬ್ರ್ಯಾಂಡ್‌ ರೂಪಿಸಿಕೊಂಡಿದ್ದಾರೆ. ಒಟ್ಟಾರೆ ಸಮಗ್ರ ಕೃಷಿ ಹಾಗೂ ಸಾವಯವ ಬೆಲ್ಲಕ್ಕಾಗಿ ಮೊ. 9342351736 ಹಾಗೂ 7619102658 ಸಂಪರ್ಕಿಸಬಹುದು.

„ಹಣಮಂತರಾವ ಭೈರಾಮಡಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next