ಕೊಲಂಬೊ: ಕಳೆದ ವರ್ಷ ಖ್ಯಾತ ಗಾಯಕ ಎಆರ್ ರೆಹಮಾನ್ ಅವರ ಮರಕ್ಕುಮಾ ನೆಂಜಮ್ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಭಾರೀ ಜನಸ್ತೋಮ ಸೇರಿದ ಕಾರಣ ನೂಕುನುಗ್ಗಲು ಉಂಟಾಗಿತ್ತು. ಇದೀಗ ಜನಪ್ರಿಯ ಗಾಯಕ ಹರಿಹರನ್ ಅವರ ಇತ್ತೀಚೆಗಿನ ಕಾನ್ಸರ್ಟ್ ನಲ್ಲಿ ಇಂಥದ್ದೇ ದೃಶ್ಯ ಕಂಡು ಬಂದಿದೆ.
ಇತ್ತೀಚೆಗೆ(ಫೆ.9 ರಂದು) ಶ್ರೀಲಂಕಾದ ಜಾಫ್ನಾದಲ್ಲಿ ಹರಿಹರನ್ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನುಆಯೋಜನೆ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಕಾರ್ಯಕ್ರಮ ಕಳೆದ ಡಿಸೆಂಬರ್ ನಲ್ಲೇ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಕಾರ್ಯಕ್ರಮವನ್ನು ಫೆ.9 ರಂದು ನಿಗದಿಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡಲಾಗಿತ್ತು. ಗಾಯಕ ಹರಿಹರನ್ ಮಾತ್ರವಲ್ಲದೆ, ದಕ್ಷಿಣ ಚಿತ್ರರಂಗದ ಪ್ರಮುಖ ತಾರೆಯರಾದ ತಮನ್ನಾ ಭಾಟಿಯಾ, ರಂಬಾ, ಯೋಗಿ ಬಾಬು, ಶ್ವೇತಾ ಮೆನನ್, ಬಾಲಾ ಮತ್ತು ಸ್ಯಾಂಡಿ ಮಾಸ್ಟರ್ ಮುಂತಾದವರು ಭಾಗಿಯಾಗಿದ್ದರು.
ತಮನ್ನಾ ಅವರ ಪ್ರದರ್ಶನದ ಬಳಿಕ ಅನಿರೀಕ್ಷಿತವಾಗಿ ಲಕ್ಷಕ್ಕೂ ಅಧಿಕ ಜನ ಕಾರ್ಯಕ್ರಮವನ್ನು ನೋಡಲು ಹರಿದು ಬಂದಿದ್ದಾರೆ. ಕಾರ್ಯಕ್ರಮದ ಆಯೋಜಕರು ಮೊದಲು ಉಚಿತವಾಗಿ ಕಾರ್ಯಕ್ರಮಕ್ಕೆ ಬರಬಹುದೆಂದು ಘೋಷಿಸಿದ್ದರು. ಆದರೆ ಆ ಬಳಿಕ ಒಂದು ವಿಭಾಗಕ್ಕೆ 3,000 ರಿಂದ 25,000 ರೂ.ವರೆಗೆ ರೂ.ವರೆಗೆ ಟಿಕೆಟ್ ಇಟ್ಟಿದ್ದರು. ಆದರೆ ಜನ ಪಾವತಿಸಿದ ಸೀಟ್ ಗಳನ್ನು ಕಬಳಿಸುವ ಭರದಲ್ಲಿ ನೂಕುನುಗ್ಗಲು ಉಂಟಾಗಿದೆ. ಎಲ್ಲಿಯವರೆಗೆ ಅಂದರೆ ಕಲಾವಿದರು ಜನರಲ್ಲಿ ಮಾಡಿದರೂ ಜನದಟ್ಟಣೆ ಕಮ್ಮಿಯಾಗಿಲ್ಲ. ಇದರಿಂದ ಕೆಲಕಾಲ ಕಾರ್ಯಕ್ರವನ್ನು ನಿಲ್ಲಿಸಲಾಗಿತ್ತು.
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಕಾಣಕಲು ಕ್ಯಾಮೆರಾ ಹಾಗೂ ಸ್ಪೀಕರ್ ಇಟ್ಟ ಜಾಗದಲ್ಲಿ ಹತ್ತಿ ಕೂತಿದ್ದಾರೆ. ಕೆಲವರಂತೂ ಮರದ ಮೇಲೆ ಹತ್ತಿದ್ದಾರೆ.
ಅಭಿಮಾನಿಗಳ ರಾದ್ಧಾಂತದಿಂದ ಭದ್ರತಾ ಸಿಬ್ಬಂದಿ ಮತ್ತು ನಟರು ಅಭಿಮಾನಿಗಳನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಕಾನ್ಸರ್ಟ್ ನ ನಿಯಮಗಳು ಮತ್ತು ನಿಬಂಧನೆಗಳನ್ನು ಜನ ಅನುಸರಿಸಲು ನಿರಾಕರಿಸಿದ ನಂತರ ಟಾಸ್ಕ್ ಫೋರ್ಸ್ ಪಡೆ ಜನರಿಗೆ ಎಚ್ಚರಿಕೆ ನೀಡಿದೆ.
ಈ ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದು, 6 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಉಚಿತ ಪ್ರೇಕ್ಷಕರ ಪ್ರವೇಶದಿಂದ ಸಮಸ್ಯೆಗಳು ಉಂಟಾಗಿವೆ ಎಂದು ಆಯೋಜಕರು ಹೇಳಿದ್ದಾರೆ. ಇನ್ನೊಂದೆಡೆ ಈ ಅವಘಡಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಎಂದು ಜನ ಆರೋಪಿಸಿದ್ದಾರೆ.
ಈ ಕಾರ್ಯಕ್ರಮವನ್ನು ನಟಿ ರಂಬಾ ಅವರ ಪತಿ ಇಂದ್ರ ಮತ್ತು ಅವರ ಉತ್ತರ ವಿಶ್ವವಿದ್ಯಾಲಯ ಆಯೋಜಿಸಿತ್ತು.