ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಮತ್ತೆ ಕೋವಿಡ್ ಯೋಧರ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಇಂದು ರಾತ್ರಿ ನಡೆದಿದೆ.
ಇಲ್ಲಿನ 58 ಜನರನ್ನು ಕ್ವಾರೆಂಟೈನ್ ಮಾಡಲೆಂದು ತೆರಳಿದ್ದ ಆರೋಗ್ಯ ಯೋಧರ ಮೇಲೆ ಸ್ಥಳೀಯ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ ಮತ್ತು ಇದನ್ನು ತಡೆಯಲು ಬಂದ ಸೀಮಿತ ಪೊಲೀಸ್ ಪಡೆಗಳ ಮೇಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪುಂಡರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಇಂದು ರಾತ್ರಿಯಾಗುತ್ತಿದ್ದಂತೆ ಈ ಪ್ರದೇಶದ ಕೆಲ ಶಂಕಿತ ವ್ಯಕ್ತಿಗಳು ರೌಡಿಗಳ ರೀತಿಯಲ್ಲಿ ಅಟ್ಟಹಾಸ ಮೆರೆದಿದ್ದು ಲಾಕ್ ಡೌನ್ ಸಂಬಂಧ ಹಾಕಲಾಗಿದ್ದ ಚೆಕ್ ಪೋಸ್ಟನ್ನು ಪುಡಿಗೈದಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಥರಾದರು.
ವಾಹನಗಳ ಸಹಿತ ಏಕಾಏಕಿ ಗುಂಪುಕಟ್ಟಿಕೊಂಡು ಬಂದ ಈ ಕಿಡಿಗೇಡಿಗಳು ಪರಿಸ್ಥಿತಿಯ ಲಾಭವನ್ನು ಪಡೆದು ದಾಂಧಲೆ ಎಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ.
ಕೋವಿಡ್ ಸೋಂಕಿತರ ಎರಡನೇ ಸಂಪರ್ಕಿತರನ್ನು ಕ್ವಾರೆಂಟೈನ್ ಕೇಂದ್ರಗಳಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.