Advertisement
ಇದೇನು ಹೊಚ್ಚ ಹೊಸ ಕಥೆ ಅಲ್ಲ ನಿಜ. ಕನ್ನಡದಲ್ಲಿ ಮುಂಗೋಪಿ ಹುಡುಗನ ಕಥೆವುಳ್ಳ ಚಿತ್ರಗಳು ಬೇಜಾನ್ ಬಂದು ಹೋಗಿವೆ. ಅಷ್ಟಕ್ಕೂ ಇದು ಮಲಯಾಳಂನ “ಕಲಿ’ ಚಿತ್ರದ ಅವತರಣಿಕೆ. ಹಾಗಾಗಿ, ಇದನ್ನು ವೈಭವೀಕರಿಸಿ ಹೇಳುವ ಅಗತ್ಯವಿಲ್ಲ. ಹಾಗೇ ವೈಭವೀಕರಿಸುವಂತಹ ಚಿತ್ರವೂ ಅಲ್ಲ, ಅಂತಹ ಅಂಶಗಳೂ ಇಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, “ಕಿಡಿ’ ಅಷ್ಟಾಗಿ ಹಾರಲ್ಲ! ಚಿತ್ರದ ಮೊದಲರ್ಧ ನೋಡುಗರೇ “ಕಿಡಿ’ಕಾರುವಷ್ಟರ ಮಟ್ಟಿಗೆ ಸಾಗುತ್ತದೆ.
Related Articles
Advertisement
ಕೋಪವನ್ನು ಕಡಿಮೆ ಮಾಡಿಕೊಳ್ಳದೇ ಹೋದಲ್ಲಿ, ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನಿಲ್ಲಿ ಕಾಣಬಹುದು. ಇದಷ್ಟೇ ಸಮಾಧಾನದ ವಿಷಯ. ಸಿನಿಮಾ ಕಥೆ ವಿಷಯಕ್ಕೆ ಬಂದರೆ, ಅವನು ಮುಂಗೋಪಿ. ಅಂಥಾ ಕೋಪಿಷ್ಟ ಹುಡುಗನನ್ನು ಪ್ರೀತಿಸಿ, ಮದುವೆಯಾಗುವ ಹುಡುಗಿಗೆ ಅವನ ಕೋಪವನ್ನು ತಣ್ಣಗೆ ಮಾಡುವ ತವಕ. ಇವರಿಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೂ ಜಗಳ ಶುರು.
ಅದೇ ಕಾರಣಕ್ಕೆ ದೊಡ್ಡ ಸಮಸ್ಯೆಗೂ ಸಿಲುಕುತ್ತಾರೆ. ಆಮೇಲೆ ಏನೆಲ್ಲಾ ಆಗಿ ಹೋಗುತ್ತೆ. ಅವನ ಕೋಪ ಯಾವ ಹಂತಕ್ಕೆ ಹೋಗಿ, ಎಷ್ಟೆಲ್ಲಾ ಅವಘಡಕ್ಕೆ ಕಾರಣವಾಗುತ್ತೆ ಎಂಬುದು ಕಥೆ ಮತ್ತು ವ್ಯಥೆ. ಅವರ “ಕಿಡಿ’ ಎಂಥದ್ದು ಎಂಬ ಕುತೂಹಲವಿದ್ದರೆ ಚಿತ್ರಮಂದಿರದತ್ತ ಹೋಗಬಹುದು. ಭುವನ್ ಚಂದ್ರ ಅವರ ನಟನೆಗಿಂತ ಫೈಟ್‌ನಲ್ಲಿ ಇಷ್ಟವಾಗುತ್ತಾರೆ. ಡೈಲಾಗ್ ಡಿಲವರಿಯಲ್ಲಿ ಇನ್ನಷ್ಟು ಗಮನಹರಿಸಬೇಕಿದೆ.
ಇನ್ನು, ನಾಯಕಿ ಪಲ್ಲವಿಗೌಡ ಅವರಿಲ್ಲಿ ಅಳುವುದರಲ್ಲಷ್ಟೇ ಗಮನಸೆಳೆಯುತ್ತಾರೆ. ಮಿಕ್ಕಂತೆ ಹಾಡೊಂದರಲ್ಲಿ ಚೆಂದ ಕಾಣುತ್ತಾರಷ್ಟೇ. ಉಗ್ರಂ ಮಂಜು ಖಳನ ಖದರ್ ತೋರಿಸಿದರೆ, ಚೂಲಿ ಪಾತ್ರದ ಮೂಲಕ ಡ್ಯಾನಿ ಕುಟ್ಟಪ್ಪ ರಗಡ್ ಲುಕ್‌ನಲ್ಲಿ ಭಯಪಡಿಸುತ್ತಾರೆ. ಉಳಿದಂತೆ ಯತಿರಾಜ್, ಪವನ್, ಮೋಹನ್ ರೈ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ಎಮಿಲ್ ಸಂಗೀತದಲ್ಲಿನ್ನೂ ಸ್ವಾದ ಬೇಕಿತ್ತು. ಬೆನಕರಾಜು ಕ್ಯಾಮೆರಾದಲ್ಲಿ “ಕಿಡಿ’ಯ ಅಂದವಿದೆ.
ಚಿತ್ರ: ಕಿಡಿನಿರ್ಮಾಣ: ನಾಗರಾಜ್, ಮಲ್ಲಿಕಾರ್ಜುನಯ್ಯ, ಧನಂಜಯ್
ನಿರ್ದೇಶನ: ರಘು ಎಸ್.
ತಾರಾಗಣ: ಭುವನ್ ಚಂದ್ರ, ಪಲ್ಲವಿ ಗೌಡ, ಉಗ್ರಂ ಮಂಜು, ಡ್ಯಾನಿ ಕುಟ್ಟಪ್ಪ, ಯತಿರಾಜ್, ಮೋಹನ್‌ರೈ, ಪವನ್ ಇತರರು. * ವಿಜಯ್ ಭರಮಸಾಗರ