ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಐದು ಮಂದಿ ಬಲಿಯಾಗಿದ್ದರೆ ಮತ್ತೊಂದೆಡೆ ಸತತ 4 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಮೂರು ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದ ಘಟನೆ ಈಜೀಪುರದಲ್ಲಿ ನಡೆದಿದೆ. ಏತನ್ಮಧ್ಯೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಸಂಜನಾ ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಈಜೀಪುರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತದಲ್ಲಿ ಒಂದೇ ಮನೆಯ ಐವರು ಜೀವಂತ ಸಮಾಧಿಯಾಗಿದ್ದರು. ಕಟ್ಟಡ ಕುಸಿತದ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದ ಮೂರು ವರ್ಷದ ಮಗು ಸಂಜನಾಳ ಅಳು ಕೇಳಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಸತತವಾಗಿ ಕಾರ್ಯನಿರ್ವಹಿಸುವ ಮೂಲಕ ಮಗುವನ್ನು ಜೀವಂತವಾಗಿ ಹೊರತರುವಲ್ಲಿ ಯಶಸ್ವಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಆದರೆ ಘಟನೆಯಲ್ಲಿ ಮಗು ಸಂಜನಾಳ ತಂದೆ, ತಾಯಿ ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಗರ್ಭಿಣಿ ಅಶ್ವಿನಿಯ ಶವಪತ್ತೆಯಾಗಿದ್ದು, ಅದನ್ನು ಅಗ್ನಿಶಾಮಕದಳದ ಸಿಬ್ಬಂದಿಯವರು ಹೊರತೆಗೆದಿದ್ದಾರೆ. ಗರ್ಭಿಣಿಯನ್ನು ರಕ್ಷಿಸಲು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರದಿ ಹೇಳಿದೆ.
ಜೀವನ್ಮರಣ ಹೋರಾಟದಲ್ಲಿ ಪುಟ್ಟ ಪೋರಿ ಸಂಜನಾ:
ಏತನ್ಮಧ್ಯೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಸಂಜನಾ ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಗು ಸಂಜನಾ ದೇಹ ಶೇ.60ರಷ್ಟು ಸುಟ್ಟು ಹೋಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವಶೇಷಗಳಡಿ ಸಿಲುಕಿ ಬದುಕಿ ಬಂದ ಸಂಜನಾಳ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯಾಧಿಕಾರಿಗಳು ವಿವರಿಸಿದ್ದಾರೆ.