Advertisement

ಮೀರಾರೋಡ್‌ನ‌ಲ್ಲಿ ಮೇಳೈಸಿದ ಕೊಡವ-ತುಳು ಸಾಂಸ್ಕೃತಿಕ ವೈಭವ 

12:24 PM Feb 14, 2017 | |

ಮುಂಬಯಿ: ಅವನತಿಯ ಹಾದಿಯಲ್ಲಿರುವ ಭಾಷೆಗಳನ್ನು ಉಳಿಸುವ ಸಕಾರಾತ್ಮಕ ಚಿಂತನೆಗೆ ಸ್ಪಂದಿಸುವುದೇ ಅಕಾಡೆಮಿಯ ಉದ್ದೇಶವಾಗಿದೆ. ಭಾಷೆ ಉಳಿದರೆ, ಸಂಸ್ಕೃತಿ, ಆಚಾರ, ವಿಚಾರ, ಜನಾಂಗ, ಸಂಪ್ರದಾಯಗಳು ಉಳಿಯಲು ಸಾಧ್ಯವಾಗುತ್ತದೆ. ಕೃಷಿ ಪ್ರದಾನ ಕೊಡಗಿನಲ್ಲಿ ಹೆಚ್ಚಿನ ಕಲಾರಾಧನೆಗಳು ಕೃಷಿಗೆ ಸಂಬಂಧಪಟ್ಟದ್ದಾಗಿದೆ. ಪ್ರತಿಯೊಂದು ನೃತ್ಯಗಳು ಜನಪದ ಕಲೆಯಿಂದ ಉತ್ತಮ ಬೋಧನೆಯನ್ನು ನೀಡುತ್ತದೆ. ಪ್ರೀತಿ, ಸಾಮರಸ್ಯದ ಸುಂದರ ಸಮಾಜ ನಿರ್ಮಾಣ ನಮ್ಮ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿಡ್ಡಾಟಂಡ ಎಸ್‌. ತಮ್ಮಯ್ಯ ಅವರು ಹೇಳಿದರು.

Advertisement

ಫೆ. 11ರಂದು ಮೀರಾರೋಡ್‌ ಪೂರ್ವದ ಮೀರಾಲಾನ್‌ ಪೂನಂ ಗಾರ್ಡನ್‌ ಮೈದಾನದಲ್ಲಿ ತುಳುನಾಡ ಸೇವಾ ಸಮಾಜ ಮೀರಾಭಾಯಂದರ್‌ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಡಿಕೇರಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೊಡವ-ತುಳು ಸಾಂಸ್ಕೃತಿಕ ವೈಭವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ತುಳು ಹಾಗೂ ಕೊಡಗಿನ ಹಬ್ಬ, ಹರಿದಿನಗಳಲ್ಲಿ  ಕೃಷಿ ಉಪಕ ರಣಗಳು, ವಿವಾಹ ಆರಾಧನೆಗಳು, ಮಂಗಳ ಕಾರ್ಯಗಳು, ಜನಪದ ಕ್ರೀಡೆಗಳು, ಆರಾಧನೆಗಳು ಒಂದೇ ರೀತಿಯಿಂದ ಇದೆ. 14 ಸದಸ್ಯರ ನಮ್ಮ ತಂಡದಲ್ಲಿ ನೂರಕ್ಕೂ ಹೆಚ್ಚು ಕಲಾವಿದರಿದ್ದು ಕೊಡವರ ಜನಜೀವನ ವಾಸ್ತವ ಚಿತ್ರಣದೊಂದಿಗೆ ಕರ್ನಾಟಕದ ವಿವಿಧ ಭಾಷೆ, ವಿವಿಧ ಕಲಾಪ್ರಕಾರಗಳನ್ನು ಅರಿತು ಭಾಷೆಯ ಬೆಳವಣಿಗೆಯೊಂದಿಗೆ ಅಕಾಡೆಮಿ ನೀಡಿದ ಮಹತ್ವದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.

ಉತ್ಸವ  ಉದ್ಘಾಟಿಸಿ ಮಾತನಾಡಿದ ಒಲಿಂಪಿಕ್ಸ್‌ ಮಾಜಿ ಕ್ಯಾಪ್ಟನ್‌ ಎಂ. ಎಂ. ಸೋಮಯ್ಯ ಅವರು ಮಾತನಾಡಿ, ತುಳುವರು ಹಾಗೂ ಕೊಡವರ ಆರಾಧನೆಗಳು ಹಲವಾರು ವಿಶೇಷತೆಗಳಿಂದ ಕೂಡಿದೆ. ಅನ್ಯರನ್ನು ಪರಕೀಯರೆನ್ನದೆ ಸ್ವಾಗತಿಸಿ, ಸತ್ಕರಿಸುವ ಪರಿ ಅನುಕರಣೀಯ. ಇಂತಹ ಸಾಂಸ್ಕೃತಿಕ ವೈಭವ ಉತ್ಸವಗಳು ಭಾರತದ ಉದ್ದಗಲಕ್ಕೂ ಪಸರಿಸಲಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಾತನಾಡಿ, ಇಂದಿನ ಎಲ್ಲಾ ಕಾರ್ಯಕ್ರಮಗಳು ದಾಖಲೆಯಾಗಿ ಉಳಿಯಲಿದೆ. ತುಳುವರು ಮತ್ತು ಕೊಡವರ ನೃತ್ಯ ವೈಭವಗಳ ಸಾಮರಸ್ಯ ಅನಾವರಣಗೊಂಡಿದೆ. ಗ್ರಾಮೀಣ ಪ್ರದೇಶಗಳ ಜನಜೀವನ, ಚರಿತ್ರೆ ನಮಗಾಗಿದೆ. ದೇಶದ ರಕ್ಷಣೆಯಲ್ಲಿ ಕೊಡವ ಜನಾಂಗದ ಕೊಡುಗೆ ಅಪಾರವಾಗಿದ್ದು, ಮುಂಬಯಿ ತುಳು-ಕನ್ನಡಿಗರು ಕರ್ನಾಟಕದ ಕಲಾವೈಭವಗಳನ್ನು ಭದ್ರತೆಯೊಂದಿಗೆ ರಕ್ಷಿಸುತ್ತಿರುವ ಪರಿ ಅನನ್ಯವಾಗಿದೆ ಎಂದು ಹೇಳಿದರು.

ಸಂಘಟಕರಾದ ಚೆರಾಂಡದ ಕಿಸನ್‌ ಕುಪ್ಪಂಡ ಮುದ್ದಯ್ಯ, ಅರವಿಂದ ಶೆಟ್ಟಿ, ಸಂತೋಷ್‌ ಪುತ್ರನ್‌, ಬೋಳ ರವಿ ಪೂಜಾರಿ, ಎಸ್‌. ಐ. ಭಾವಿಕಟ್ಟೆ ಮಾತನಾಡಿ ಶುಭಹಾರೈಸಿದರು. ರಿಜಿಸ್ಟ್ರಾರ್‌ ಉಮರಬ್ಬ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ನ್ಯಾನ್ಸಿ ಸಿಕ್ವೇರಾ ದಾನಿಗಳ ಹೆಸರನ್ನು ವಾಚಿಸಿದರು. ರಂಗಕಲಾವಿದ ಜಿ. ಕೆ. ಕೆಂಚನಕೆರೆ ಮತ್ತು ಮಾದೇಟಿರ ಬೆಳ್ಳಿಯಪ್ಪ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕುಪ್ಪಂಡ ಜಿ. ಮುತ್ತಣ್ಣ, ಕಾಳಿಚಂದ್ರ ಬಿ. ಐಯ್ಯಣ್ಣ, ಬೋಪಣ್ಣ ಅಪ್ಪಾಜಿ, ತುಳುನಾಡ ಸಮಾಜದ ಅಧ್ಯಕ್ಷ ಗೋಪಾಲ್‌ಕೃಷ್ಣ ಗಾಣಿಗ, ಗೌರವಾಧ್ಯಕ್ಷ ಶಂಭು ಶೆಟ್ಟಿ, ಸಂಚಾಲಕ ಡಾ| ರವಿರಾಜ ಸುವರ್ಣ, ಕಾರ್ಯದರ್ಶಿ ಶೋಭಾ ಉಡುಪ, ಉಪಾಧ್ಯಕ್ಷ ಧನಂಜಯ ಅಮೀನ್‌ ಮತ್ತು ವಸಂತಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಶೆಟ್ಟಿ ಉಪಸ್ಥಿತರಿದ್ದರು. 

Advertisement

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಣೂರು ಸಾಂತಿಂಜ ಜನಾದ‌ìನ ಭಟ್‌, ಅಂತಾರಾಷ್ಟ್ರೀಯ ಕೇಶ ವಿನ್ಯಾಸಗಾರ ಶಿವರಾಮ ಕೆ. ಭಂಡಾರಿ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿಡ್ಡಾಟಂಡ ಎಸ್‌. ತಮ್ಮಯ್ಯ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು-ಕೊಡವ ಸಾಂಸ್ಕೃತಿಕ ನೃತ್ಯ ವೈಭವ, ಸ್ಥಳೀಯ ಕಲಾವಿದರಿಂದ ಮಂಡೆಬೆಚ್ಚ ನಾಟಕ ಪ್ರದರ್ಶನಗೊಂಡಿತು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next