Advertisement

ಮೀರಾರೋಡ್‌ ಪಲಿಮಾರು ಮಠ: ಶ್ರೀನಿವಾಸ ಕಲ್ಯಾಣೋತ್ಸವ

02:43 PM Jan 17, 2018 | |

ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ. 14 ರಂದು ನಡೆಯಿತು.

Advertisement

ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರ ಪೌರೋಹಿತ್ಯದಲ್ಲಿ ಶ್ರೀನಿವಾಸ ದೇವರ ಹಾಗೂ ಶ್ರೀ ದೇವಿ ಮತ್ತು ಭೂದೇವಿಯ ಉತ್ಸವ ಮೂರ್ತಿಗೆ ವರೋಪಚಾರ, ಕಂಕಣ ಧಾರೆಣೆಯೊಂದಿಗೆ ಸಪ್ತ ವಿಧದ ಶುಭ ಜಲಾಭಿಷೇಕಗೈದರು. ನವವಸ್ತ್ರ ಮತ್ತು ಆಭರಣಗಳಿಂದ ಅಕ್ಷತಾರೋಹಣ ಮಾಂಗಲ್ಯಧಾರಣೆಯೊಂದಿಗೆ ಕಲ್ಯಾಣೋತ್ಸವವು ನೆರವೇರಿತು.

ಟ್ರಸ್ಟಿ ಸಚ್ಚಿದಾನಂದ ರಾವ್‌ ಅವರು ಪೂಜಾ ಸಂಕಲ್ಪ ನೆರವೇರಿಸಿದರು. ಉಡುಪಿ ಪರ್ಯಾಯದ ಬಗ್ಗೆ ವಿವರಣೆ ನೀಡಿದ ಟ್ರಸ್ಟಿ ಸಚ್ಚಿದಾನಂದ ರಾವ್‌ ಅವರು, ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ  ಜ. 18 ರಂದು ಪ್ರಾತ:ಕಾಲ 3 ಕ್ಕೆ ವೈಭವದ ಪರ್ಯಾಯ ಮೆರವಣಿಗೆ ಹಾಗೂ ವಿವಿಧ ವಿಧಿ-ವಿಧಾನಗಳ ಬಳಿಕ ಮುಂಜಾನೆ 6.35 ಕ್ಕೆ ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ ನಡೆಯಲಿದೆ. ಮಹಾರಾಷ್ಟ್ರದ ಹಾಗೂ ವಿವಿಧ ರಾಜ್ಯಗಳ ಜನತೆ ಈ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದರು.

ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರು ಮಾತನಾಡಿ, ಶ್ರೀಪಾದರ ಸಂಕಲ್ಪದೊಂದಿಗೆ ಎರಡು ವರ್ಷಗಳ ಅಖಂಡ ಭಜನೆ ಪರ್ಯಾಯದಂದು ಉದ್ಘಾಟನೆಗೊಳ್ಳಳಲಿದೆ. ಮಹಾರಾಷ್ಟ್ರದಾದ್ಯಂತದ ಭಜನ ಮಂಡಳಿಗಳು ಮುಂದಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.

ಪುಂಡರಿಕಾಕ್ಷ ಉಡುಪ, ಜಯರಾಮ ಭಟ್‌, ಯತಿರಾಜ ಭಟ್‌, ಶ್ರೀಶ ಭಟ್‌ ಅವರು ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ವಿವರಿಸಿದರು. ಮಹಿಳಾ ಸದಸ್ಯೆಯರಿಂದ ಭಜನೆ ಮತ್ತು ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಮಹಾಪೂಜೆ ನೆರವೇರಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

Advertisement

ಚಿತ್ರ-ವರದಿ:ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next