ಮುಂಬಯಿ: ಮೀರಾರೋಡ್ ಪೂರ್ವದ ಪಲಿ ಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ. 15 ರಂದು ನಡೆಯಿತು.
ಟ್ರಸ್ಟಿ ಹಾಗೂ ಮಠದ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ಅವರು ದಿನಪೂರ್ತಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ, ಶ್ರೀ ನಾಗ ದೇವರು ಪ್ರಕೃತಿಯ ಒಡೆಯ ಹಾಗೂ ಕೃಷಿಕರ ಆತ್ಮೀಯ ಬಂಧುವಾಗಿದ್ದಾರೆ. ನೇಗಿಲು ಹೋದಲ್ಲಿ ನಾಗ ಬೀದಿ ಇರದು. ಆದ್ದರಿಂದ ಶ್ರೀ ನಾಗದೇವರ ಬಗ್ಗೆ ಭಯ ಬೇಡ, ಭಕ್ತಿಯಿರಲಿ. ನಾಗರ ಪಂಚಮಿ ಕೂಡು ಕುಟುಂಬವನ್ನು ಬೆಸೆಯುವ ಹಬ್ಬವಾಗಿದೆ. ಉಡುಪಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಇಚ್ಛೆ ಹಾಗೂ ಆಣತಿಯಂತೆ ಮೀರಾರೋಡ್ ಪಲಿಮಾರು ಮಠದ ಶಾಖೆ ಧಾರ್ಮಿಕ ಚಿಂತನೆಯೊಂದಿಗೆ ಕರ್ನಾಟಕದ ವಿವಿಧ ಕಲಾಪ್ರಕಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದರು.
ವಿದ್ವಾನ್ ರಾಧಾಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಶುದ್ಧ ಪುಣ್ಯಾಹ ವಾಚನ, ನವಕ ಕಲಶ ಪ್ರತಿಷ್ಠಾಪನೆ, ಸಾಮೂಹಿಕ ಆಶ್ಲೇಷ ಬಲಿ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ, ಸೀಯಾಳ ಅಭಿಷೇಕ, ಶ್ರೀ ಸನ್ನಿಧಿಯ ಶ್ರೀನಿವಾಸ ದೇವರಿಗೆ ವಿಶೇಷ ಪೂಜೆ ಮತ್ತು ಶ್ರೀ ಬಾಲಾಜಿ ಸನ್ನಿಧಿಯ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಪೂಜಾ ವಿಧಿ-ವಿಧಾನದಲ್ಲಿ ಟ್ರಸ್ಟಿ ಸಚ್ಚಿದಾನಂದ ರಾವ್, ವಿಷ್ಣುಮೂರ್ತಿ ನಕ್ಷತ್ರಿ, ರಾಘವೇಂದ್ರ ನಕ್ಷತ್ರಿ, ಉದಯ ಶಂಕರ್ ಭಟ್, ಗೋಪಾಲ್ ಭಟ್, ಜಯರಾಮ್ ಭಟ್, ಯತಿರಾಜ್ ಉಪಾಧ್ಯಾಯ, ಪದ್ಮರಾಜ ಉಪಾಧ್ಯಾಯ ಅವರು ಸಹಕರಿಸಿದರು. ಪರಿಸರದ ವಿವಿಧ ಪ್ರಾಂತೀಯ, ಪಂಗಡಗಳ ಭಕ್ತಾದಿಗಳು ಉಪಸ್ಥಿತರಿದ್ದರು.
ಶ್ರೀ ನಾಗದೇವರಿಗೆ ತನು -ತಂಬಿಲದ ಮೂಲಕ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್