ಮುಂಬಯಿ: ಸಾಮಾಜಿಕ ಸಂಘಟನೆಯಲ್ಲಿ ಪಾರದರ್ಶಕತೆ ಅನಿವಾರ್ಯ ವಾಗಿದೆ. ಸದಸ್ಯರ ಅವ್ಯವಹಾರ ಕಂಡುಬಂದಲ್ಲಿ ಅದನ್ನು ಅಲ್ಲೇ ಬುದ್ಧಿವಾದದ ಮೂಲಕ ತಿದ್ದಬೇಕು. ಸಲಹೆ -ಸೂಚನೆಗಳ ಮೂಲಕ ಸರಿಪಡಿಸಬೇಕು. ಇದರಿಂದ ಅಮೂಲ್ಯ ಸಮಯವನ್ನು ಪ್ರಗತಿಪರ ಚಿಂತನೆಯತ್ತ ಹರಿಸಲು ಸಾಧ್ಯವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಮನೋಭಾವ ನಮ್ಮದಾಗಬೇಕು. ಮಹಾಸಭೆಯು ಅರೋಪ ಪ್ರತ್ಯಾರೋಪ
ಗಳ ವೇದಿಕೆಯಾಗದೆ, ಕೂಡು ಕುಟುಂಬದ ಹಬ್ಬದ ಚಾವಡಿಯಾಗಬೇಕು ಎಂದು ಮೀರಾರೋಡ್ ಕರ್ನಾಟಕ ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ ಅವರು ನುಡಿದರು.
ಮಾ. 26ರಂದು ಮೀರಾರೋಡ್ ಪೂರ್ವದ ಸೆಕ್ಟರ್ 11 ರ, ಬಿ-1 ರಲ್ಲಿರುವ ಮೀರಾರೋಡ್ ಕರ್ನಾಟಕ ಸಂಘದ ಕಚೇರಿಯಲ್ಲಿ ಸಂಘದ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಗ್ರಾಮವಾಗಿದ್ದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ, ಬೆರಳೆಣಿಕೆಯ ಸದಸ್ಯರಿದ್ದ ಸಂದರ್ಭ ಮೀರಾರೋಡ್ ಕರ್ನಾಟಕ ಸಂಘ ಹುಟ್ಟಿಕೊಂಡಿದೆ. ನಮ್ಮ ಅನೇಕ ಯೋಜನೆಗಳು ಸಂಘದ ಮುಖಾಂತರ ಕಾರ್ಯಗತಗೊಂಡಿದೆ. ಮೀರಾ-
ಭಾಯಂದರ್‌ನಲ್ಲಿ ಸುಮಾರು 55 ಸಂಘ-ಸಂಸ್ಥೆಗಳಿದ್ದರೂ ಅವುಗಳಿಗೆಲ್ಲ ಮಾತೃ ಸಂಸ್ಥೆಯ ಸ್ಥಾನದಲ್ಲಿ ಮೀರಾರೋಡ್ ಕರ್ನಾಟಕ ಸಂಘ ಇದೆ ಎಂದು ಹೇಳಲು ಅಭಿಮಾನವಾಗುತ್ತಿದೆ ಎಂದರು.
ಆಯವ್ಯಯ ಪಟ್ಟಿಯನ್ನು ಕೋಶಾಧಿಕಾರಿ ಗೋಪಾಲಕೃಷ್ಣ ಗಾಣಿಗ ವಾಚಿಸಿದರು. ಸಲಹೆಗಾರ ಭಾಸ್ಕರ ಶೆಟ್ಟಿ ಅವರು ಗತ ಸಭೆಯ ವರದಿ ಮಂಡಿಸಿದರು. ಸುಮತಿ ಆರ್. ಶೆಟ್ಟಿ ಪ್ರಾರ್ಥನೆಗೈದರು. ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ ಬಿಜೂರು ವಂದಿಸಿದರು. ಕಾರ್ಯದರ್ಶಿ ದಾಮೋದರ ಎನ್. ಶೆಟ್ಟಿ ಸ್ವಾಗತಿಸಿದರು.
ಜತೆ ಕೋಶಾಧಿಕಾರಿ ಶಾಲಿನಿ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹರೀಶ್ ಎಂ. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಶಾಲಿನಿ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ, ದಿವಾಕರ ಶೆಟ್ಟಿ, ಕೃಷ್ಣ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.