ಹೊಸದಿಲ್ಲಿ: ಲಾಭದಾಯಕ ಹುದ್ದೆ ವಿವಾದದಲ್ಲಿ ದಿಲ್ಲಿಯ 20 ಶಾಸಕರನ್ನು ಅನರ್ಹ ಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ಶನಿವಾರ ಸಂಜೆಯೇ ಅಂಕಿತ ಹಾಕಿದ್ದು, ಅಧಿಸೂಚನೆಯೂ ಹೊರಬಿದ್ದಿದೆ.
ಈ ಮಧ್ಯೆ, ಆಯೋಗದ ಶಿಫಾರಸು ಪ್ರಶ್ನಿಸಿ ಆಪ್ ಶಾಸಕರು ದಿಲ್ಲಿ ಹೈಕೋರ್ಟ್ ಮೆಟ್ಟಿ ಲೇರಿದ್ದು, ಅಲ್ಲಿ ರಿಲೀಫ್ ಸಿಕ್ಕಿದರೆ ಸದ್ಯದ ಮಟ್ಟಿಗೆ ಈ ಶಾಸಕರು ಬಚಾವ್ ಆಗಲಿದ್ದಾರೆ. ಇಲ್ಲದಿದ್ದರೆ ವಿಧಾನಸಭೆ ಸ್ಪೀಕರ್ ಅವರು ಈ ಎಲ್ಲ ಶಾಸಕರ ಸ್ಥಾನಗಳು ಖಾಲಿಯಾಗಿವೆ ಎಂದು ಅಧಿಸೂಚನೆ ನೀಡಬೇಕಾಗುತ್ತದೆ.
ಕೋವಿಂದ್ ಅವರ ಈ ನಿರ್ಧಾರವನ್ನು ಆಪ್ ನಾಯಕರು ಅಸಾಂವಿಧಾನಿಕ, ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಣ್ಣಿಸಿದ್ದಾರೆ. ನಿರ್ಧಾರಕ್ಕೂ ಮುನ್ನ ಶಾಸಕರ ಅಹವಾಲು ಕೇಳಬೇಕಿತ್ತು ಎಂದು ಅಶುತೋಷ್ ಹೇಳಿದ್ದಾರೆ.
ದಿಲ್ಲಿ ವಿಧಾನಸಭೆಯಲ್ಲಿ 20 ಶಾಸಕರು ಅನರ್ಹಗೊಂಡರೂ ಸರಕಾರಕ್ಕೆ ಆಪತ್ತೇನೂ ಇಲ್ಲ. ಸದ್ಯ 70 ಮಂದಿಯ ವಿಧಾನಸಭೆಯಲ್ಲಿ ಬಹುಮತಕ್ಕೆ 36 ಶಾಸಕರ ಬಲ ಅಗತ್ಯವಿದೆ. ಆದರೆ ಆಪ್ ಈಗ 46 ಶಾಸಕರ ಬಲ ಹೊಂದಿದ್ದು, ಸಂಖ್ಯೆಯಲ್ಲಿ ಇಳಿಮುಖವಾಗಿದೆಯಷ್ಟೇ.
ಈ ನಡುವೆ ಆಪ್ ಶಾಸಕರ ಈ ಅನರ್ಹ ನಿರ್ಧಾರದ ಬಗ್ಗೆ ಬಿಜೆಪಿ ಶಂಕೆ ವ್ಯಕ್ತಪಡಿಸಿದೆ. ರಾಜ್ಯಸಭೆ ಚುನಾವಣೆ ನಡೆದ ಮೇಲೆ ಈ ನಿರ್ಧಾರ ತೆಗೆದುಕೊಳ್ಳುವ ಔಚಿತ್ಯವೇನಿತ್ತು? ಇದಕ್ಕೂ ಮುನ್ನವೇ ಈ ತೀರ್ಮಾನಕ್ಕೆ ಬರ ಬಹುದಿತ್ತಲ್ಲವೇ ಎಂದು ಪ್ರಶ್ನಿಸಿದೆ.