Advertisement

ಅಲ್ಪಸಂಖ್ಯಾತರ ಕಾಳಜಿ ಎಚ್ ಡಿಕೆಗೆ ಫಲ ನೀಡುವುದಿಲ್ಲ: ಕೈ ನಾಯಕರು ಕಿಡಿ

02:00 PM Oct 17, 2021 | Team Udayavani |

ಹುಬ್ಬಳ್ಳಿ : ಸಿದ್ದರಾಮಯ್ಯ ಅವರಿಂದ ಅಲ್ಪಸಂಖ್ಯಾತ ನಾಯಕರಿಗೆ ಅನ್ಯಾಯವಾಗಿದೆ ಎನ್ನುವ ಆರೋಪದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಟ್ವೀಟ್ ಗೆ ಮಾಜಿ ಸಚಿವ ಯು.ಟಿ.ಖಾದರ್ ,ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್, ಮತ್ತು ಶಾಸಕ ರಿಜ್ವಾನ್ ಅರ್ಷದ್  ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಸೀರ ಅಹ್ಮದ್, ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಮೊಮ್ಮಗನನ್ನು ಸೋಲಿಸಿದ್ದು ಇದೇ ಕುಮಾರಸ್ವಾಮಿ. ಆ ಸಂದರ್ಭದಲ್ಲಿ ತಮ್ಮ ಪಕ್ಷದಿಂದ ನಿವೃತ್ತ ಪೊಲೀಸ್ ಅಧಿಕಾರಿ ಅಸಿಂ ಎಂಬುವರನ್ನು ಕಣಕ್ಕಿಳಿಸಿದರು. ನಂತರದ ಉಪ ಚುನಾವಣೆಯಲ್ಲೂ ನಾನಾ ಎನ್ನುವ ಅಲ್ಪಸಂಖ್ಯಾತ ವ್ಯಕ್ತಿಯನ್ನು ಕಣಕ್ಕಿಳಿಸಿ ಬಿಜೆಪಿಗೆ ನೆರವು ನೀಡಿ ಜಾಫರ್ ಷರೀಫ್ ಅವರ ಮೊಮ್ಮಗನನ್ನು ಸೋಲಿಸಿದರು. ಇತ್ತೀಚೆಗೆ ನಡೆದ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಅಲ್ಪಸಂಖ್ಯಾತರನ್ನು, ಇದೀಗ ಹಾನಗಲ್ಲ ಹಾಗೂ ಸಿಂಧಗಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ನಿಲ್ಲಿಸಿ ಬಿಜೆಪಿ ಗೆಲ್ಲಿಸಲು ಮುಂದಾಗಿದ್ದಾರೆ. ಉಪ ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಾಳಜಿಯಾಗಿದೆ. ಇದೇ ಕಾಳಜಿಯಿಂದ ರಾಮನಗರ, ಹಾಸನ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರನ್ನು ನಿಲ್ಲಿಸುವ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಮೈತ್ರಿ ಸರಕಾದಲ್ಲಿ ಕುಮಾರಸ್ವಾಮಿ ಅಲ್ಪಸಂಖ್ಯಾತ ಸಮುದಾಯಕ್ಕೆ ಎಷ್ಟು ಅನ್ಯಾಯ ಮಾಡಿದ್ದಾರೆ ಎಂಬುವುದು ಗೊತ್ತಿದೆ. ಅವರ ಸಚಿವ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ಕೊಡಲಿಲ್ಲ. ಸಿದ್ದರಾಮಯ್ಯ ಅವರು ನಾಲ್ವರಿಗೆ ಅವಕಾಶ ನೀಡಿದ್ದರು. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಗೆ ನೀಡುತ್ತಿದ್ದ ಅನುದಾನವನ್ನು 3200 ಕೋಟಿ ರೂ. ನಿಂದ 1800 ಕೋಟಿ ರೂ.ಗೆ ಇಳಿಸಿದರು. ‌ಇದನ್ನು ಅಲ್ಪಸಂಖ್ಯಾತ ಮುಖಂಡರು ಕೇಳಿದರೆ ಆಗಿರುವ ತಪ್ಪನ್ನು ಸರಿಪಡಿಸುವ ಭರವಸೆ ನೀಡಿ ವಂಚನೆ‌ ಮಾಡಿದರು. ಈಗ ಅಲ್ಪಸಂಖ್ಯಾತರ ಕಾಳಜಿ ವ್ಯಕ್ತಪಡಿಸುತ್ತಿರುವ ಕಾಳಜಿ ಹಾನಗಲ್ಲ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಅವರಿಗೆ ಫಲ ನೀಡುವುದಿಲ್ಲ ಎಂದರು.

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ವಿರೋಧ ಪಕ್ಷವೊಂದು ವಿರೋಧ ಪಕ್ಷವನ್ನು ಟೀಕೆ ಮಾಡುತ್ತಿರುವುದು ದೇಶದಲ್ಲಿ ಇತಿಹಾಸದಲ್ಲಿ ಕರ್ನಾಟಕದಲ್ಲಿ ಮಾತ್ರ. ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿತು. ಅಂತಹ ಕಾರ್ಯಗಳು ಇಂದಿನ ಸರಕಾರದಲ್ಲಿ ಆಗುತ್ತಿಲ್ಲ. ಇದನ್ನು ಪ್ರಶ್ನಿಸುವ, ಟೀಕಿಸುವ ಕೆಲಸ ಕುಮಾರಸ್ವಾಮಿ ಮಾಡುತ್ತಿಲ್ಲ. ಇವರು ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುವುದನ್ನು ಬಹಿರಂಗಪಡಿಸಲಿ. ಜನ ಸಾಮಾನ್ಯರಿಗೆ ನೆರವಾಗುವ ಒಂದಾದರೂ ಯೋಜನೆ ನೀಡಿದ್ದೀರಾ. ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕಲಸ ಬಿಡಬೇಕು. ಉಪ ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ನೆನಪಾಗುವ ಕಾಳಜಿ ಜನರಿಗೆ ಗೊತ್ತಾಗಿದೆ ಎಂದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಸಿದ್ಧರಾಮಯ್ಯ ಅವರ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಅಲ್ಪಸಂಖ್ಯಾತರನ್ನು ದಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ನೆನಪಾಗಲಿಲ್ಲ. ಬಿಜೆಪಿ ಜೊತೆ ಒಳ ಒಪ್ಪಂದ ಮಾಡ್ಕೊಂಡು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಸಿದ್ಧರಾಮಯ್ಯ ಮೇಲಿನ ವೈಯಕ್ತಿಕ ದ್ವೇಷಕ್ಕೆ ಅಲ್ಪಸಂಖ್ಯಾತರನ್ನು ದಾಳವಾಗಿಸಿಕೊಳ್ಳುವುದನ್ನು ಬಿಡಲಿ ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next