Advertisement

ಮಾರುಕಟ್ಟೆ ನಿರ್ದೇಶಿತ ನಗರಗಳಿಗೆ ಅಲ್ಪಾಯುಷ್ಯ?

11:17 AM Dec 23, 2017 | |

ಮಾರುಕಟ್ಟೆ ನಿರ್ದೇಶಿತ ನಗರ ಅಭಿವೃದ್ಧಿ ನಮಗೆ ತಂದುಕೊಡುವ ಲಾಭವೇ ಬೇರೆ. ವಿಚಿತ್ರವೆಂದರೆ ನಮ್ಮ ಹಲವು ನಗರಗಳು ಈ ಲಾಭದ ಆಸೆಗೆ ಬಿದ್ದು ಎದುರಿಸುತ್ತಿರುವ ಸಮಸ್ಯೆಗಳೇ ಬೇರೆ.

Advertisement

ಸಣ್ಣದೊಂದು ಹೋಟೆಲಿನಲ್ಲಿ ಒಬ್ಬ ದುಡಿಯುತ್ತಿದ್ದ. ಅವನಿಗೆ ಅದರ ಮಾಲಕ ಯಾವುದೇ ವಸ್ತುವನ್ನೂ ಹಾಳು ಮಾಡಬಾರದು ಎಂಬುದನ್ನು ಚೆನ್ನಾಗಿ ಹೇಳಿಕೊಟ್ಟಿದ್ದ. ಮಾಲಕನ ಧೋರಣೆಯೆಂದರೆ ಯಾವುದೂ ವ್ಯರ್ಥವಾಗಬಾರದೆಂಬ ಕಾಳಜಿ. ಅದನ್ನೀಗ ಇಂದಿನ ಮ್ಯಾನೇಜ್‌ಮೆಂಟ್‌ ಯುಗಕ್ಕೆ ಹೋಲಿಸುವುದಾದರೆ “ಆಪ್ಟಿಮಮ್‌ ಯೂಸೇಜ್‌’ ಎಂದು ಹೇಳಬಹುದು. ನಿರ್ದಿಷ್ಟ ವಸ್ತುವಿನ ಸದ್ಬಳಕೆ ಅಥವಾ ಸಂಪೂರ್ಣ ಬಳಕೆ ಎಂದೇ ಇಟ್ಟುಕೊಳ್ಳೋಣ. ಈ ಪಾಠವನ್ನು ಕಲಿತಿದ್ದ ಆ ನೌಕರ ಪ್ರತಿ ವಸ್ತುವಿನ ಸಂಪೂರ್ಣ ಬಳಕೆಗೆ ಪ್ರಯತ್ನಿಸುತ್ತಿದ್ದ. 

ಉದಾಹರಣೆಗೆ ಒಂದು ಲಿಂಬೆಹಣ್ಣಿನ ಜ್ಯೂಸ್‌ ಮಾಡುವುದಾದರೆ ಎರಡು ಹೋಳುಗಳನ್ನಾಗಿ ಮಾಡಿ ರಸ ಹಿಂಡಿ, ಅದರ ಭಾಗವನ್ನು ಎಸೆಯುವ ಕ್ರಮವಿದೆ. ಮತ್ತೂಂದು ಕ್ರಮವೆಂದರೆ ಲಿಂಬೆಹಣ್ಣಿನ ಸ್ವಲ್ಪ ಭಾಗವನ್ನು ಕತ್ತರಿಸಿ, ಉಳಿದದ್ದನ್ನು ಜ್ಯೂಸರ್‌ (ಕೈಯಲ್ಲಿ ಹಿಡಿದು ಒತ್ತುವ ಮಾದರಿ) ನಲ್ಲಿ ರಸ ತೆಗೆದು ಬಳಸುವುದು. ಈಗಲೂ ಇಂಥದ್ದೇ ಕ್ರಮಗಳು ಸ್ವಲ್ಪ ಸುಧಾರಿತ ಮಟ್ಟದಲ್ಲಿವೆ ಎಂದುಕೊಳ್ಳೋಣ. ಆದರೆ ಆತ ಹೊಸ ಕ್ರಮವನ್ನು ಕಂಡುಕೊಂಡಿದ್ದ. ಇಡೀ ಲಿಂಬೆಹಣ್ಣನ್ನು ಸುತ್ತಲೂ ತೆಳುವಾಗಿ ಕತ್ತರಿಸಿಕೊಳ್ಳುತ್ತಿದ್ದ. ಅದರಿಂದ ಬಹಳ ರಸವೇನೂ ವ್ಯರ್ಥವಾಗುತ್ತಿರಲಿಲ್ಲ. ಮಧ್ಯ ಸಿಗುವ ತಿರುಳಿನ ರಸ ತೆಗೆದು ಕೊಳ್ಳುತ್ತಿದ್ದ. ಹೀಗೆ ಕತ್ತರಿಸಿದ ಹೋಳುಗಳನ್ನು ಉಪ್ಪಿನಕಾಯಿಗೋ ಮತಾöವುದೋ ಉದ್ದೇಶಕ್ಕೆ ಬಳಸುತ್ತಿದ್ದ. ಇದನ್ನು ಕಂಡ ಮಾಲಕನೇ ಪರವಾಗಿಲ್ಲ ಎಂದು ಶಹಭಾಷ್‌ಗಿರಿ ಕೊಟ್ಟಿದ್ದ.

ಇಂಥ ನೌಕರ ದೊಡ್ಡ ನಗರಕ್ಕೆ ಹೋಗಿ ದೊಡ್ಡದೊಂದು ಹೋಟೆಲ್‌ಗೆ ಸೇರಿಕೊಂಡ. ಅಲ್ಲಿಯೂ ತನ್ನ ತಂತ್ರವನ್ನು ಬಳಸಲು ಆರಂಭಿಸಿದ. ಇದನ್ನು ಕಂಡ ಮ್ಯಾನೇಜರ್‌, ಏನಯ್ನಾ ಹೀಗೆಲ್ಲಾ ಕತ್ತರಿಸುತ್ತೀಯಾ? ಸುಮ್ಮನೆ ಸಮಯವೂ ವ್ಯರ್ಥ, ರಸವೂ ವ್ಯರ್ಥ. ಹೀಗೆಲ್ಲಾ ಮಾಡಬೇಡ ಎಂದು ತನ್ನ ವಿಧಾನವನ್ನು ಹೇಳಿಕೊಟ್ಟ. ಅದು ಮೇಲೆ ಹೇಳಲಾದ ಸುಲಭ ವಿಧಾನಗಳ ಪೈಕಿ ಒಂದಾಗಿತ್ತು. ಈ ಬಗ್ಗೆ ಅಲ್ಲ ಸಾರ್‌, ನನ್ನ ವಿಧಾನದಿಂದ ರಸವೂ ವ್ಯರ್ಥವಾಗದು, ಹಣ್ಣೂ ವ್ಯರ್ಥವಾಗದು. ಎರಡು ಉದ್ದೇಶಕ್ಕೆ ಬಳಸಬಹುದು. ಇದರಿಂದ ಲಿಂಬೆಹಣ್ಣು ಸಂಪೂರ್ಣ ಬಳಸಿದಂತಾಗುತ್ತದೆ ಎಂದು ವಿವರಿಸಿದರೂ ಮ್ಯಾನೇಜರ್‌ ಹೇಳಿದ್ದು ಒಂದೇ ಮಾತು, ನಮಗೆ ಒಳ್ಳೆ ರಸ ಬೇಕಷ್ಟೇ. ಉಳಿದ ಭಾಗದ ಬಗ್ಗೆ ನಿನಗೇಕೆ ಕಾಳಜಿ?

ಜಾಗತೀಕರಣದ ಈ ಸಂದರ್ಭದಲ್ಲಿ ಮಾರುಕಟ್ಟೆ ಆಧಾರಿತ ವ್ಯವಸ್ಥೆಯೂ ವ್ಯಾಪಿಸಿಕೊಳ್ಳುತ್ತಿರುವುದು ಇಂಥದ್ದೇ ಒಂದು ನೆಲೆ ಯಲ್ಲಿ. ಮಾರುಕಟ್ಟೆಯ ಬಗ್ಗೆ ಸರ್ವಥಾ ಕೇಳಿ ಬರುವ ಆಪಾದನೆ ಯೆಂದರೆ ಎಲ್ಲವನ್ನೂ ತನ್ನ ಲಾಭದ ನೆಲೆಯಲ್ಲಿ ಮಾತ್ರ ನೋಡುತ್ತದೆ. ಅದನ್ನೇ ವ್ಯಾಪಾರೀಕರಣವೆಂದು ಕರೆದದ್ದು. ಈ ಆರೋಪವೇನೂ ಸುಳ್ಳಲ್ಲ. ಮಾರುಕಟ್ಟೆಯ ಗುಣಲಕ್ಷಣವೇ ಬೇರೆ. ಒಂದು ವಸ್ತುವಿನಲ್ಲಿ ಎಷ್ಟೇ ಸಾಧ್ಯತೆಗಳಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಅಗತ್ಯಕ್ಕೆ ಮಾತ್ರ ಬಳಸಿ ಬಿಸಾಡುವ ಸ್ವಾಭಾವಿಕ ಗುಣ ಮಾರುಕಟ್ಟೆಯದ್ದು. ಇದರ ಮುಂದುವರಿದ ಆವೃತ್ತಿಯಂತೆಯೇ ತೋರುತ್ತಿರುವುದು ಇಂದಿನ ಸೂತ್ರಬದ್ಧವಲ್ಲದ ನಗರೀಕರಣ.

Advertisement

ಹೀಗೆಯೇ ನಮ್ಮ ನಗರಗಳು
ಪಶ್ಚಿಮದ ಕಥೆ ಬಿಡಿ. ಏಷ್ಯಾದ ಕಥೆಯನ್ನು ಕಂಡರೂ ಕಾಣ ಸಿಗುವುದು ಇಂತಹದ್ದೇ ಉದಾಹರಣೆಗಳು. ಪಶ್ಚಿಮದ ಹಲವು ನಗರಗಳು ಬೇಕಾಬಿಟ್ಟಿ ಬೆಳೆದವು ಎಂಬುದು ಗೊತ್ತಿದೆ. ಕೆಲವೇ ವ್ಯವಸ್ಥಿತ ನಗರಗಳ ಮಧ್ಯೆ ಸಾವಿರಾರು ಅವ್ಯವಸ್ಥಿತ ನಗರಗಳು ಇವೆ. ಆದರೆ ಏಷ್ಯಾದಲ್ಲಿ ಈ ನಗರೀಕರಣ ಅಥವಾ ನಗರಗಳಾಗುವ ಬಗೆ ಬಹಳ ಹಿಂದಿನದಲ್ಲ. ಐದಾರು ದಶಕಗಳ ಇತ್ತೀಚಿನದು. ಇದು ಚೀನಾದ ಶಾಂಘೈನಿಂದ ಹಿಡಿದು ನಮ್ಮ ಬೆಂಗಳೂರುವರೆಗೂ ಅನ್ವಯ. ಉದಾಹರಣೆಗೆ ಶಾಂಘೈ ನಗರದಲ್ಲಿ 1970ರಲ್ಲಿ ಇದ್ದ ಜನಸಂಖ್ಯೆ ಕೇವಲ 6.4 ದಶಲಕ್ಷ. ವಿಚಿತ್ರವೆನ್ನುವಂತೆ 1975 ರಲ್ಲಿ ಈ ಜನಸಂಖ್ಯೆ ಪ್ರಮಾಣದಲ್ಲಿ ಕೊಂಚ ಇಳಿಕೆಯೂ ಆಗಿತ್ತು (5.94 ದಶಲಕ್ಷ). ಇಂಥದೊಂದು ವಿದ್ಯಮಾನ ಯಾವಾಗಲೂ ಬೆಳೆಯುತ್ತಿ ರುವ ನಗರಗಳಲ್ಲಿ ಅಪರೂಪ. ಆದರೆ 1980 ರಿಂದ ಮತ್ತೆ ಬೆಳವಣಿಗೆಯ ಏರುಗತಿ ಆರಂಭವಾಯಿತು. 2015ರ ಸುಮಾರಿಗೆ ಅಲ್ಲಿನ ಜನಸಖ್ಯೆ 23 ದಶಲಕ್ಷವನ್ನು ಮುಟ್ಟಿದೆ. ಅಂದಾಜಿನ ಪ್ರಕಾರ ಇನ್ನು 15 ವರ್ಷಗಳಲ್ಲಿ ಇದು 30 ದಶಲಕ್ಷಕ್ಕೆ ತಲುಪಬಹುದು. 

1970 ರ ಶಾಂಘೈ ನಗರದ ಕುರಿತಂತೆಯೇ ಒಬ್ಬ ಯಾತ್ರಿಕ ಮತ್ತು ನಗರ ವಿನ್ಯಾಸಕನ ನೋಟವಿದು.ಆಗ ಶಾಂಘೈ, ಬೀಜಿಂಗ್‌, ನಂಜಿಂಗ್‌ ಮತ್ತಿತರ ಪ್ರಮುಖ ನಗರಗಳಲ್ಲಿ ಒಂದೇ ಸ್ಕೈ ಸಾðéಪರ್‌ಗಳಿದ್ದವಂತೆ. ಶೇ. 90 ರಷ್ಟು ಮಂದಿ ಬಳಸುತ್ತಿದ್ದುದು ಬೈಸಿಕಲ್‌ ಗಳನ್ನು. ಅಂದರೆ ಆಗಿನ ಸಾರಿಗೆಯ ವಿಧಾನವೇ ಅದಾಗಿತ್ತು. ಆದರಿಂದು ಚಿತ್ರಣವೇ ಬದಲಾಗಿದೆ. ಇವರ ಅಭಿಪ್ರಾಯ ಅಕ್ಷರಶಃ ನಿಜ. ಇಂದು ಚೀನಾದ ಶಾಂಘೈ ಅತ್ಯಂತ ಜನನಿಬಿಡ ನಗರ. ಏಷ್ಯಾದ ಮೆಗಾಸಿಟಿಯಾಗಿ ಪ್ರವರ್ಧ ಮಾನಕ್ಕೆ ಬಂದಿರುವಂಥದ್ದು. ಇದನ್ನು ಕಾಡುತ್ತಿರುವ ಎರಡು ದೊಡ್ಡ ಸಮಸ್ಯೆಗಳೆಂದರೆ ಜನಸಂಖ್ಯೆ ಮತ್ತು ವಾಯುಮಾಲಿನ್ಯ. ನಲವತ್ತು ವರ್ಷಗಳಲ್ಲಿ ನಗರ ಎಷ್ಟು ಬೆಳೆದಿದೆಯೋ, ರಾಶಿ ರಾಶಿ ಗಗನಚುಂಬಿ ಕಟ್ಟಡಗಳನ್ನು ಕಂಡಿದೆಯೋ ಅಷ್ಟೇ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಆಡಳಿತ ಹೆಣಗುತ್ತಿದೆ. ವಾಯು ಮಾಲಿನ್ಯ ದಿನೇ ದಿನೇ ನಗರದ ಬದುಕನ್ನು ಅಸಹನೀಯಗೊಳಿಸು ತ್ತಿರುವುದು ಕಟು ವಾಸ್ತವ. ಈ ಸಮಸ್ಯೆ ಬರೀ ಶಾಂಘೈನಲ್ಲಿಲ್ಲ. ಚೀನಾದಲ್ಲಿ ಕ್ಷಿಪ್ತಗತಿಯಲ್ಲಿ ಬೆಳೆಯುತ್ತಿರುವ ಬಹುತೇಕ ನಗರಗಳು ಇದೇ ಸಮಸ್ಯೆಯ ವರ್ತುಲದಲ್ಲಿ ಸಿಕ್ಕಿಬಿದ್ದಿವೆ. 

ಶಾಂಘೈನ ವಾಹನ ದಟ್ಟಣೆಯ ಸಮಸ್ಯೆ ಸುಮ್ಮನೆ ಬಿಟ್ಟಿಲ್ಲ. ನಮ್ಮ ಬೆಂಗಳೂರನ್ನು ಹೇಗೆ ಕಿತ್ತು ತಿನ್ನುತ್ತಿದೆಯೋ ಅದೇ ಮಾದರಿಯಲ್ಲಿ ಹೈರಾಣಗೊಳಿಸಿದೆ. ಸಿಂಗಾಪುರ, ಲಂಡನ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ (ಪೀಕ್‌ ಅವರ್) ನಗರದ ಪ್ರಮುಖ ಭಾಗಗಳನ್ನು ಪ್ರವೇಶಿಸಲು ಇಚ್ಛಿಸುವ ವಾಹನಗಳು ಅನಿವಾರ್ಯವಾಗಿ ಶುಲ್ಕವನ್ನು ತೆರಬೇಕು. ಇಂಥದ್ದೇ ನಿಯಮಗಳತ್ತ ಚೀನಾವೂ ಮುಖ ಮಾಡಿದೆ. ಹಲವು ನಗರಗಳಲ್ಲಿ ಅನಗತ್ಯ ವಾಹನ ದಟ್ಟಣೆ ಕಡಿಮೆ ಮಾಡಲು ಇಂಥದೊಂದು ನಿಯಮಗಳ ಮೊರೆ ಹೋಗಿದೆ. 

ನಮ್ಮ ಮುಂಬಯಿ
ಬೆಂಗಳೂರಿಗೆ ಬರುವ ಮೊದಲು ನಮ್ಮ ಮುಂಬಯಿಯನ್ನೇ ಲೆಕ್ಕ ಹಾಕೋಣ. 1970ರ ಹಿಂದಿನ ಕಥೆ ಬಹಳ ಹಳೆಯದು ಎನಿಸ ಬಹುದು. 1971ರಲ್ಲಿ ಇಡೀ ಮುಂಬಯಿಯ ಜನಸಂಖ್ಯೆ ಇದ್ದದ್ದು ಕೇವಲ 59 ಲಕ್ಷ. ಇದರ ಪ್ರಮಾಣ 1981ಕ್ಕೆ 82 ಲಕ್ಷಕ್ಕೆ ತಲುಪಿತು. 1991ರಲ್ಲಿ 1.25 ಕೋಟಿಗೆ ಏರಿತು. 2016ರಲ್ಲಿ 23 ದಶಲಕ್ಷ. 

ಅಂದರೆ 2.3 ಕೋಟಿ. ಅಲ್ಲಿರುವ ಸಮಸ್ಯೆಗಳನ್ನು ಮತ್ತೂಮ್ಮೆ ಚರ್ಚಿಸೋಣ. ಶಾಂಘೈನಲ್ಲಿರುವ ಹತ್ತಾರು ಸಮಸ್ಯೆಗಳೂ ಇಲ್ಲೂ ಇವೆ. ವಸತಿಯಿಂದ ಹಿಡಿದು ನಿರುದ್ಯೋಗದವರೆಗೆ, ಉತ್ತಮ ಕುಡಿಯುವ ನೀರಿನಿಂದ ಆರಂಭಿಸಿ ಆಹಾರದವರೆಗೂ ಸಮಸ್ಯೆಗಳಿವೆ. ಇಂಥದ್ದರ ಮಧ್ಯೆಯೂ ಉಪನಗರಗಳ ಬೆಳವಣಿಗೆ ಮೂಲ ನಗರದ ಒತ್ತಡವನ್ನು ಕೊಂಚ ಕಡಿಮೆ ಮಾಡಿರುವುದು ಸುಳ್ಳಲ್ಲ.ಜನಸಂಖ್ಯೆ ಹೆಚ್ಚಿದಂತೆ ನಗರ ತನ್ನನ್ನು ತಾನೇ ವಿಸ್ತರಿಸಿಕೊಂಡು ಹೋಗುವ ವಿಸ್ಮಯ ಮುಂಬಯಿಯಲ್ಲಿ ನಡೆಯುತ್ತಿದೆ. 

ಮಾರುಕಟ್ಟೆ ನಿರ್ದೇಶಿತ
ಇದನ್ನೇ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಎಂದೆನಿಸುವುದು. ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಒಂದು ನಗರದ ಅಭಿವೃದ್ಧಿಯನ್ನು ನಿರ್ದೇಶಿಸುತ್ತಾ ಹೋಗುತ್ತದೆ. ತೃತೀಯ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಗುತ್ತಿರುವುದು ಇದೇ. ರಿಯಲ್‌ ಎಸ್ಟೇಟ್‌ ಕ್ಷೇತ್ರ ಒಂದಿಷ್ಟು ಸೌಂದರ್ಯ ಪ್ರಜ್ಞೆ ಮತ್ತು ವ್ಯವಸ್ಥಿತ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದ್ದರೆ ಅದು ನಗರಕ್ಕೆ ವರವಾಗಿ ಪರಿಣಮಿಸುತ್ತದೆ. ಇಲ್ಲದಿದ್ದರೆ ಅಡ್ಡಾದಿಡ್ಡಿ ಬೆಳವಣಿಗೆಗೆ ಕಾರಣವಾಗುತ್ತದೆ. ಸ್ಥಳೀಯ ಆಡಳಿತಗಳೂ ಇಂಥ ಸಂದರ್ಭದಲ್ಲಿ ಬಹಳ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂಕ ಪ್ರೇಕ್ಷಕರಂತಾಗುತ್ತವೆ. ಇದರಿಂದ ಆಗುವ ಅತಿದೊಡ್ಡ ತೊಂದರೆ ಯೆಂದರೆ ಸ್ವರ್ಗವೆಂದು ತೋರುತ್ತಿದ್ದ ನಗರಗಳು ನರಕಗಳಾಗಿ ಪರಿಣ ಮಿಸ ತೊಡಗುತ್ತವೆ. ಕ್ರಮೇಣ ನಗರಗಳು ಉಸಿರುಗಟ್ಟತೊಡಗುತ್ತವೆ. ನಾಗರಿಕರು ಅಲ್ಲಿಂದ ತಪ್ಪಿಸಿಕೊಂಡರೆ ಸಾಕೆಂದು ಯೋಚಿಸತೊಡ ಗುತ್ತಾರೆ. ಅಂತಿಮವಾಗಿ ನಗರಗಳು ಸಾಯುತ್ತವೆ !

ಇಂಥ ಸ್ಥಿತಿಯಲ್ಲಿ ಇಂದು ನಮ್ಮ ಹಲವು ನಗರಗಳು ಇರುವುದು ನಿಜ. ಈಗಲಾದರೂ ಆದರ್ಶ ನಗರದ ಕಲ್ಪನೆಯತ್ತ ಯೋಚಿಸಬೇಕು. ಆಗ ಒಂದಿಷ್ಟು ನಗರಗಳನ್ನಾದರೂ ಉಳಿಸಿಕೊಳ್ಳಬಹುದು. ಹಾಗಾಗಿಯೇ ಕೇವಲ ಮಾರುಕಟ್ಟೆ ನಿರ್ದೇಶಿತ ನಗರಗಳಿಗೆ ಅಲ್ಪಾಯಷ್ಯ ಎನ್ನಬಹುದೇನೋ.

Advertisement

Udayavani is now on Telegram. Click here to join our channel and stay updated with the latest news.

Next