ಸುವರ್ಣ ವಿಧಾನಸೌಧ: “ಪ್ರಭಾವಿ ಸಚಿವರೊಬ್ಬರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ’ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, ನಮ್ಮಲ್ಲಿ ಯಾರೂ ಶಿಂಧೆ, ಪವಾರ್ ಇಲ್ಲ. ಈ ರೀತಿ ಸುಳ್ಳು ಪ್ರಚಾರ ಮಾಡುವ ಮೂಲಕ ಸರ್ಕಾರದ ಇಮೇಜ್‌ಗೆ ಧಕ್ಕೆ ತರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಾನೇನೂ ದೆಹಲಿಗೆ ಹೋಗಿಲ್ವಲ್ಲ. ದೆಹಲಿಗೆ ಹೋದವರನ್ನು ಕೇಳಬೇಕು. ಕುಮಾರಸ್ವಾಮಿ ಅವರು ಆ ಪ್ರಭಾವಿ ಸಚಿವರು ಯಾರು ಅಂತ ಹೇಳಿದ್ದರೆ, ಮುಗಿದು ಹೋಗುತ್ತಿತ್ತು. ಈ ಗೊಂದಲಕ್ಕೆ ಅವಕಾಶ ಇರುತ್ತಿರಲಿಲ್ಲ ಎಂದು ಹೇಳಿದರು.
ಸೋಮವಾರ ಸದನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾರೂ ಶಿಂಧೆ, ಪವಾರ್ ಇಲ್ಲ. ಹಾಗಾಗಿ, ಇದೆಲ್ಲಾ ಊಹಾಪೋಹ. ಒಂದು ವೇಳೆ ನಿಜವಾಗಿದ್ದರೆ, ಆ ಪ್ರಭಾವಿ ಸಚಿವರು ಯಾರು ಎಂದು ಹೇಳಿದ್ದರೂ ಸಾಕಿತ್ತು ಎಂದು ತಿಳಿಸಿದರು.
ಪ್ರಯತ್ನ ನಡೆಯುತ್ತಲೇ ಇದೆ: ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಪದೇ ಪದೆ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಆ ರೀತಿಯ ಅಭಿಪ್ರಾಯ ಇರುವುದನ್ನು ಸರಿಪಡಿಸಿಕೊಂಡು ಹೋಗುವ ಕೆಲಸ ಆಗುತ್ತಿದೆ. ಹಿಂದೆ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಲವು ಶಾಸಕರು ಸೋತು ಮನೆ ಸೇರಿದ್ದಾರೆ. ಸುಳ್ಳು ಪ್ರಚಾರ ಮಾಡುವ ಮೂಲಕ ಸರ್ಕಾರದ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ಸರಿಯಲ್ಲ ಎಂದು ಹೇಳಿದರು.
ಅಧಿಕಾರ ಇಲ್ಲದೆ ಇರೋಕ್ಕಾಗಲ್ಲ: ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜೆಡಿಎಸ್ ಅನ್ನು ಜನ ಹೀನಾಯವಾಗಿ ಸೋಲಿಸಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದು ಗೌರವಯುತವಾಗಿ ಜನರ ಕೆಲಸ ಮಾಡಬೇಕು. ಅಧಿಕಾರ ಇಲ್ಲದೆ ಇರಲಾಗಲ್ಲ ಎಂದು ಈ ರೀತಿ ವರ್ತಿಸುವುದು ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಪತನ ಮಾಡಬೇಕು ಎಂಬುದೇ ಅವರ ರಾಜಕಾರಣವಾದರೆ ಏನು ಹೇಳಬೇಕು? ಕಳೆದ ಚುನಾವಣೆಯಲ್ಲಿ ಏನಾಯ್ತು ಎಂದು ತಿಳಿದುಕೊಂಡು ಹೆಜ್ಜೆ ಇಡಲಿ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಯಾವುದೇ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ. ಅದಕ್ಕೆ ಕಾದು, ಸರ್ಕಾರ ಬೀಳಿಸುವುದು ಒಂದೇ ಉದ್ದೇಶವೇ? ರಾಜಕಾರಣ ಅಷ್ಟೇನಾ ಎಂದು ಕೇಳಿದರು.
ಲೋಕಸಭೆ ಮುನ್ನ ಜೆಡಿಎಸ್ 5ಕ್ಕೆ ಇಳಿಕೆ: ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಲೋಕಸಭೆ ಚುನಾವಣೆ ಮುಂಚೆ ಜೆಡಿಎಸ್ ಅಸ್ತಿತ್ವ ಏನಾಗುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸಿದ್ರೆ ಒಳ್ಳೆಯದು ಎಂದು ತೀಕ್ಷ್ಣವಾಗಿ ಹೇಳಿದರು. 50-60 ಜನ ಇದ್ದರೆ, ಅವರೇ ಸಿಎಂ ಆಗುತ್ತಾರಲ್ಲಾ? ಒಡೆಯೋದು ಏನಿಲ್ಲ. ಸುಮ್ಮನೆ ಸುದ್ದಿಯಲ್ಲಿ ಇರುವುದಕ್ಕಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಲೋಕಸಭಾ ಚುನಾವಣೆ ಮೊದಲೇ ಜೆಡಿಎಸ್‌ನಲ್ಲಿ ಐವರು ಶಾಸಕರು ಉಳಿಯುತ್ತಾರೆ ಎಂದು ತಿಳಿಸಿದರು.