Advertisement

ಆಡಳಿತದ ವೇಗಕ್ಕೆ ಬೊಮ್ಮಾಯಿ ಸಂಪುಟದ ಸಚಿವರು ಕೈಜೋಡಿಸುತ್ತಿಲ್ಲ: ಎಚ್.ವಿಶ್ವನಾಥ್

12:18 PM Jul 08, 2022 | Team Udayavani |

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಡಳಿತಕ್ಕೆ ವೇಗ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಂಪುಟ ಸಹೋದ್ಯೋಗಿಗಳು ಇದಕ್ಕೆ ಕೈ ಜೋಡಿಸುತ್ತಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಆಗುವುದು ಅನುಮಾನ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

Advertisement

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಯಡಿಯೂರಪ್ಪ ಸುಮ್ಮನಿರುತ್ತಾರಾ. ಹಾಗಾಗಿ ನೇರವಾಗಿ ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದರು.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಿ.ವೈ.ವಿಜಯೇಂದ್ರ ಹೆಸರು ತಳುಕು ಹಾಕಿಕೊಂಡಿರುವ ಕುರಿತು ಮಾತನಾಡಿ, ಯಾವುದೇ ರಾಜಕಾರಣಿ ಎಷ್ಟೇ ದೊಡ್ಡವರಿರಲಿ, ವಿಜಯೇಂದ್ರರೇ ಇರಲಿ, ಅಶ್ವಥ್ ನಾರಾಯಣ್ ಇರಲಿ ಅವರು ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ಶಿಂಜೋ ಅಬೆ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ: ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ

ಸಿದ್ದರಾಮಯ್ಯ ಬಳ್ಳಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಆಗಲು ಲೋಕಾಯುಕ್ತದ ಪಾತ್ರ ಪ್ರಮುಖವಾದುದು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಲೋಕಾಯುಕ್ತಕ್ಕೆ ಬಾಗಿಲು ಹಾಕಿದರು. ಲೋಕಾಯುಕ್ತಕ್ಕೆ ಮೂಲ ಸ್ವರೂಪ ‌ನೀಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ್ಯಾರು ಮುಂದಾಗುತ್ತಿಲ್ಲ. ಯಾಕೆಂದರೆ ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ. ಹಾಗಾಗಿ ಇಡೀ ವ್ಯವಸ್ಥೆಯನ್ನು ಅಧಿಕಾರಶಾಹಿ ಮತ್ತು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬಬೇಕು. ಲೋಕಾಯುಕ್ತವನ್ನು ಸರ್ಕಾರ ಮೂಲ ಸ್ವರೂಪಕ್ಕೆ ತರಬೇಕು ಎಂದರು.

Advertisement

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಬೀಸಿದ ಚಾಟಿಯಿಂದಾಗಿ ಓರ್ವ ಜಿಲ್ಲಾಧಿಕಾರಿ, ಓರ್ವ ಐಪಿಎಸ್ ಅಧಿಕಾರಿಯೇ ಜೈಲು ಸೇರಿದ್ದಾರೆ. ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆಂದು ನಾಡಿನ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹೇಳಿರುವುದು ಜನ ಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹುಟ್ಟಿಸಿದೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ‌. ಶಾಸಕಾಂಗ, ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ತನ್ನ ಮಹತ್ವದ ಕಾರ್ಯ ಮಾಡಿ ತೋರಿಸಿದೆ. ಭ್ರಷ್ಟಾಚಾರ ನಿಗ್ರಹ ದಳ, ಸಿಒಡಿಗೆ ಮುಕ್ತ ಅವಕಾಶ ನೀಡಿದ್ದರಿಂದ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. 1984ರಲ್ಲಿ ಲೋಕಪಾಲ್ ಕೇಂದ್ರಕ್ಕೆ ಬೇಕು, ಲೋಕಾಯುಕ್ತ ರಾಜ್ಯಕ್ಕೆ ಬೇಕು ಎಂದು ಮೊರಾರ್ಜಿಬಾಯ್ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ಪರಿಣಾಮ ನಮ್ಮ ರಾಜ್ಯದಲ್ಲೂ ಬಲಿಷ್ಠ ಲೋಕಾಯುಕ್ತವಿತ್ತು. ದುರದೃಷ್ಟವಶಾತ್ ಮುಚ್ಚಿಹೋಗಿದ್ದ ಲೋಕಾಯುಕ್ತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಜೀವ ನೀಡಿದ್ದಾರೆ. ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಲೋಕಾಯುಕ್ತರಿಗೆ ಪರಮಾಧಿಕಾರ ಕೊಡಬೇಕು ಎಂದರು.

ಸಿದ್ದರಾಮೋತ್ಸವದ ಕುರಿತು ಮಾತನಾಡಿ, ಇದು ಕಾರ್ಯಕರ್ತರ ಉತ್ಸವವಾಗಬೇಕು. ವ್ಯಕ್ತಿ ಪೂಜೆಯ ಉತ್ಸವವಾಗಬಾರದು. ಯಾವುದೇ ಉತ್ಸವವಾದರೂ‌ ಪಕ್ಷದ ಚೌಕಟ್ಟಿನೊಳಗೇ ಆಗಬೇಕು. ಪಕ್ಷದ ಉತ್ಸವವಾಗಬೇಕು, ಅದು ಕಾರ್ಯಕರ್ತರಿಗೆ ಇಷ್ಟವಾಗುವಂತಿರಬೇಕು. ನಾನು ಸಹ ಬಹಳಷ್ಟು ಕಾಲ ಕಾಂಗ್ರೆಸ್ ನಲ್ಲಿದ್ದೆ. ಇಷ್ಟು ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಈ ತರದ ವ್ಯಕ್ತಿ ಉತ್ಸವ ನೋಡಿಲ್ಲ. ಇದನ್ನೇ ಡಿ.ಕೆ ಶಿವಕುಮಾರ್ ಹೇಳಿದರೂ, ಆ ನಂತರ ಏಕೆ ಸುಮ್ಮನಾದರೋ‌ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next