ಬೆಂಗಳೂರು: ಶಾಲಾ ಶಿಕ್ಷಕರ ಹೆಚ್ಚುವರಿ ಹಾಗೂ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಕೂಡಲೇ ತಡೆ ಹಿಡಿಯುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಸದ್ಯ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ತುಂಬಾ ಅನಾನುಕೂಲ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಹೀಗಾಗಿ ಕೂಡಲೇ ತಡೆ ಹಿಡಿಯುವುದು, ಪ್ರಕ್ರಿಯೆ ನಡೆಸುವ ಮೊದಲು ಕೋರಿಕೆ ವರ್ಗಾವಣೆ ನಡೆಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವಂತೆ ಪ್ರಧಾನ ಕಾರ್ಯದರ್ಶಿಗೆ ಸಚಿವರು ನಿರ್ದೇಶಿಸಿದ್ದಾರೆ.
ಶಿಕ್ಷಕರ ವರ್ಗಾವಣೆಗೆ ಒಂದಲ್ಲೊಂದು ಕಂಟಕ ಎದುರಾಗುತ್ತಲೆ ಇದೆ. ಶೈಕ್ಷಣಿಕ ವರ್ಷ ಆರಂಭಕ್ಕೂ ಪೂರ್ವದಲ್ಲೇ ನಡೆಯಬೇಕಿದ್ದ ವರ್ಗಾವಣೆ ಪ್ರಕ್ರಿಯೆ ಚುನಾವಣಾ ನೀತಿ ಸಂಹಿತೆಯಿಂದ ಮುಂದೂಡಲಾಗಿತ್ತು. ಕಡ್ಡಾಯ ವರ್ಗಾವಣೆ ಪ್ರಶ್ನಿಸಿ ಕೆಲವು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದಲೂ ಸ್ವಲ್ಪ ವಿಳಂಬವಾಗಿತ್ತು. ಎಲ್ಲ ವಿಘ್ನ ಪರಿಹಾರವಾಗಿ, ಪರಿಷ್ಕೃತ ವೇಳಾಪಟ್ಟಿಯಂತೆ ವರ್ಗಾವಣೆ ನಡೆಯಬೇಕು ಎನ್ನುವಷ್ಟರಲ್ಲಿ ಸಚಿವರೇ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡುವಂತೆ ಸೂಚಿಸಿರುವುದು ಶಿಕ್ಷಕರಲ್ಲಿ ಆತಂಕ ಮನೆಮಾಡಿದೆ.
2017-18ನೇ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಕಳೆದ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಮಾರ್ಗಸೂಚಿ ಸಿದ್ಧಪಡಿಸಲಾಗಿತ್ತು. ತಂತ್ರಾಂಶ ದೋಷ, ಶಿಕ್ಷಕರ ಮಾಹಿತಿ ಸಂಗ್ರಹಣೆ ಪೂರ್ಣಗೊಳ್ಳುವ ಹೊತ್ತಿಗೆ ಶೈಕ್ಷಣಿಕ ವರ್ಷವೇ ಮುಗಿದಿತ್ತು. ವರ್ಗಾವಣೆ ಸಂಬಂಧಿಸಿದಂತೆ ಅರ್ಜಿ ಸ್ವೀಕಾರ ಪೂರ್ಣಗೊಂಡಿದೆ. ಸುಮಾರು 72 ಸಾವಿರಕ್ಕೂ ಅಧಿಕ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಅರ್ಹ ಶಿಕ್ಷಕರ ದಾಖಲೆ ಪರಿಶೀಲನೆಯೂ ಪೂರ್ಣಗೊಂಡಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ಹತ್ತಿರವಾಗುತ್ತಿದ್ದಂತೆ ತಡೆಹಿಡಿಯಲು ನಿರ್ದೇಶಿಸಿರುವುದಕ್ಕೆ ಕೆಲವು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.