Advertisement

ಸಚಿವರ ತಲೆದಂಡ: ಚುನಾವಣೆ ಸ್ವತ್ಛಗೊಳಿಸುವ ಶ್ಲಾಘನೀಯ ಕ್ರಮ

03:45 AM Jun 26, 2017 | Team Udayavani |

ಪೇಯ್ಡ ನ್ಯೂಸ್‌ ಹಾಕಿಸಿದವನಷ್ಟೇ ಅದನ್ನು ಪ್ರಕಟಿಸಿದ ಮಾಧ್ಯಮಗಳೂ ಅಕ್ರಮಗಳಿಗೆ ಹೊಣೆ ಆಗಬೇಕಲ್ಲವೆ? ಹಣಕ್ಕಾಗಿ ಸುದ್ದಿ ಪ್ರಕಟಿಸುವುದು ಮಾಧ್ಯಮದ ನೈತಿಕತೆಯ ಅಧಃಪತನದ ಪರಮಾವಧಿ.

Advertisement

ಚುನಾವಣಾ ಆಯೋಗ ಶನಿವಾರ ನೀಡಿರುವ ಎರಡು ತೀರ್ಪುಗಳು ರಾಜಕೀಯ ವಲಯದಲ್ಲಿ ಸಂಚಲನ ವುಂಟುಮಾಡಿವೆ. ಮೊದಲ ತೀರ್ಪಿನಿಂದಾಗಿ ಮಧ್ಯ ಪ್ರದೇಶದ ಶಿವರಾಜ್‌ಸಿಂಗ್‌ ಚೌಹಾಣ್‌ ಸಂಪುಟದ ಹಿರಿಯ ಸಚಿವ ನರೋತ್ತಮ್‌ ಮಿಶ್ರ ಒಂಬತ್ತು ವರ್ಷದ ಹಿಂದೆ ಮಾಡಿದ ತಪ್ಪಿನಿಂದಾಗಿ ಈಗ ಹುದ್ದೆ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮಾಡಿದ ಖರ್ಚುವೆಚ್ಚಗಳ ಕುರಿತು ತಪ್ಪುಲೆಕ್ಕ ನೀಡಿದ ಆರೋಪದಲ್ಲಿ ಚುನಾವಣಾ ಆಯೋಗ ಮಿಶ್ರಾ ಶಾಸಕತ್ವ ಅಸಿಂಧುಗೊಳಿಸಿರುವುದು ಮಾತ್ರವಲ್ಲದೆ 3 ವರ್ಷ ತನಕ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಿದೆ.

ಮಧ್ಯಪ್ರದೇಶದ ಸರಕಾರದಲ್ಲಿ ಜಲಸಂಪನ್ಮೂಲ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ ಮಿಶ್ರ. ಸರಕಾರ ಮತ್ತು ಪಕ್ಷದಲ್ಲಿ ಚೌಹಾಣ್‌ ಅನಂತರದ ನಂಬರ್‌ 2 ಸ್ಥಾನದಲ್ಲಿರುವವರು. ಮುಂದಿನ ವರ್ಷವೇ ಮಧ್ಯ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ರೀತಿಯ ಹಿನ್ನಡೆಯಾಗಿರುವುದು ಪಕ್ಷಕ್ಕೆ ಮುಜುಗರವುಂಟು ಮಾಡಿರುವುದರಲ್ಲಿ ಸಂಶಯವಿಲ್ಲ. ಇನ್ನೊಂದು ತೀರ್ಪು ಆಮ್‌ ಆದ್ಮಿ ಪಕ್ಷದ 21 ಶಾಸಕರ ವಿರುದ್ಧ ನಡೆಯುತ್ತಿರುವ ಲಾಭದಾಯಕ ಹುದ್ದೆಗೆ ಸಂಬಂಧಿಸಿದ್ದು. ಲಾಭದಾಯಕ ಹುದ್ದೆಯ ಆರೋಪ ಕೇಳಿ ಬಂದ ಬಳಿಕ ಒತ್ತಡಕ್ಕೆ ಮಣಿದು ಈ 21 ಶಾಸಕರು ಹುದ್ದೆಯನ್ನು ತ್ಯಜಿಸಿದ್ದರೂ ಅವರು ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ಕೈಬಿಡುವುದಿಲ್ಲ ಎಂದು ಚುನಾವಣಾ  ಆಯೋಗ ಸ್ಪಷ್ಟಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತರಾಗಿರುವ ನದೀಂ ಜೈದಿ ಮುಂದಿನ ತಿಂಗಳು ನಿವೃತ್ತರಾಗಲಿದ್ದಾರೆ. ಅದಕ್ಕೂ ಮುಂಚಿತವಾಗಿ ಅವರು ಕೈಗೊಂಡಿರುವ ಈ ಎರಡು ನಿರ್ಧಾರಗಳು ದೇಶದ ಚುನಾವಣಾ ಪ್ರಕ್ರಿಯೆಯನ್ನು ಸ್ವತ್ಛಗೊಳಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕ್ರಮ ಎನ್ನಲಡ್ಡಿಯಿಲ್ಲ.   

2008ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ಹಣ ಪಾವತಿಸಿ ತನ್ನ ಪರವಾಗಿರುವ ಸುದ್ದಿಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ರಾಜೇಂದ್ರ ಭಾರತಿ ದೂರು ನೀಡಿದ್ದರು. ಅಭ್ಯರ್ಥಿಗಳ ಚುನಾವಣಾ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಭ್ಯರ್ಥಿಯ ಪರವಾಗಿ ಮಾಧ್ಯಮಗಳಲ್ಲಿ ಬರುವ ಜಾಹೀರಾತು ಕೂಡ ಚುನಾವಣಾ ವೆಚ್ಚದ ಲೆಕ್ಕಕ್ಕೆ ಸೇರುತ್ತದೆ. ಈ ನಿಯಮ ಜಾರಿಗೆ ಬಂದ ಬಳಿಕ ಆಯೋಗದ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಪ್ರಾರಂಭವಾದದ್ದೇ ಹಣಕೊಟ್ಟು ಸುದ್ದಿ ಹಾಕಿಸುವ ಅಡ್ಡದಾರಿ.

ಹಣ ಕೊಟ್ಟು ಜಾಹೀರಾತು ಹಾಕಿದರೆ ಜನರು ಅಷ್ಟು ಸುಲಭವಾಗಿ ನಂಬುವುದಿಲ್ಲ. ಆದರೆ ಸುದ್ದಿಯನ್ನು ಬಹಳ ಬೇಗ ನಂಬಿಬಿಡುತ್ತಾರೆ. ಹೀಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಪೇಯ್ಡ ನ್ಯೂಸ್‌ ಹಾವಳಿ ವಿಪರೀತವಾಗಿದೆ. ಇದಕ್ಕೆ ಆ ಪಕ್ಷ  ಈ ಪಕ್ಷ ಎಂಬ ಬೇಧಭಾವವಿಲ್ಲ.ಮಾಧ್ಯಮ ಸಂಸ್ಥೆಗಳು ಕೂಡ ಚುನಾವಣೆ ಕಾಲಕ್ಕಾಗುವಾಗ ಪೇಯ್ಡ ನ್ಯೂಸ್‌ ಹಾಕಲು ವಿವಿಧ ಪ್ಯಾಕೇಜ್‌ಗಳನ್ನು ಸಿದ್ಧಮಾಡಿಟ್ಟುಕೊಂಡಿರುತ್ತವೆ.  ಸಣ್ಣ ಪುಟ್ಟ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಮಾತ್ರವಲ್ಲದೆ ಕಾರ್ಪೋರೇಟ್‌ ಕಂಪೆನಿಗಳು ಮತ್ತು ದೊಡ್ಡ ಕುಳಗಳ ಹಿಡಿತದಲ್ಲಿರುವ ಮಾಧ್ಯಮ ಸಂಸ್ಥೆಗಳು ಕೂಡ ಸುದ್ದಿಯ ಸೋಗಿನ ಈ ಮಾದರಿಯ ಜಾಹೀರಾತುಗಳನ್ನು ಎಗ್ಗಿಲ್ಲದೆ ಪ್ರಕಟಿಸಿ ದುಡ್ಡು ಮಾಡಿಕೊಳ್ಳುತ್ತಿವೆ. 
 
ಚುನಾವಣಾ ಆಯೋಗ ತೀರ್ಪು ನೀಡಿದ ಕೂಡಲೇ ಮಿಶ್ರ ಸಚಿವ ಪದವಿ ಕಳೆದುಕೊಳ್ಳುತ್ತಾರೆ ಎನ್ನುವಂತಿಲ್ಲ. ತೀರ್ಪನ್ನು ಮೇಲಿನ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಆಯ್ಕೆಗಳು ಅವರ ಮುಂದಿವೆ. ಅಲ್ಲದೆ ಇದು 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಾಗಿರುವ ಅಕ್ರಮಕ್ಕೆ ಸಂಬಂಧಿಸಿರುವ ತೀರ್ಪು. 2008ರಲ್ಲಿ ಮಾಡಿದ ಅಕ್ರಮಕ್ಕೆ 2013ರ ಗೆಲುವನ್ನು ರದ್ದುಪಡಿಸಬಹುದೇ ಎಂಬ ಕಾನೂನು ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.  ಪೇಯ್‌ನ್ಯೂಸ್‌ ಹಾಕಿಸಿದವನಷ್ಟೇ ಪೇಯ್‌ನ್ಯೂಸ್‌ ಪ್ರಕಟಿಸಿದ ಮಾಧ್ಯಮಗಳೂ ಈ ಅಕ್ರಮಗಳಿಗೆ ಹೊಣೆಯಾಗಬೇಕಲ್ಲವೆ? ಹಣಕ್ಕಾಗಿ ಸುದ್ದಿ ಪ್ರಕಟಿಸುವುದು ಮಾಧ್ಯಮದ ನೈತಿಕತೆಯ ಅಧಃಪತನದ ಪರಮಾವಧಿ. ಪ್ರಸ್ತುತ ಪ್ರಕರಣದಲ್ಲಿ ಚುನಾವಣಾ ಆಯೋಗ ಪೇಯ್‌ನ್ಯೂಸ್‌ ಹಾಕಿಸಿ ಅದರ ಲೆಕ್ಕ ಕೊಡದ ತಪ್ಪಿಗೆ ಶಿಕ್ಷೆ ಕೊಟ್ಟಿದೆಯೇ ಹೊರತು ಆ ಸುದ್ದಿಗಳನ್ನು ಪ್ರಕಟಿಸಿ ಪತ್ರಿಕೋದ್ಯಮದ ನೀತಿಯನ್ನೇ ದುಡ್ಡಿಗಾಗಿ ಬಲಿಕೊಟ್ಟಿರುವ ಮಾಧ್ಯಮಗಳ ವಿರುದ್ಧ ಯಾವ ಕ್ರಮವನ್ನು ಕೈಗೊಂಡಿಲ್ಲ. ಪೇಯ್‌ನ್ಯೂಸ್‌ ಪ್ರಕಟಿಸಿದವರ ವಿರುದ್ಧವೂ ಇದೇ ಮಾದರಿಯ ಕಠಿಣ  ಕ್ರಮ ಕೈಗೊಂಡಾಗ ಮಾತ್ರ ವ್ಯವಸ್ಥೆ ಸ್ವತ್ಛವಾದೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next