Advertisement

ಮೇಲ್ಸೇತುವೆ ನಿರ್ಮಾಣ ಇಚ್ಛೆಯೇ ಸಚಿವರಿಗಿಲ್ಲ

01:13 PM Mar 03, 2017 | |

ದಾವಣಗೆರೆ: ಅಶೋಕ ಚಿತ್ರಮಂದಿರ ಬಳಿಯ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಂದ ಆ ಸೇತುವೆ ನಿರ್ಮಾಣ ಸಾಧ್ಯ ಆಗುತ್ತಿಲ್ಲ ಎಂಬ ತಪ್ಪು ಸಂದೇಶ ಸಾರಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ ರಾವ್‌ ಜಾಧವ್‌ ಆರೋಪಿಸಿದ್ದಾರೆ. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಅಲ್ಲಿ ಮೇಲ್ಸೇತುವೆ ನಿರ್ಮಿಸುವ ಇಚ್ಛೆ ಇಲ್ಲ. 2014-15ನೇ ಸಾಲಿನಲ್ಲಿಯೇ ಸಂಸದ ಜಿ.ಎಂ. ಸಿದ್ದೇಶ್ವರ್‌ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದಾರೆ.

ಆದರೆ, ಜಿಲ್ಲಾಧಿಕಾರಿಗಳು ಕಾಮಗಾರಿ ಆರಂಭಕ್ಕೆ ಮುಂದಾಗುತ್ತಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್‌.ಟಿ. ಅಂಜನ್‌ಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರು ಸಿಗುತ್ತಿಲ್ಲ ಎಂಬ ನೆಪ ಒಡ್ಡಿ ಕಾಮಗಾರಿ ನಡೆಯಲು ಅವಕಾಶ ಕೊಡಲಿಲ್ಲ. ಈಗಿನ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸಹ ಇದೇ ಹಾದಿ ಹಿಡಿದಿದ್ದಾರೆ.

ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ ದೂರಿದರು. ಸಂಸದ ಸಿದ್ದೇಶ್ವರ್‌ ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಿ ಎಂಬುದಾಗಿ ಸೂಚಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ರಮೇಶ್‌ ಯಾವುದೇ ಪತ್ರಕ್ಕೆ ಉತ್ತರ ನೀಡಿಲ್ಲ. ಕಾಮಗಾರಿ ಆರಂಭಕ್ಕೂ ಯಾವುದೇ ಕ್ರಮ ವಹಿಸಲಿಲ್ಲ.

ಕೊನೆಗೆ ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್‌.ವಿ. ದೇಶಪಾಂಡೆಯವರಿಗೂ ಪತ್ರ ಬರೆದರು. ಸರ್ಕಾರದ ಅಧೀನ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು. 

Advertisement

ಇಷ್ಟಾದರೂ ಸಹ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಜೆಡಿಎಸ್‌ ಕಾರ್ಯಕರ್ತರು ರೈಲ್ವೆ ಗೇಟ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ, ಹೋರಾಟ ಕೈಗೊಂಡಾಗ ಸ್ಥಳಕ್ಕೆ ಭೇಟಿಕೊಟ್ಟ ಸಚಿವ ಮಲ್ಲಿಕಾರ್ಜುನ್‌, ನನ್ನ ಜಾಗ ಹೋದರೂ ಸರಿ ನಾನು ಸೇತುವೆ ನಿರ್ಮಾಣ ಮಾಡಲು ಸಿದ್ಧ.

ಆದರೆ, ರೈಲ್ವೆ ಅಧಿಕಾರಿಗಳು ಸರಿಯಾದ ನೀಲ ನಕಾಶೆ ಕೊಡುತ್ತಿಲ್ಲ ಎಂದು ಸಬೂಬು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಒಂದು ವೇಳೆ ಸಮಸ್ಯೆ ಪರಿಹಾರ ಆಗಬೇಕು ಎಂಬ ಇಚ್ಛೆ ಇದ್ದರೆ ತಮ್ಮಲ್ಲಿಯೇ ಇರುವ ಇಂಜಿನಿಯರ್‌ಗಳನ್ನು ಬಳಸಿಕೊಂಡು ಸೇತುವೆ ನೀಲ ನಕಾಶೆ ತಯಾರಿಸಬಹುದಿತ್ತು. ಆದರೆ, ಸಚಿವರಿಗೆ ಸಮಸ್ಯೆ ಬಗೆಹರಿಯುವುದು ಬೇಕಿಲ್ಲ. 

ಸಂಸದರಿಂದಾಗಿ ಈ ಸಮಸ್ಯೆ ಪರಿಹಾರ ಆಗುತ್ತಿಲ್ಲ  ಎಂಬ ಭಾವನೆ ಜನರಲ್ಲಿ ಮೂಡಬೇಕು ಎಂಬ ಉದ್ದೇಶ ಇದೆ ಎಂದು ಅವರು ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಮುಖಂಡರಾದ ಪಿಸಾಳೆ ಕೃಷ್ಣ, ರಾಜನಹಳ್ಳಿ ಶಿವಕುಮಾರ್‌, ಕೆ. ಹೇಮಂತ ಕುಮಾರ್‌, ಗುಡ್ಡೇಶ್‌, ಪಿ.ಸಿ. ಶ್ರೀನಿವಾಸ್‌, ಶಿವನಗೌಡ ಪಾಟೀಲ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next