ಉಡುಪಿ: ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವುದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು “ಸರಕಾರ ನೀಡಿದ ಪ್ರಶಸ್ತಿಯನ್ನು ತಿರಸ್ಕರಿಸುವುದು ಸರಿಯಲ್ಲ. ಇದು ಅವರ ಗುಣದ ಪ್ರತಿಬಿಂಬ’ ಎಂದರು. ಡಾ| ಶಾನುಭಾಗ್ ಅವರು ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಆದರೆ ಇಲಾಖೆಗಳೇ ಮಾಹಿತಿ ಸಂಗ್ರಹಿಸಿದ್ದವು ಎಂದು ಅವರು ಹೇಳಿದರು.
“ನನಗೂ ಕಾಳಜಿ ಇದೆ’
“ಹಿರಿಯ ನಾಗರಿಕರ ಸಮಸ್ಯೆ ಕುರಿತಾಗಿ ಡಾ| ಶಾನುಭಾಗ್ ಅವರು ಹೇಳಿದ್ದೇ ಎಲ್ಲವೂ ಸರಿಯಲ್ಲ. ತಂದೆ – ತಾಯಿ ಮತ್ತು ಮಕ್ಕಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಅಷ್ಟು ಸುಲಭದಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಆಸ್ತಿ ವಿಚಾರ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದರೆ ಅದರ ಪರಿಹಾರಕ್ಕೆ ತುಂಬಾ ಸಮಯ ಬೇಕಾಗುತ್ತದೆ. 24 ಗಂಟೆಗಳಲ್ಲಿ ಪರಿಹರಿಸಿ, 12 ಗಂಟೆಯಲ್ಲಿ ಸರಿ ಮಾಡಿ ಎಂದರೆ ಮಾಡಲು ಸಾಧ್ಯವಿಲ್ಲ. ಕಂದಾಯ ಇಲಾಖೆಯಲ್ಲಿ 13-14 ವರ್ಷಗಳ ಕಡತಗಳು ಕೂಡ ಹಾಗೆಯೇ ಬಾಕಿ ಇವೆ. ತಾಳ್ಮೆ ಬೇಕು. ಡಾ| ಶಾನುಭಾಗ್ ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ನಮ್ಮಿಬ್ಬರ ಮನೋಭಾವ ಕೂಡ ಒಂದೇ. ಆದರೆ ಅವರ ಮಾರ್ಗ ವೇಗದ್ದು. ನಮ್ಮದು ಸ್ವಲ್ಪ ನಿಧಾನವಾದದ್ದು. ನಾನೋರ್ವ ಜನಪ್ರತಿನಿಧಿಯಾಗಿ ಎಲ್ಲರ ಪತ್ರಗಳಿಗೂ ಉತ್ತರ ನೀಡುತ್ತೇನೆ. ಸಮಸ್ಯೆಗಳಿಗೂ ಸ್ಪಂದಿಸು ತ್ತೇನೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದ ಜತೆಯಲ್ಲಿ ಕನ್ನಡ ಧ್ವಜವನ್ನು ಕೂಡ ಹಾರಿಸಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ “ಮುಖ್ಯಮಂತ್ರಿಗಳ ನಿಲುವೇ ನನ್ನ ನಿಲುವು. ಅವರು ಬೆಂಗಳೂರಿನಲ್ಲಿ ಕನ್ನಡ ಧ್ವಜ ಹಾರಿಸಿದ್ದಾರೆ. ಜಿಲ್ಲೆಗೆ ಈ ಬಗ್ಗೆ ಆದೇಶ ಬಂದಿಲ್ಲ. ಬಂದಿದ್ದರೆ ಅಧಿಕಾರಿಗಳು ಇಲ್ಲಿಯೂ ಅದೇ ರೀತಿ ಮಾಡುತ್ತಿದ್ದರು’ ಎಂದು ಹೇಳಿದರು.