Advertisement

ಉಡುಪಿ ಸ್ವರ್ಣಾ ನದಿಗೆ ಸಚಿವರಿಂದ ಬಾಗಿನ ಸಮರ್ಪಣೆ

06:42 PM Oct 06, 2021 | Team Udayavani |

ಉಡುಪಿ: ಮಣಿಪಾಲ ಪೆರಂಪಳ್ಳಿ ಸಮೀಪದ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಸ್ವರ್ಣಾ ನದಿಗೆ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ದಂಪತಿ ಬಾಗಿನ ಸಮರ್ಪಿಸಿದರು.

Advertisement

ಬಳಿಕ ಮಾತನಾಡಿದ ಅವರು, ನದಿ-ಪರ್ವತಗಳನ್ನು ಆರಾಧಿಸುವುದು ನಮ್ಮ ಸಂಪ್ರದಾಯ. ಇಲ್ಲಿನ ಸ್ವರ್ಣಾ ನದಿ ವರ್ಷಪೂರ್ತಿ ಹರಿದು ಉತ್ತಮ ಬೆಳೆ ಸಿಗುವಂತಾಗಬೇಕು.

ಈಗಾಗಲೇ ಇಲ್ಲಿನ ಸ್ನಾನಘಟ್ಟಕ್ಕೆ 1 ಕೋ.ರೂ. ಮಂಜೂರಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಿ ಇದನ್ನು ಸಮೃದ್ಧಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಕಾರ್ಕಳದಲ್ಲಿ ಯಕ್ಷರಂಗಾಯಣ
ರಾಜ್ಯದಲ್ಲಿ ಒಟ್ಟು 5 ರಂಗಾಯಣಗಳು ಈಗಾಗಲೇ ಇವೆ. ದ.ಕ. ಹಾಗೂ ಉಡುಪಿ ಜಿಲ್ಲೆಗೆ ಪ್ರತ್ಯೇಕ ರಂಗಾಯಣ ಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇವೆ. ಈ ನಿಟ್ಟಿನಲ್ಲಿ ಯಕ್ಷಗಾನ, ನಾಟಕ, ನೃತ್ಯಗಳನ್ನೊಳಗೊಂಡ “ಯಕ್ಷರಂಗಾಯಣ’ವನ್ನು ಕಾರ್ಕಳದ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಆವರಣದ ಬಳಿಯ 2 ಎಕರೆ ಜಾಗದಲ್ಲಿ ನಿರ್ಮಿಸಲಾಗುವುದು. ಉಡುಪಿಯಲ್ಲಿ ಈ ಹಿಂದಿನ ಸರಕಾರ ಸೂಕ್ತ ಅನುದಾನವನ್ನು ಸೂಚಿಸದೆ ಜಿಲ್ಲಾರಂಗಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ವರ್ಷದ ಅನುದಾನದ ಲಭ್ಯತೆಯನ್ನು ನೋಡಿಕೊಂಡು ಇದನ್ನು ಮುಂದುವರಿಸಲಾಗುವುದು ಎಂದರು.

ಹಿಂದೂಗಳ ಬಾವನೆಗೆ ಧಕ್ಕೆಯಾಗದಂತೆ ಕೆಲಸ
ಸರಕಾರ ಹಿಂದೂಗಳ ಭಾವನೆಯನ್ನು ಅರ್ಥೈಸಿಕೊಂಡಿದೆ. ದತ್ತಪೀಠದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ಕೆಲಸ ಮಾಡಲಾಗುವುದು. ಕಾನೂನು,ಕಂದಾಯ, ಮುಜರಾಯಿ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಿ ದತ್ತಪೀಠದ ಬಗ್ಗೆ ಶೀಘ್ರದಲ್ಲಿ ಒಳ್ಳೆಯ ನಿರ್ಧಾರ ಪ್ರಕಟಿಸಲಾಗುವುದು ಎಂದರು.

Advertisement

ಇದನ್ನೂ ಓದಿ:ಚಿಕ್ಕಮಗಳೂರು : ಭಾರಿ ಮಳೆಗೆ ತರೀಕೆರೆ – ನೇರಲಕೆರೆ ಸಂಪರ್ಕ ಕಡಿತ

ವ್ಯಕ್ತಿನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಆರ್‌ಎಸ್‌ಎಸ್‌ ಕಲ್ಪನೆ
ವ್ಯಕ್ತಿನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಮಾಡುವುದು ಆರ್‌ಎಸ್‌ಎಸ್‌ ಕಲ್ಪನೆ. ವ್ಯಕ್ತಿನಿರ್ಮಾಣಗೊಂಡು ಪಿಡಿಒನಿಂದ ರಾಷ್ಟ್ರಪತಿಗಳ ವರೆಗೆ ಆರ್‌ಎಸ್‌ಎಸ್‌ನವರಿದ್ದಾರೆ. ರಾಷ್ಟ್ರನಿರ್ಮಾಣದ ಯೋಚನೆ ಇಲ್ಲದವರು ಇದನ್ನು ವಿರೋಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ್ದ ಐಎಎಸ್‌, ಐಪಿಎಸ್‌ನಲ್ಲಿ ಆರ್‌ಎಸ್‌ಎಸ್‌ ನವರಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

ಉಪಚುನಾವಣೆಯಲ್ಲಿ ಗೆಲುವು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಅಸ್ತಿತ್ವ ಇಲ್ಲದಂತಾಗಿದೆ. ಹಾನಗಲ್‌, ಸಿಂದಗಿಯಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌ ದಂಪತಿ, ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ಜಿಲ್ಲಾ ಧಿಕಾರಿ ಕೂರ್ಮಾ ರಾವ್‌ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಅಪರ ಜಿಲ್ಲಾ ಧಿಕಾರಿ ಸದಾಶಿವ ಪ್ರಭು, ನಗರ ಸಭೆ ಆಯುಕ್ತ ಉದಯ್‌ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶೇಷ ಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ನಗರಸಭೆ ಸದಸ್ಯರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ವಾಸುದೇವ ಭಟ್‌ ಹಾಗೂ ಹೆರ್ಗ ಹರಿಪ್ರಸಾದ್‌ ಭಟ್‌ ಪೂಜಾ ವಿಧಿವಿಧಾನ ನೆರವೇರಿಸಿದರು.

ತಲೆಗೆ ಮುಂಡಾಸು ತೊಟ್ಟ ಸಚಿವರು
ಸಚಿವರು ತಲೆಗೆ ಮುಂಡಾಸು ತೊಟ್ಟು ಯಜಮಾನಿಕೆ ಸ್ವೀಕರಿಸಿ, ಸಂಕಲ್ಪ ನೆರವೇರಿಸಿದ ಬಳಿಕ ಬಾಗಿನ ಅರ್ಪಿಸಿ ಮಂಗಳಾರತಿ ಮಾಡಿದರು. ಸುವರ್ಣೆಗೆ ಹಾಲು, ಗಂಧೋದಕ, ಅರಶಿನ ಕುಂಕುಮ, ರಜತ ಮಾಂಗಲ್ಯ, ಪುಷ್ಪ, ಸೀರೆ, ಲಡ್ಡು, ತಾಂಬೂಲ ದಕ್ಷಿಣೆಗಳನ್ನು ಸಚಿವರು ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next