ಧಾರವಾಡ: ಡೈರಿ ಪ್ರಕರಣದ ಕುರಿತಂತೆ ಬಿಜೆಪಿ ಪಕ್ಷದಿಂದ ನಗರದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಹಣ ಲೂಟಿ ಮಾಡಿ ಕಾಂಗ್ರೆಸ್ ಕೈ ಕಮಾಂಡ್‌ಗೆ ಕಪ್ಪ ಸಲ್ಲಿಸಿದ್ದು ಇದೀಗ ಬಹಿರಂಗವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಇದಲ್ಲದೇ ಕಾಂಗ್ರೆಸ್‌ನ ಎಲ್ಲ ಸಚಿವ, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಲಾಯಿತು.
ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ಬಿಜೆಪಿ ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಸಚಿವರ ಮನೆ ಎದುರು ಪ್ರತಿಭಟನೆ ನಡೆಸಿದ್ದು, ಅಲ್ಲದೇ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ತಡೆದ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿ ಸಂಭವಿಸಿದವು.
ಕೊನೆಗೆ ರಸ್ತೆಯಲ್ಲೇ ಧರಣಿ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಧಿಸಿ ಕರೆದೊಯ್ದು ಬಿಡುಗಡೆ ಮಾಡಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಶಂಕರ ಶಳಕೆ, ಮಲ್ಲಿಕಾರ್ಜುನ ಹೊರಕೇರಿ, ಶಿವಾನಂದ ಮುತ್ತಣ್ಣವರ, ಪೂರ್ಣಾ ಪಾಟೀಲ,
ಮುಖಂಡರಾದ ಈರೇಶ ಅಂಚಟಗೇರಿ, ನಾಗರಾಜ ನಾಯಕ, ಮಹೇಂದ್ರ ಕೌತಾಳ, ಶರಣು ಅಂಗಡಿ, ವಿಜಯಾನಂದ ಶೆಟ್ಟಿ, ಪ್ರಕಾಶ ಗೋಡಬೋಲೆ, ಅರವಿಂದ ಏಗನಗೌಡರ, ಶ್ರೀನಿವಾಸ ಕೋಟ್ಯಾನ, ಈರಣ್ಣ ಹಪ್ಪಳಿ, ಇತರರು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸಚಿವರ ಮನೆ ಎದುರು ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.