ಉಡುಪಿ: ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಕೆಲವೇ ವ್ಯಕ್ತಿಗಳಿಗೆ, ತಂಡಕ್ಕೆ ಸೀಮಿತವಾಗಿದ್ದ ಟ್ರಸ್ಟ್‌ಗಳನ್ನು ಪುನಾರಚನೆ ಮಾಡಿದ್ದೇವೆ. ಡಿಸೆಂಬರ್‌ನಲ್ಲಿಯೇ ಪಟ್ಟಿ ತಯಾರಿಸಲಾಗಿತ್ತು. ಬುಧವಾರ ಸರಕಾರದ ಅನುಮೋದನೆ ಸಿಕ್ಕಿತ್ತು. ಮರಣ ಹೊಂದಿದ ಇಬ್ಬರ ಹೆಸರು ಪಟ್ಟಿಯಲ್ಲಿ ಸೇರಿ ಸಣ್ಣ ಪ್ರಮಾದವಾಗಿತ್ತು. ಈ ಬಗ್ಗೆ ವಿಷಾದಿಸುತ್ತೇನೆ. ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ, ಯಾರು ಬೇಡ ಎಂದಿದ್ದಾರೋ ಅವರನ್ನು ಕೈ ಬಿಟ್ಟು ಹೊಸಬರಿಗೆ ಆದ್ಯತೆ ನೀಡಲಿದ್ದೇವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಿ ಸರಿಪಡಿಸುವ ಉದ್ದೇಶದಿಂದ ಆದೇಶ ಹಿಂಪಡೆದಿದ್ದೇವೆ. ಸೋಮವಾರದೊಳಗೆ ಎರಡು ಮೂರು ಜನರ ಹೆಸರು ಸೇರಿಸಿಕೊಂಡು ಎಲ್ಲ ಟ್ರಸ್ಟ್‌ಗಳನ್ನು ಮತ್ತೆ ರಚಿಸಲಿದ್ದೇವೆ. ಯಾರಿಗೆ ಆಸಕ್ತಿ ಇಲ್ಲವೋ ಅವರನ್ನು ಕೈ ಬಿಡಲಾಗುವುದು ಎಂದರು.
ಸೂಕ್ತ ದೂರು ನೀಡಿದರೆ ತನಿಖೆ ನಡೆಸಲು ಸಿದ್ಧ:
ಗುತ್ತಿಗೆದಾರರು ನಿರ್ದಿಷ್ಟ ದೂರನ್ನು ಸಂಬಂಧ ಪಟ್ಟ ತನಿಖಾ ಸಂಸ್ಥೆಗೆ ನೀಡಬೇಕಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಳಿ ದೂರು ಕೊಟ್ಟು ಹೊರಬಂದು ಮಾತನಾಡಿದ್ದಾರೆ. ಮುಖ್ಯಮಂತ್ರಿಯವರೇ ಲೋಕಾಯುಕ್ತಕ್ಕೆ ದೂರು ನೀಡಿ ಎಂದರೂ ಇವರು ದೂರು ನೀಡಲು ತಯಾರಿಲ್ಲ. ಯಾವುದನ್ನು ಸಿದ್ದರಾಮಯ್ಯ ಹೇಳಬೇಕಾಗಿತ್ತೋ ಅದನ್ನು ಕೆಂಪಣ್ಣನವರ ಮೂಲಕ ಹೇಳಿಸಿದ್ದಾರೆ. ಇದು ಕೇವಲ ಚುನಾವಣೆ ವೇಳೆ ಗಾಳಿಯಲ್ಲಿ ಹೊಡೆದಿರುವ ಗುಂಡು ಎಂದರು.
ಈ ಹಿಂದೆ ಗೋವಿಂದರಾಜು ಡೈರಿಯಲ್ಲಿ ಯಾರಿಗೆ ದುಡ್ಡು ಕೊಟ್ಟಿದೆ ಎಂದು ನಮೂದಿಸಲಾಗಿತ್ತು ಎಂಬುದನ್ನು ಬಹಿರಂಗಪಡಿಸಿ. ಅದೇ ಗೋವಿಂದರಾಜು ಅವರನ್ನು ಹಿಡಿದುಕೊಂಡು ಸಿದ್ದರಾಮಯ್ಯ ಅವರು ಓಡಾಡುತ್ತಿಲ್ಲವೇ? ಕಾಂಗ್ರೆಸ್ ಹೈಕಮಾಂಡಿಗೆ ದುಡ್ಡು ನೀಡುವ ವಿಚಾರ ಡೈರಿಯಲ್ಲಿತ್ತು. ಇಂದಿರಾ ಕ್ಯಾಂಟೀನ್ ಹಣದಲ್ಲಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡುವ ಬಗ್ಗೆ ಕಾಂಗ್ರೆಸ್‌ನವರೇ ಆರೋಪಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ. ಡಿನೋಟಿಫಿಕೇಶನ್ ಹಗರಣ, ಮಹದೇವಪ್ಪ ಮೇಲೆ ಆರೋಪ ಬಂದಾಗ, ಜಯಮಾಲಾ ಪ್ರಕರಣ ನಡೆದಾಗ ಸಿದ್ದರಾಮಯ್ಯಗೆ ಜ್ಞಾನೋದಯ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಫಲಾನುಭವಿಗಳ ದೊಡ್ಡ ಸಭೆ:
ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಭೆ ನಡೆಸಲಿದ್ದೇವೆ. ದ.ಕ. ಜಿಲ್ಲೆಯಲ್ಲಿ ಸುಮಾರು 3,800 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 1 ಲಕ್ಷ ಫಲಾನುಭವಿಗಳನ್ನು ಸೇರಿಸಲು ಪೂರ್ವ ಸಿದ್ಧತೆ ಮಾಡಿದ್ದೇವೆ. ಎಲ್ಲ ಸಾರ್ವಜನಿಕರು ಮಧ್ಯಾಹ್ನ 2 ಗಂಟೆಯೊಳಗೆ ಮೈದಾನ ತಲುಪಬೇಕು ಎಂದು ಹೇಳಿದರು.
ಮಲ್ಪೆ ಬಂದರು ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟದಲ್ಲಿ 49 ಕೋ.ರೂ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಕಾರ್ಕಳ, ಕಾಪುವಿನ ಜಲ್‌ಜೀವನ್ ಮಿಷನ್ ಯೋಜನೆಯಡಿ 1,600 ಕೋ. ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.