Advertisement

ಕೊತ್ತಲವಾಡಿ ಗ್ರಾಮದಲ್ಲಿ ಸಚಿವ ವಿ.ಸೋಮಣ್ಣ ರೋಡ್‌ ಶೋ

03:00 PM Apr 30, 2023 | Team Udayavani |

ಚಾಮರಾಜನಗರ: ವರುಣ ಕ್ಷೇತ್ರದ ಅವ್ಯವಸ್ಥೆ , ರಸ್ತೆಗಳು ಹೇಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಿ ನೋಡಲಿ ಎಂದು ವರುಣ ಮತ್ತು ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಹಾಗೂ ಸಚಿವ ವಿ. ಸೋಮಣ್ಣ ಟೀಕಿಸಿದರು.

Advertisement

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕೊತ್ತಲವಾಡಿ, ಕಟ್ನವಾಡಿ, ಉಗನೇದಹುಂಡಿ ಮತ್ತಿತರ ಗ್ರಾಮಗಳಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ರೋಡ್‌ ಶೋ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ, ಅದೆಷ್ಟು ಚೆನ್ನಾಗಿ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ. ಯಾವ ರೀತಿ ಜನರು ಒದ್ದಾಡುತ್ತಿದ್ದಾರೆ ಎಂಬುದನ್ನು ನೋಡಲಿ. ನಾನು ಒಬ್ಬನೇ ಅವರ ಜೊತೆಗೆ ಬರ್ತೀನಿ ಹೋಗೋಣ, ಸಿದ್ದರಾಮಯ್ಯ ಕರೆದ್ರೆ ಹೋಗಲೂ ಸಿದ್ಧ, ಹೋಗಿ ಸುತ್ತಾಡೋಣ ಎಂದು ಸವಾಲು ಹಾಕಿದರು.

ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನ್ಸಿದ್ರೆ, ಅವರಿಗೆ ನಮಸ್ಕಾರ ಮಾಡಿ ನಾನು ಏನೂ ಮಾತಾಡಲ್ಲ. ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ, ಎಲ್ಲವನ್ನೂ ಜನರು ತೀರ್ಮಾನ ಮಾಡ್ತಾರೆ, ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಬಿಟ್ಟು, ವಾಸ್ತವಾಂಶಕ್ಕೆ ಗಮನ ಕೊಟ್ರೆ ಒಳ್ಳೆಯದು ಎಂದು ಸಲಹೆ ನೀಡಿದರು.

ವರುಣಾ ದಲ್ಲಿ ಪ್ರಚಾರಕ್ಕೆ ಅಡ್ಡಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಒಂದು ದಿನ ಅಲ್ಲ,ದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಮುಖ್ಯ ಮಂತ್ರಿಗೆ ಮುಜುಗರವಾಗಬಾರದೆಂದು ಸಹಿಸಿ ಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಅಸಮಾಧಾನ ಹೊರಹಾಕಿದರು.

ಸಂಸದ ಪ್ರತಾಪ್‌ ಸಿಂಹ ಅವರೇ ಗಲಾಟೆಗೆ ಕಾರಣ ಎಂಬ ಆರೋಪಗಳಿವೆ ಎಂಬ ಪ್ರಶ್ನೆಗೆ ಸೋಮಣ್ಣ ಉತ್ತರಿಸಿ, ಪ್ರತಾಪ್‌ ಸಿಂಹ ಜವಾಬ್ದಾರಿ ಯುತ ಲೋಕಸಭಾ ಸದಸ್ಯ. ಆತ ನಂಗೆ ಸಹೋದರನ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ. ಸಿದ್ದರಾಮಯ್ಯ ಕಡೆಯವರೇ ಜಗಳ ಮಾಡಿಸ್ತಿ ರೋದು,ಅವರು ಬಿಟ್ರೆ ಬೇರೆ ಯಾರೂ ಇಲ್ಲ, ನ್ಯಾಯಸಮ್ಮತ ಚುನಾವಣೆ ನಡೆಯಲಿ, 10ನೇ ತಾರೀಖು ತೀರ್ಮಾನ ಹೊರಬೀಳುತ್ತದೆ ಎಂದರು.

Advertisement

ಇದೇ ವೇಳೆ, ವರುಣಾದಲ್ಲಿ ಗಲಾಟೆ ಮಾಡಿಸಿದ್ದು ಸೊಮಣ್ಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿ, ಸಿದ್ದರಾಮಯ್ಯ ಮತ್ತೇ ಯಾಕೆ ಈ ರೀತಿ ಮಾತನಾಡಿ ಚಿಕ್ಕವರಾಗ್ತಿದ್ದಾರೆ ಗೊತ್ತಿಲ್ಲ,ನಾವೇನೂ ಕಾಲು ಕರೆದುಕೊಂಡು ಹೋಗಿರಲಿಲ್ಲ,ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ, ಆಚೆಗೆ ಹೋಗಬಾರದು ಅಂತಾರೆ ಇವೆಲ್ಲ ಮಾಡುತ್ತಿರುವುದು ಒಂದೇ ವರ್ಗದ ಜನ ಎಂದು ಕಿಡಿಕಾರಿದರು.

ನಮಗೆ ಹುಚ್ಚು ಹಿಡಿದಿದ್ದೀಯಾ, ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ, ನೀವೂ ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು, ಪೊಲೀಸ್‌ ನವರಿಗೆ ಹಿಡಿದುಕೊಟ್ಟರೇ ಅವರು ಬಿಟ್ಟು ಕಳಿಸ್ತಾರೆ, ಗಲಾಟೆ ಮಾಡಿದವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು. ಏನಾದ್ರೂ ಪಿತೂರಿ ಮಾಡಲಿ, ಭಗವಂತ, ಚಾಮುಂಡಿ ತಾಯಿ ಇದ್ದಾರೆ,ಅಲ್ಲದೇ ಕ್ಷೇತ್ರದ ಜನರಿದ್ದಾರೆ, ನನ್ನ ಸೇವೆ ಬೇಕು ಅಂದ್ರೆ ಕ್ಷೇತ್ರದ ಜನರು ಸಹಾಯ ಮಾಡ್ತಾರೆ,ಮಾಡೆª ಇದ್ರೆ ನಂಗೇನೂ ಬೇಜಾರು ಇಲ್ಲ ಎಂದರು.

ಬಿಜೆಪಿ ಮುಖಂಡರಾದ ಕೆ.ಆರ್‌. ಮಲ್ಲಿಕಾರ್ಜುನಪ್ಪ, ಎಂ. ರಾಮಚಂದ್ರ, ನಾಗಶ್ರೀ ಪ್ರತಾಪ್‌, ಯು.ಎಂ. ಪ್ರಭುಸ್ವಾಮಿ, ವಕೀಲ ಚಿನ್ನಸ್ವಾಮಿ, ಕೆ. ವೀರಭದ್ರಸ್ವಾಮಿ, ರೂಪಾ, ಅರಕಲವಾಡಿ ಮಹೇಶ್‌, ಕಿಲಗೆರೆ ಶಶಿಕುಮಾರ್‌, ಕೊತ್ತಲವಾಡಿ ಕುಮಾರ, ಮಾದಪ್ಪ, ಆನಂದ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next