ಬಾಗಲಕೋಟೆ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತಿದ್ದು, ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಅನುಸರಿಸುತ್ತಿದೆ. ಇದಕ್ಕೆ ಎಲ್ಲ ಸಹಕಾರ ಅಗತ್ಯವಾಗಿದೆ. ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿಗಳು, ಫ್ರಂಟ್‌ಲೆçನ್ ವರ್ಕರ್ ಹಾಗೂ 45 ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲ ಖಾಯಿಲೆಗಳುಳ್ಳ 2.46 ಲಕ್ಷ ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. 2ನೇ ಹಂತದಲ್ಲಿ 53269 ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್ ಸೇರಿ ಒಟ್ಟು 2.99 ಲಕ್ಷ ಜನರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 6 ಸರಕಾರಿ ಹಾಗೂ 33 ಖಾಸಗಿ ಆಸ್ಪತ್ರೆಗಳಲ್ಲಿನ ಲಭ್ಯವಿರುವ ಬೆಡ್‌ಗಳ ಮಾಹಿತಿಯನ್ನು ಎನ್‌ಐಸಿ ಪೋರ್ಟಲ್‌ನಲ್ಲಿ ಪ್ರತಿದಿನ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1859 ವಿವಿಧ ಬೆಡ್‌ಗಳ ಪೈಕಿ 1442 ಬೆಡ್ ಬಳಕೆಯಾಗುತ್ತಿದ್ದು, ಇನ್ನು 417 ಬೆಡ್‌ಗಳು ಚಿಕಿತ್ಸೆಗೆ ಲಭ್ಯವಿರುತ್ತವೆ. ವಿವಿಧ ಬೆಡ್‌ಗಳ ಲಭ್ಯತೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನ 24 ಗಂಟೆಗಳ ಕಾಲ ಕೋವಿಡ್ ವಾರ್ ರೂಮ್ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಸೇರಿ ಒಟ್ಟು 10 ಸಿಸಿಸಿ ಕೇಂದ್ರಗಳನ್ನು ತೆರೆಯಲಾಗಿದ್ದು, 866 ಬೆಡ್‌ಗಳ ಪೈಕಿ 664 ಬೆಡ್‌ಗಳು ಖಾಲಿ ಇರುತ್ತವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಪ್ರತಿದಿನ 18 ರಿಂದ 19 ಕೆಎಲ್ ಆಕ್ಸಿಜನ್ ಅವಶ್ಯವಿದ್ದು, 17 ರಿಂದ 18 ಕೆ.ಎಲ್ ಆಕ್ಸಿಜನ್ ಸದ್ಯ ಸಿಗಿಕೇರಿ ಕ್ರಾಸ್‌ನಲ್ಲಿರುವ ಎಚ್.ಎಸ್. ಕಂಠಿ ಇಂಡಸ್ಟ್ರೀಜ್ ಪ್ರಾವೈಟ್ ಲಿಮಿಟೆಡ್ ನಿಂದ ಪೂರೈಕೆಯಾಗುತ್ತಿದೆ. ಆಕ್ಸಿಜನ್ ಕೊರತೆಯಾಗದಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ಬಳಸಾಗುತ್ತಿದೆ. ಅಲ್ಲದೇ ಪ್ರತಿದಿನ 150 ರಿಂದ 200 ವರೆಗೆ ರೆಮ್‌ಡಿಸಿವಿಯರ್ ಚುಚ್ಚುಮದ್ದು ಅವಶ್ಯಕತೆಯಿದ್ದು, ಇಲ್ಲಿವರೆಗೆ 7128 ರೆಮ್‌ಡಿಸಿವಿಯರ್ ಚುಚುಮದ್ದು ಸ್ವೀಕೃತವಾಗಿದ್ದು, ಆಯವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ತಿಳಿಸಿದರು.
ಕರ್ಫ್ಯೂ ಮತ್ತು ಲಾಕ್‌ಡೌನ್ ಅವಧಿಯಲ್ಲಿ 5861 ಜನ ವಲಸಿಗರು ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ 542 ಜನರಿಗೆ ಸೋಂಕು ತಗುಲಿದ್ದು, ಕಂಡುಬಂದಿದ್ದು, ಅವರನ್ನು ಹೋಮ್ ಐಸೋಲೇಷನ್‌ದಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸದ 80,601 ಜನರಿಗೆ ಒಟ್ಟು 77.62 ಲಕ್ಷ ರೂ.ಗಳ ದಂಡ ವಿಧಿಸಿ 29 ಪ್ರಕರಣ ದಾಖಲಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘನೆಯಡಿ 7390 ವಾಹನ ಜಪ್ತ ಮಾಡಲಾಗಿದೆ. ಮದುವೆಗಳಿಗೂ ಅನುಮತಿ ನಿಷೇಧಿಸಲಾಗಿರುತ್ತದೆ ಎಂದು ತಿಳಿಸಿದರು.
ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಿವಿವ ಸಂಘದಿಂದ ವೈದ್ಯರನ್ನು ನೀಡಲಾಗಿದ್ದು, ಇಬ್ಬರು ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನೊಳಗೊಂಡ ತಂಡವನ್ನು ರಚಿಸಿ ಗ್ರಾಮದ ಜನರ ತಪಾಸಣೆ ಕೈಗೊಳ್ಳಲಾಗುತ್ತಿದೆ. ಕೆಮ್ಮು, ನೆಗಡಿ, ಜ್ವರ ಇದ್ದವರಿಗೆ ಮೆಡಿಶಿನ್ ಕಿಟ್ ನೀಡಲಾಗುತ್ತಿದೆ. ಇದರಿಂದ ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ. ಬರುವ ಜುಲೈ ಮತ್ತು ಅಕ್ಟೋಬರ್ ಒಳಗಾಗಿ ಎಲ್ಲರಿಗೂ ಲಸಿಕೆ ದೊರೆಯುವಂತೆ ಕೇಂದ್ರ ಸರಕಾರ ಕ್ರಮವಹಿಸುತ್ತಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಿಜೆಪಿ ಬೆಳಗಾವಿ ವಿಭಾಗ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ನರೇಂದ್ರ ಕುಪ್ಪಸ್ತ ಮುಂತಾದವರು ಉಪಸ್ಥಿತರಿದರು.